AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಅಗ್ನಿ ಅವಘಡ: ಎರಡೂ ಮಹಡಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ, 3ನೇ ಫ್ಲೋರ್​ನಲ್ಲಿದ್ದ ಕುಟುಂಬ ಬಚಾವ್​ ಆಗಿದ್ದೇ ರೋಚಕ

ಬೆಂಗಳೂರಿನ ನಗರಪೇಟೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಐದು ಜನರು ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಕಾರಣ ಏನು ಎಂಬುವುದು ತಿಳಿದುಬಂದಿದೆ. ಕಟ್ಟಡ ಮಾಲೀಕರನ್ನು ಬಂಧಿಸಲಾಗಿದೆ. ದುರಂತ ನಡೆದ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಕುಟುಂಬ ಅದೃಷ್ಟವಶಾತ್ ಪಾರಾಗಿದೆ. ಈ ಕುಟುಂಬ ಪಾರಾಗಿದ್ದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು ಅಗ್ನಿ ಅವಘಡ: ಎರಡೂ ಮಹಡಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ, 3ನೇ ಫ್ಲೋರ್​ನಲ್ಲಿದ್ದ ಕುಟುಂಬ ಬಚಾವ್​ ಆಗಿದ್ದೇ ರೋಚಕ
ಅಗ್ನಿ ಅವಘಡ ಸಂಭವಿಸಿದ ಕಟ್ಟಡ
ವಿವೇಕ ಬಿರಾದಾರ
|

Updated on:Aug 19, 2025 | 8:20 AM

Share

ಬೆಂಗಳೂರು, ಆಗಸ್ಟ್​ 19: ಬೆಂಗಳೂರಿನ (Bengaluru) ನಗರತ್ ಪೇಟೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಅಗ್ನಿ ದುರಂತದಲ್ಲಿ (Fire Accident) ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಕಟ್ಟಡ ಮಾಲೀಕನ ನಿರ್ಲಕ್ಷ್ಯದಿಂದ ಅಗ್ನಿ ದುರಂತ?

ಅಗ್ನಿ ದುರಂತದ ಘಟನೆ ನಡೆಯುವ ಮೂರು ದಿನಗಳ ಮುಂಚೆಯೇ ಎರಡನೇ ಮಹಡಿಯಲ್ಲಿ ಪದೇ ಪದೇ ಕರೆಂಟ್ ಸ್ಪಾರ್ಕ್ ಆಗುತ್ತಿತ್ತಂತೆ. ಈ ಬಗ್ಗೆ ಮೃತ ಮದನ್ ಕಟ್ಟಡ ಮಾಲೀಕರಾದ ಸಂದೀಪ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿಗೆ ತಿಳಿಸಿದ್ದಾರೆ. ಆದರೆ, ಕಟ್ಟಡ ಮಾಲೀಕರು ನಿರ್ಲಕ್ಷ್ಯವಹಿಸಿದ್ದಾರೆ. ಕೊನೆಗೆ, ಶನಿವಾರ (ಆ.16) ದಂದು ಶಾರ್ಟ್​ ಸರ್ಕ್ಯುಟ್​ ಆಗಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಐವರು ಸಜೀವ ದಹನವಾಗಿದ್ದಾರೆ. ಸದ್ಯ ಹಲಸೂರು ಗೇಟ್ ಪೊಲೀಸರು ಮಾಲೀಕರನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.

3ನೇ ಮಹಡಿಯಲ್ಲಿದ್ದ ಕುಟುಂಬ ಬಾಚಾವಾಗಿದ್ದೆ ರೋಚಕ

ಬೆಂಕಿ ಅವಘಡ ಸಂಭವಿಸಿದ ಮೂರನೇ ಮಹಡಿಯಲ್ಲಿ ಏಳು ಜನರ ಒಂದು ಕುಟುಂಬ ವಾಸ ಮಾಡುತ್ತಿತ್ತು. ಅಗ್ನಿ ಅವಘಡ ಸಂಭವಿಸಿದ ಆಗಸ್ಟ್​ 16ರ ತಡರಾತ್ರಿ 2:30 ಸುಮಾರಿಗೆ ಜೋರಾಗಿ ಡಮ್ ಎನ್ನುವ ಶಬ್ದ ಕೇಳಿಸಿದೆ. ಏನಾಯಿತು ಅಂತ ನಿದ್ದೆಯಿಂದ ಎದ್ದು ಹೊರಗೆ ಬಂದು ನೋಡಿದಾಗ, ಕೆಳಗಿನ ಎರಡೂ ಮಹಡಿಗಳು ಸಂಪೂರ್ಣವಾಗಿ ಬೆಂಕಿಯಿಂದ ಆವರಿಸಿಕೊಂಡಿರುವುದು ಕಂಡಿದೆ. ಕೂಡಲೇ ಕೆಳಗೆ ಇಳಿದು ಹೋಗಲು ಜಾಗವಿಲ್ಲದೆ, ಅಲ್ಲೇ ಇರಲು ಸಾಧ್ಯವಾಗದೆ ಒಂದು ಕ್ಷಣ ವಿಚಲಿತರಾಗಿದ್ದಾರೆ. ನಂತರ, ಮೂರನೇ ಮಹಡಿಯ ಟೆರೇಸ್​ನಿಂದ ಪಕ್ಕದ ಮನೆಯ ಟೆರೇಸ್ ಮೇಲೆ ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ.‌

ಇದನ್ನೂ ಓದಿ: ನಗರ್ತಪೇಟೆ ಅಗ್ನಿ ಅವಘಡ, ಕಟ್ಟಡ ಮಾಲೀಕ ಸೇರಿ ಇಬ್ಬರ ಬಂಧನ

ಘಟನೆ ನಂತರ ಪೊಲೀಸರು ಏಳೂ ಜನರನ್ನು ಸಂಪರ್ಕ ಮಾಡಿ ವಿಚಾರಣೆ ನಡೆಸಿದಾಗ, ಅಗ್ನಿ ದುರಂತಕ್ಕೆ ಕಾರಣವೇನು ಎಂಬುವುದನ್ನು ಹೇಳಿದ್ದಾರೆ. ಸದ್ಯ, ಈ ನಗರದಲ್ಲಿ ಇಂತಹ ನೂರಾರು ಕಟ್ಟಡಗಳಿವೆ. ಈ ಕಟ್ಟಡಗಳ ಮಾಲೀಕರ ವಿರುದ್ಧ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತೆ ಕಾದು ನೋಡಬೇಕು.

ವರದಿ: ಪ್ರದೀಪ್​ ಚಿಕ್ಕಾಟಿ, ಟಿವಿ9 ಬೆಂಗಳೂರು

Published On - 8:14 am, Tue, 19 August 25