ಕೇರಳದ (Kerala) ಶಾಲೆಗಳಲ್ಲಿ ಜೆಂಡರ್ ನ್ಯೂಟ್ರಲ್ ಸಮವಸ್ತ್ರದ (gender neutral uniforms)ಕಲ್ಪನೆಯು ವೇಗವನ್ನು ಪಡೆಯುವುದರೊಂದಿಗೆ, ಎಡರಂಗ ಸರ್ಕಾರವು ಶಾಲಾ ಮಕ್ಕಳ ಮೇಲೆ ಆಧುನಿಕ ಉಡುಗೆ ಪರಿಕಲ್ಪನೆಯನ್ನು ಒತ್ತಾಯಿಸುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ (Muslim community)ಒಂದು ವಿಭಾಗವು ಅದನ್ನು ವಿರೋಧಿಸಲು ಪ್ರಾರಂಭಿಸಿದೆ. ರಾಜ್ಯದಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಶಾಲೆಗಳು ಜೆಂಡರ್ ನ್ಯೂಟ್ರಲ್ ಯುನಿಫಾರ್ಮ್ ಮಾಡಿದಾಗ ಪ್ರತಿಭಟನೆಗಳು ಭುಗಿಲೆದ್ದವು. ಅನೇಕ ಮಹಿಳಾ ಸಂಘಟನೆಗಳು ಹೊಸ ಉಪಕ್ರಮವನ್ನು ಶ್ಲಾಘಿಸಿ, ಇದು ಲಿಂಗ ತಾರತಮ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಬುಧವಾರ ಕೋಯಿಕ್ಕೋಡ್ ಜಿಲ್ಲೆಯ ಬಾಲುಶ್ಶೇರಿಯಲ್ಲಿ (Balussery) ಮುಸ್ಲಿಂ ಕೋ-ಆರ್ಡಿನೇಷನ್ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಯಿತು. ಬಾಲುಶ್ಶೇರಿಯಲ್ಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬುಧವಾರದಿಂದ ಬಾಲಕ-ಬಾಲಕಿಯರ ಸಮವಸ್ತ್ರದ ಭಾಗವಾಗಿ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ತೊಟ್ಟು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು . 10 ನೇ ತರಗತಿಯಿಂದ ಉನ್ನತ ತರಗತಿಗಳಲ್ಲಿ ಹೊಸ ಸಮವಸ್ತ್ರ ಮಾದರಿಯನ್ನು ಪರಿಚಯಿಸಲಾಯಿತು. ರಾಜ್ಯ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.
ಇದು ಸ್ವಾಗತಾರ್ಹ ಕ್ರಮವಾಗಿದೆ. ಜಗತ್ತು ಲಿಂಗ ನ್ಯಾಯ ಮತ್ತು ಸಮಾನತೆಯ ಯುಗವನ್ನು ಘೋಷಿಸುತ್ತಿರುವ ಈ ಸಮಯದಲ್ಲಿ, ಅಂತಹ ಕ್ರಮಗಳು ಲಿಂಗ ತಾರತಮ್ಯವನ್ನು ಕಡಿಮೆ ಮಾಡಲು ಸರಿಯಾದ ನಿರ್ದೇಶನವನ್ನು ನೀಡುತ್ತವೆ ಎಂದು ಸಚಿವರು ಹೊಸ ಉಪಕ್ರಮವನ್ನು ಮುಕ್ತವಾಗಿ ಸ್ವಾಗತಿಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಮಕ್ಕಳನ್ನು ಪ್ರೀತಿಸುವ ಜನರು ಇಂತಹ ಪ್ರಗತಿಪರ ಹೆಜ್ಜೆಯನ್ನು ವಿರೋಧಿಸುವುದಿಲ್ಲ ಎಂದು ಅವರು ಹೇಳಿದರು. ನಾವು ಹೊಸ ನಡೆಯನ್ನು ಪ್ರಾರಂಭಿಸಿದಾಗ ವಿರೋಧವು ಸಹಜ. ಆದರೆ ಸರ್ಕಾರವು ಅಂತಹ ಉಪಕ್ರಮಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸುತ್ತದೆ ಎಂದು ಅವರು ಹೇಳಿದರು.
ವಿರೋಧವೇಕೆ?
ಆದರೆ ಹೊಸ ನಿಯಮವು ವಿದ್ಯಾರ್ಥಿನಿಯರು ತಮಗೆ ಬೇಕಾದುದನ್ನು ಧರಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಭಟನಾಕಾರರು ಹೇಳುತ್ತಾರೆ. ಅಂದಹಾಗೆ ಪ್ರತಿಭಟನೆಯಲ್ಲಿ ಮಹಿಳೆಯರು ಯಾರೂ ಇರಲಿಲ್ಲ. ಅನೇಕ ವಿದ್ಯಾರ್ಥಿನಿಯರು ಯುನಿಸೆಕ್ಸ್ ಡ್ರೆಸ್‌ನೊಂದಿಗೆ ಆರಾಮದಾಯಕವಾಗಿದ್ದಾರೆ ಎಂದು ಹೇಳಿದರು. “ಇದು ಸ್ವಾಗತಾರ್ಹ ಉಪಕ್ರಮವಾಗಿದೆ ಮತ್ತು ಹೆಣ್ಣು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆರ್ಥೊಡಾಕ್ಸ್ ವಿಭಾಗಗಳಿಗೆ ಷರತ್ತುಗಳನ್ನು ನಿರ್ದೇಶಿಸುವ ಹಕ್ಕಿಲ್ಲ, ”ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ವಿಜಿ ಪಲೋತ್ತೋಡಿ ಹೇಳಿದರು.ಸೇಲ್ಸ್ ಗರ್ಲ್ಸ್ ಕರ್ತವ್ಯದಲ್ಲಿರುವಾಗ ಕುಳಿತುಕೊಳ್ಳುವ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು ವಿಜಿ.
ಆದಾಗ್ಯೂ, ಪ್ರತಿಭಟನಾಕಾರರು, ಈ ಕ್ರಮವು ಪ್ರಜಾಪ್ರಭುತ್ವ ವಿರೋಧಿ. ಹೆಣ್ಣು ಮಕ್ಕಳು ಬಯಸಿದ ಉಡುಗೆಯನ್ನು ಧರಿಸುವ ಹಕ್ಕನ್ನು ಅತಿಕ್ರಮಣ ಮಾಡಲಾಗಿದೆ ಎಂದಿದ್ದಾರೆ. ಆದರೆ ರಾಜ್ಯದ ಹಲವು ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಸಾಕಷ್ಟು ಪ್ರಚಲಿತದಲ್ಲಿರುವ ಬುರ್ಖಾ ಅರಬ್ ಉಡುಗೆ ಸಂಸ್ಕೃತಿಗೆ ಹೊಸ ವ್ಯವಸ್ಥೆಯು ಅಡ್ಡಿಯಾಗಲಿದೆ ಎಂದು ಸಾಂಪ್ರದಾಯಿಕ ವಿಭಾಗಗಳು ಜಾಗರೂಕರಾಗಿದ್ದಾರೆ ಎಂದು ಅನೇಕ ವಿದ್ಯಾರ್ಥಿನಿಯರು ಹೇಳಿದ್ದಾರೆ. “ಅವರು ನಮ್ಮನ್ನು ಬುರ್ಖಾ ಬಳಸಲು ಒತ್ತಾಯಿಸುತ್ತಿದ್ದಾರೆ ಮತ್ತು ಅವರ ಹಿಡಿತವು ಕಣ್ಮರೆಯಾಗುತ್ತದೆ ಎಂದು ಅವರು ಭಯಪಡುತ್ತಾರೆ. ಇದು ಯೋಗ್ಯವಾದ ಉಡುಗೆ ಮತ್ತು ಹುಡುಗಿಯರು ಹಿಜಾಬ್ (ಶಿರವಸ್ತ್ರ) ಧರಿಸಬಹುದುಎಂದು ಮುಸ್ಲಿಂ ವಿದ್ಯಾರ್ಥಿಯೊಬ್ಬರು ಹೇಳಿದರು.
ಪೋಷಕರು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಆರ್ ಇಂದೂ ತಿಳಿಸಿದ್ದಾರೆ. ಧಾರ್ಮಿಕ ಕಾರಣಗಳಿಂದ ಶಾಲು ಅಥವಾ ಮಫ್ಲರ್ ಧರಿಸಲು ಬಯಸುವ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಶಾಲೆಯ ಕಡೆಯಿಂದ ಯಾವುದೇ ಬಲವಂತವಿಲ್ಲ ಮತ್ತು ಹೊಸ ಉಪಕ್ರಮಕ್ಕೆ ಎಲ್ಲರೂ ಬೆಂಬಲಿಸಬೇಕೆಂದು ಅವರು ಹೇಳಿದರು.
“ಉನ್ನತ ತರಗತಿಗಳಲ್ಲಿ ಸುಮಾರು 200 ಹುಡುಗಿಯರು ಮತ್ತು 60 ಹುಡುಗ ವಿದ್ಯಾರ್ಥಿಗಳಿದ್ದಾರೆ. ಕೆಲವು ಹುಡುಗಿಯರು ಪ್ಯಾಂಟ್ ಮತ್ತು ಶರ್ಟ್ ಧರಿಸಲು ಒತ್ತಾಯಿಸುತ್ತಾರೆ. ಅಂತಹ ವ್ಯವಸ್ಥೆಯನ್ನು ಪರಿಚಯಿಸುವ ಮೊದಲು ಯಾವುದೇ ಚರ್ಚೆ ಇರಲಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಉದಾರವಾದಿ ಸಿದ್ಧಾಂತಗಳನ್ನು ಹೇರುವ ಭಾಗವಾಗಿದೆ ಎಂದು ಮುಸ್ಲಿಂ ಸಮನ್ವಯ ಸಮಿತಿಯ ವಕ್ತಾರರು ಹೇಳಿದ್ದಾರೆ. ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್, ಮುಸ್ಲಿಂ ಲೀಗ್‌ನ ಯುವ ಘಟಕ ಸೇರಿದಂತೆ ಹಲವು ಸಂಘಟನೆಗಳು ಇದರ ಭಾಗವಾಗಿದೆ. ಸರ್ಕಾರ ಈ ಕ್ರಮಕ್ಕೆ ಒತ್ತಾಯಿಸಿದರೆ ತಮ್ಮ ಸಂಘಟನೆಯು ರಾಜ್ಯದ ಇತರ ಭಾಗಗಳಿಗೆ ಪ್ರತಿಭಟನೆಯನ್ನು ವಿಸ್ತರಿಸುತ್ತದೆ ಎಂದು ಅವರು ಹೇಳಿದರು.
ಕೇರಳದ ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಏಕರೂಪದ ಸಮವಸ್ತ್ರವನ್ನು ಜಾರಿಗೆ ತರಲು ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ. ಅನಗತ್ಯ ವಿವಾದ ಬೇಡ ಎಂದು ಕೇರಳದ ಶಿಕ್ಷಣ ಸಚಿವ ಶಿವನ್‌ಕುಟ್ಟಿ ಹೇಳಿದ್ದಾರೆ.ಬಾಲುಶ್ಶೇರಿ GGHSS ಜೆಂಡರ್ ನ್ಯೂಟ್ರಲ್ ಸಮವಸ್ತ್ರದ ಪರಿಕಲ್ಪನೆಯನ್ನು ಜಾರಿಗೆ ತಂದ ರಾಜ್ಯದ ಮೊದಲ ಹೈಯರ್ ಸೆಕೆಂಡರಿ ಶಾಲೆಯಾಗಿದೆ.
ಎರ್ನಾಕುಲಂ ಜಿಲ್ಲೆಯ ವಳಯಂಚಿರಂಗರ ಸರ್ಕಾರಿ ಶಾಲೆಯು 2017 ರಲ್ಲಿ ಯುನಿಸೆಕ್ಸ್ ಸಮವಸ್ತ್ರ ಪರಿಚಯಿಸಿದ್ದು ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಯರ ಆತ್ಮವಿಶ್ವಾಸ ಹೆಚ್ಚಿಸಿದ ಜೆಂಡರ್-ನ್ಯೂಟ್ರಲ್ ಸಮವಸ್ತ್ರ: ದೇಶದ ಗಮನ ಸೆಳೆದಿದೆ ಕೇರಳ ಶಾಲೆಯ ಈ ನಿರ್ಧಾರ
Published On - 11:29 am, Thu, 16 December 21