Sunil Jakhar: ಒಂದೆಡೆ ಕಾಂಗ್ರೆಸ್ ಚಿಂತನಾ ಸಭೆ; ಇನ್ನೊಂದೆಡೆ ಪಂಜಾಬ್ ಕೈ ನಾಯಕ ಸುನಿಲ್ ಜಖಾರ್ ರಾಜೀನಾಮೆ

ಕಾಂಗ್ರೆಸ್ ಪಕ್ಷದ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷವು ಅವರ ವಿರುದ್ಧ ಕ್ರಮ ತೆಗೆದುಕೊಂಡ ದಿನದಿಂದ ಸುನಿಲ್ ಜಾಖರ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದರು. ಇದೇ ಅವರ ರಾಜೀನಾಮೆಗೆ ಕಾರಣವಾಗಿದೆ ಎನ್ನಲಾಗಿದೆ.

Sunil Jakhar: ಒಂದೆಡೆ ಕಾಂಗ್ರೆಸ್ ಚಿಂತನಾ ಸಭೆ; ಇನ್ನೊಂದೆಡೆ ಪಂಜಾಬ್ ಕೈ ನಾಯಕ ಸುನಿಲ್ ಜಖಾರ್ ರಾಜೀನಾಮೆ
ಸುನಿಲ್ ಜಖಾರ್
Edited By:

Updated on: May 14, 2022 | 2:48 PM

ಚಂಡೀಗಢ: ಒಂದೆಡೆ ಕಾಂಗ್ರೆಸ್​ ದೇಶದಲ್ಲಿ ಮುಂದೆ ಯಾವ ರೀತಿಯ ಹೆಜ್ಜೆ ಇರಿಸಬೇಕು ಎಂಬುದರ ಬಗ್ಗೆ ಚರ್ಚಿಸಲು ಚಿಂತನಾ ಶಿಬಿರವನ್ನು ಆಯೋಜಿಸಿದೆ. ಇನ್ನೊಂದೆಡೆ ಪಂಜಾಬ್‌ನ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ (Sunil Jakhar) ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಂದ ಕಾಂಗ್ರೆಸ್‌ನ ಎಲ್ಲಾ ಉಲ್ಲೇಖಗಳನ್ನು ತೆಗೆದುಹಾಕಿರುವ ಅವರು ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷವು ಅವರ ವಿರುದ್ಧ ಕ್ರಮ ತೆಗೆದುಕೊಂಡ ದಿನದಿಂದ ಸುನಿಲ್ ಜಾಖರ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದರು. ಇದೇ ಅವರ ರಾಜೀನಾಮೆಗೆ ಕಾರಣವಾಗಿದೆ ಎನ್ನಲಾಗಿದೆ.

ಇತ್ತೀಚೆಗೆ, ಕಾಂಗ್ರೆಸ್ ಶಿಸ್ತು ಸಮಿತಿಯು ಸುನಿಲ್ ಜಾಖರ್ ಮತ್ತು ಕೆ.ವಿ ಥಾಮಸ್ ಅವರನ್ನು ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಎಲ್ಲಾ ಪಕ್ಷದ ಹುದ್ದೆಗಳಿಂದ ವಜಾಗೊಳಿಸಿತ್ತು. ಮೂಲಗಳ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸುನಿಲ್ ಜಾಖರ್ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಹೀಗಾಗಿಯೇ ಸಮಿತಿ ಸುನಿಲ್ ಜಾಖರ್ ಅವರನ್ನು ವಜಾಗೊಳಿಸಬೇಕೆಂದು ಶಿಫಾರಸು ಮಾಡಿದ್ದರೂ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರಲಿಲ್ಲ.

ಎ.ಕೆ ಆ್ಯಂಟನಿ ನೇತೃತ್ವದ ಕಾಂಗ್ರೆಸ್ ಶಿಸ್ತು ಸಮಿತಿಯು ಈ ದೂರುಗಳ ಬಗ್ಗೆ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಅಂತಿಮ ನಿರ್ಧಾರಕ್ಕಾಗಿ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿತ್ತು. ಏಪ್ರಿಲ್ 11ರಂದು ಕಾಂಗ್ರೆಸ್ ಮುಖಂಡರಾದ ಕೆವಿ ಥಾಮಸ್ ಮತ್ತು ಸುನಿಲ್ ಜಾಖರ್ ಅವರಿಗೆ ಕಾಂಗ್ರೆಸ್ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಕ್ಕಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಹಾಗೇ, ಇನ್ನೊಂದು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಿತ್ತು. ಆದರೆ, ಸುನೀಲ್ ಜಾಖರ್ ಅವರು ಸಮಿತಿಯ ಮುಂದೆ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ.

ನಾನುಕಾಂಗ್ರೆಸ್ ಪಕ್ಷದ ಗುಲಾಮನಲ್ಲ, ಆದರೆ ಶಿಸ್ತಿನ ಕಾರ್ಯಕರ್ತ ಎಂದು ಸುನಿಲ್ ಜಾಖರ್ ಹೇಳಿದ್ದರು. ಕಾಂಗ್ರೆಸ್ ಪಕ್ಷದೊಂದಿಗೆ 50 ವರ್ಷಗಳಿಂದ ನನಗೆ ಸಂಬಂಧವಿದೆ ಎಂದು ಹೇಳಿದ್ದ ಸುನಿಲ್ ಜಾಖರ್, ನಾನು ಇಷ್ಟು ವರ್ಷಗಳೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದಿದ್ದರು. ಆದರೀಗ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ.

ಫೇಸ್​ಬುಕ್ ಲೈವ್​ನಲ್ಲಿ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಸಹೋದ್ಯೋಗಿಗಳ ವಿರುದ್ಧ ಕಿಡಿ ಕಾರಿದ್ದ ಸುನಿಲ್ ಜಾಖರ್ ” ಕಾಂಗ್ರೆಸ್​ಗೆ ವಿದಾಯ ಮತ್ತು ಶುಭವಾಗಲಿ” ಎಂದು ಲೈವ್ ವೀಡಿಯೊದಲ್ಲಿ ತಮ್ಮ ವಿರುದ್ಧ ಕ್ರಮಕ್ಕೆ ಕಾರಣರಾದ ಪಕ್ಷದ ಮಾಜಿ ಸಹೋದ್ಯೋಗಿಗಳ ಬಗ್ಗೆ ಕಟುವಾದ ಟೀಕೆ ಮಾಡಿದ್ದರು. ಅದಾದ ನಂತರ ಅವರು ರಾಜೀನಾಮೆ ನೀಡಿದ್ದಾರೆ.


ಪಂಜಾಬ್​ನಲ್ಲಿ ಸುನಿಲ್ ಜಾಖರ್ ಅವರು ಚುನಾವಣೆಗೆ ಚರಣ್​ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ನಾಯಕತ್ವವನ್ನು ಟೀಕಿಸಿದ್ದರು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪದಚ್ಯುತಗೊಂಡ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ ತಪ್ಪೆ ಅವರು ಬೇಸರ ವ್ಯಕ್ತಪಡಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ