Gopi Thotakura: ಇತಿಹಾಸ ಸೃಷ್ಟಿಸಿದ ಆಂಧ್ರ ಮೂಲದ ಗೋಪಿ ತೋಟಕೂರ; ಬಾಹ್ಯಾಕಾಶ ಪ್ರವಾಸ ಕೈಗೊಂಡ ಭಾರತೀಯ ಪೈಲಟ್
ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ನ್ಯೂ ಶೆಪರ್ಡ್-25 (NS-25) ಮಿಷನ್ 2022 ಸೆಪ್ಟೆಂಬರ್‌ನಲ್ಲಿ ರಾಕೆಟ್ ಅಪಘಾತದ ನಂತರ ನಿಂತುಹೋಗಿತ್ತು. ಅದಾದ 2 ವರ್ಷಗಳಲ್ಲಿ ಇದೀಗ ಮೇ 19ರಂದು ಆಕಾಶಕ್ಕೆ ಹಾರಿದೆ. 6 ಸಿಬ್ಬಂದಿಯನ್ನು ಹೊತ್ತ ಬ್ಲೂ ಒರಿಜಿನ್ ವಿಮಾನದಲ್ಲಿ ಭಾರತೀಯ ಮೂಲದ ಉದ್ಯಮಿ ಮತ್ತು ಪೈಲಟ್ ಗೋಪಿ ತೋಟಕೂರ ಕೂಡ ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ನವದೆಹಲಿ: ಅಮೆಜಾನ್ (Amazon) ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್‌ನ NS-25 ಮಿಷನ್‌ನ ಭಾಗವಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡಿದ್ದಾರೆ. ಈ ಮೂಲಕ ಬಾಹ್ಯಾಕಾಶ ಪ್ರವಾಸ ಕೈಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಆಂಧ್ರಪ್ರದೇಶ ಮೂಲದವರಾದ ಗೋಪಿ ತೋಟಕೂರ (Gopi Thotakura) ಮೊದಲ ಭಾರತೀಯ ಬಾಹ್ಯಾಕಾಶ (Space) ಪ್ರವಾಸಿ ಮತ್ತು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರಾಗಿ ಇತಿಹಾಸವನ್ನು ನಿರ್ಮಿಸಿದ್ದಾರೆ.
ಬ್ಲೂ ಒರಿಜಿನ್ ತನ್ನ 7ನೇ ಮಾನವ ಬಾಹ್ಯಾಕಾಶ ಹಾರಾಟವನ್ನು ಮತ್ತು ನ್ಯೂ ಶೆಪರ್ಡ್ ಕಾರ್ಯಕ್ರಮಕ್ಕಾಗಿ 25ನೇ ಹಾರಾಟವನ್ನು ಭಾನುವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ತಂಡದಲ್ಲಿ ಗೋಪಿಚಂದ್ ಅವರು ಮಾತ್ರವಲ್ಲದೆ, ಮಾಜಿ ವಾಯುಪಡೆಯ ಕ್ಯಾಪ್ಟನ್ ಎಡ್ ಡ್ವೈಟ್ ಕೂಡ ಸೇರಿದ್ದಾರೆ.
ಆಂಧ್ರಪ್ರದೇಶದವರಾದ ಗೋಪಿ ತೋಟಕೂರ ಅವರು ಬಾಹ್ಯಾಕಾಶ ಪ್ರವಾಸ ಕೈಗೊಂಡಿರುವ 6 ಸಿಬ್ಬಂದಿಗಳಲ್ಲಿ ಒಬ್ಬರು. ಗಗನಯಾತ್ರಿ ಸಿಬ್ಬಂದಿಯಲ್ಲಿ ಮೇಸನ್ ಏಂಜೆಲ್, ಸಿಲ್ವೈನ್ ಚಿರೋನ್, ಕೆನ್ನೆತ್ ಎಲ್. ಹೆಸ್, ಕರೋಲ್ ಸ್ಚಾಲರ್ ಮತ್ತು ಮಾಜಿ ಏರ್ ಫೋರ್ಸ್ ಕ್ಯಾಪ್ಟನ್ ಎಡ್ ಡ್ವೈಟ್ ಕೂಡ ಸೇರಿದ್ದಾರೆ. 1961ರಲ್ಲಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ರಾಷ್ಟ್ರದ ಮೊದಲ ಕಪ್ಪು ಗಗನಯಾತ್ರಿ ಅಭ್ಯರ್ಥಿಯಾಗಿ ಡ್ವೈಟ್ ಅವರನ್ನು ಆಯ್ಕೆ ಮಾಡಿದರು. ಆದರೆ ಬ್ಲೂ ಒರಿಜಿನ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಅವರಿಗೆ ಎಂದಿಗೂ ಗಗನಯಾನ ಮಾಡಲು ಅವಕಾಶ ಸಿಕ್ಕಿರಲಿಲ್ಲ.
ಇದನ್ನೂ ಓದಿ: Space Station: ಭಾರತದ ಮೊದಲ ಬಾಹ್ಯಾಕಾಶ ನಿಲ್ದಾಣದ ಕೆಲಸ ಆರಂಭಿಸಿದ ಇಸ್ರೋ
ಈ ಹಿಂದಿನ ಸಂದರ್ಶನವೊಂದರಲ್ಲಿ, ಗೋಪಿ ತೋಟಕೂರ ಅವರು ಬಾಹ್ಯಾಕಾಶ ಪ್ರವಾಸದ ಬಗ್ಗೆ ತಮ್ಮ ಕನಸು ಮತ್ತು ಉತ್ಸಾಹವನ್ನು ಹಂಚಿಕೊಂಡಿದ್ದರು. ಹೊಸ ಮಾರ್ಗಗಳನ್ನು ತೆರೆಯಲು ಬಾಹ್ಯಾಕಾಶ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಅವರು ಚರ್ಚಿಸಿದ್ದರು.
ಪ್ರತಿಯೊಬ್ಬ ಗಗನಯಾತ್ರಿಗಳು ಕೂಡ ಬ್ಲೂ ಒರಿಜಿನ್‌ನ ಫೌಂಡೇಶನ್, ಕ್ಲಬ್ ಫಾರ್ ದಿ ಫ್ಯೂಚರ್ ಪರವಾಗಿ ಪೋಸ್ಟ್‌ಕಾರ್ಡ್ ಅನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುತ್ತಾರೆ. ಭೂಮಿಯ ಪ್ರಯೋಜನಕ್ಕಾಗಿ ಸ್ಟೀಮ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುವುದು ಈ ಕ್ಲಬ್‌ನ ಉದ್ದೇಶವಾಗಿದೆ.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಭಗವದ್ಗೀತೆ, ಉಪನಿಷದ್ ಕೊಂಡೊಯ್ದಿದ್ದ ಸುನಿತಾ ವಿಲಿಯಮ್ಸ್ಗೆ ಗಣೇಶ ಲಕ್ ಚಾರ್ಮ್ ಅಂತೆ
ಭಾರತೀಯ ವಾಯುಪಡೆಯ ಮಾಜಿ ಪೈಲಟ್ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ 1984ರಲ್ಲಿ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಪ್ರಜೆಯಾಗಿದ್ದಾರೆ. ಇದೀಗ ಗೋಪಿ ತೋಟಕೂರ 2ನೇ ಭಾರತೀಯ ಪ್ರಜೆಯಾಗಿದ್ದಾರೆ. ಗೋಪಿ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದರೂ ಭಾರತೀಯ ಪಾಸ್‌ಪೋರ್ಟ್ ಉಳಿಸಿಕೊಂಡಿದ್ದಾರೆ. ಅವರು ಪ್ರವಾಸಿಯಾಗಿ ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಪ್ರಜೆಯಾಗಿದ್ದರೂ, ಏಪ್ರಿಲ್ 3, 1984ರಂದು ಬಾಹ್ಯಾಕಾಶಕ್ಕೆ ವೃತ್ತಿಪರ ಗಗನಯಾತ್ರಿಯಾಗಿ ಹಾರಿದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ನಂತರ ಅವರು ಅಧಿಕೃತವಾಗಿ ದೇಶದ ಎರಡನೇ ಗಗನಯಾತ್ರಿಯಾಗಿದ್ದಾರೆ. ಗಗನಯಾತ್ರಿಗಳಾದ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್, ರಾಜಾ ಚಾರಿ ಮತ್ತು ಸಿರಿಶಾ ಬಾಂಡ್ಲಾ ಅವರು ಭಾರತೀಯ ಮೂಲದ US ಪ್ರಜೆಗಳಾಗಿದ್ದು, ವೃತ್ತಿಪರ ಗಗನಯಾತ್ರಿಗಳಾಗಿ ಬಾಹ್ಯಾಕಾಶಕ್ಕೆ ಹೋಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Tue, 21 May 24