AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಗೋವಾದ ನೈಟ್​​ಕ್ಲಬ್​​ನಲ್ಲಿ ಭೀಕರ ಅಗ್ನಿ ದುರಂತ: 25 ಮಂದಿ ಸಾವು

ಉತ್ತರ ಗೋವಾದ ಅರ್‌ಪೋರಾ ನೈಟ್‌ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಮಂದಿ ದುರ್ಮರಣ ಹೊಂದಿದ್ದಾರೆ. ಮಧ್ಯರಾತ್ರಿ ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವೇ ಅವಘಡಕ್ಕೆ ಕಾರಣವಾಗಿದೆ. ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ಹೆಚ್ಚಿನ ಸಾವು-ನೋವಿಗೆ ಮುಖ್ಯ ಕಾರಣ ಎನ್ನಲಾಗಿದ್ದು, ಗೋವಾ ಸಿಎಂ ತನಿಖೆಗೆ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಉತ್ತರ ಗೋವಾದ ನೈಟ್​​ಕ್ಲಬ್​​ನಲ್ಲಿ ಭೀಕರ ಅಗ್ನಿ ದುರಂತ: 25 ಮಂದಿ ಸಾವು
ನೈಟ್​​ಕ್ಲಬ್​​ನಲ್ಲಿ ಅಗ್ನಿ ದುರಂತImage Credit source: Google
ಪ್ರಸನ್ನ ಹೆಗಡೆ
|

Updated on:Dec 07, 2025 | 10:10 AM

Share

ಗೋವಾ, ಡಿಸೆಂಬರ್​​ 07: ಉತ್ತರ ಗೋವಾದ ಅರ್‌ಪೋರಾದಲ್ಲಿರುವ ನೈಟ್​​ ಕ್ಲಬ್‌ನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 25 ಜನ ದುರ್ಮರಣ ಹೊಂದಿದ್ದಾರೆ. ಮಧ್ಯರಾತ್ರಿ ಅಡುಗೆ ಮನೆಯಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ನೈಟ್​​ ಕ್ಲಬ್ ಹೊತ್ತಿ ಉರಿದಿದೆ. ಈ ವೇಳೆ ಹಲವರು ಸಜೀವ ದಹನವಾಗಿದ್ದರೆ, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಆ ಪೈಕಿ ಮೂವರು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. ಮೃತರಲ್ಲಿ ಮೂರರಿಂದ ನಾಲ್ಕು ಮಂದಿ ಪ್ರವಾಸಿಗರು ಕೂಡ ಇರುವ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನೈಟ್‌ಕ್ಲಬ್​​ನಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರೋದೇ ಹೆಚ್ಚಿನ ಅವಘಡಕ್ಕೆ ಕಾರಣವಾಗಿದೆ. ಗೋವಾ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಅರ್‌ಪೋರಾ ಗ್ರಾಮದಲ್ಲಿ ಈ ಜನಪ್ರಿಯ ನೈಟ್​​ಕ್ಲಬ್​​​ ಕಳೆದ ವರ್ಷ ಆರಂಭವಾಗಿತ್ತು. ಎಲ್ಲ 23 ಶವಗಳನ್ನು ಘಟನಾ ಸ್ಥಳದಿಂದ ಹೊರತೆಗೆಯಲಾಗಿದ್ದು, ಬಾಂಬೊಲಿಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ್ದು, ಇಡೀ ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅಗ್ನಿ ಅವಘಡ; ಎರಡೂ ಮಹಡಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ, 3ನೇ ಫ್ಲೋರ್​ನಲ್ಲಿದ್ದ ಕುಟುಂಬ ಬಚಾವ್​ ಆಗಿದ್ದೇ ರೋಚಕ

ಗೋವಾ ಸಿಎಂ ಸಂತಾಪ

ಅಗ್ನಿ ದುರಂತದ ವಿಚಾರ ತಿಳಿದು ತುಂಬಾ ನೋವಾಗಿದೆ ಎಂದು ಹೇಳಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ. ಅಲ್ಲದೆ, ನೈಟ್​​ಕ್ಲಬ್ ಅಗ್ನಿ ದುರಂತದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದು, ಶೀಘ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ

ಗೋವಾ ಅಗ್ನಿ ದುರಂತದ ವಿಚಾರ ತಿಳಿದು ದುಃಖ ಆಗಿದೆ ಎಂದು ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದೂ ಪ್ರಾರ್ಥಿಸಿದ್ದಾರೆ. ಜೊತೆಗೆ,  ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ತಲಾ 2 ಲಕ್ಷ ರೂ., ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಇದೇ ವೇಳೆ ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:30 am, Sun, 7 December 25