2ನೇ ಡೋಸ್ನ ಲಸಿಕೆ ಪಡೆಯಲು 12 ವಾರದ ಅಂತರ ನಿಗದಿಪಡಿಸಿದ ಕೇಂದ್ರ ಸರ್ಕಾರ
ಮೊದಲು ಒಂದು ಕಂಪನಿಯ ಲಸಿಕೆ ಪಡೆದು, 2ನೇ ಬಾರಿಗೆ ಮತ್ತೊಂದು ಕಂಪನಿಯ ಲಸಿಕೆಯ ಡೋಸ್ ಪಡೆಯಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೆಹಲಿ: ಕೊರೊನಾ ವೈರಸ್ ಸೋಂಕು ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆದವರು ಲಸಿಕೆಯ 2ನೇ ಡೋಸ್ ಪಡೆಯಲು ಕೇಂದ್ರ ಸರ್ಕಾರ 12 ವಾರದ (3 ತಿಂಗಳು) ಅಂತರ ನಿಗದಿಪಡಿಸಿದೆ. ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳಿಗೆ ಇದು ಅನ್ವಯಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಜೂನ್ 1) ಮಾಹಿತಿ ನೀಡಿದೆ.
ದೇಶದಲ್ಲಿ ಈವರೆಗೆ ಒಟ್ಟು 21.60 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 1.67 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2.42 ಕೋಟಿ ಜನರು ಫ್ರಂಟ್ಲೈನ್ ವರ್ಕರ್ಸ್ ಆಗಿದ್ದಾರೆ. ಲಸಿಕೆ ಪಡೆದುಕೊಂಡಿರುವವರ ಪೈಕಿ 45 ವರ್ಷ ಮೇಲ್ಪಟ್ಟವರು 15.48 ಕೋಟಿ ಜನ. 18-44 ವರ್ಷದೊಳಗಿನ 2.03 ಕೋಟಿ ಜನರಿಗೆ ಈವರೆಗೆ ಲಸಿಕೆ ನೀಡಲಾಗಿದೆ.
ಮೊದಲ ಡೋಸ್ ಕೊವಾಕ್ಸಿನ್ ಅಥವಾ ಕೋವಿಶೀಲ್ಡ್ ತೆಗೆದುಕೊಂಡಿದ್ದವರು ಎರಡನೇ ಡೋಸ್ ಆಗಿ ಅದೇ ಲಸಿಕೆ ತೆಗೆದುಕೊಳ್ಳಬೇಕು. ಮೊದಲು ಒಂದು ಕಂಪನಿಯ ಲಸಿಕೆ ಪಡೆದು, 2ನೇ ಬಾರಿಗೆ ಮತ್ತೊಂದು ಕಂಪನಿಯ ಲಸಿಕೆಯ ಡೋಸ್ ಪಡೆಯಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಲಭ್ಯತೆ ಕಡಿಮೆಯಿರುವುದರಿಂದ ಸರ್ಕಾರ 2ನೇ ಡೋಸ್ಗೆ ಎಲ್ಲರಿಗೂ ಕೋವಿಶೀಲ್ಡ್ ನೀಡಲು ಕ್ರಮ ಕೈಗೊಳ್ಳಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಇಂದು ನೀಡಿರುವ ಸ್ಪಷ್ಟನೆ ಮಹತ್ವ ಪಡೆದಿದೆ.
‘ನಾನು ಈ ವಿಷಯವನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ. ಎರಡು ಡೋಸ್ ಲಸಿಕೆ ನೀಡಬೇಕು ಎಂಬ ನಿರ್ಧಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ಕೋವಿಶೀಲ್ಡ್ನ 2ನೇ ಡೋಸ್ 12 ವಾರಗಳ ನಂತರ ಮತ್ತು ಕೊವ್ಯಾಕ್ಸಿನ್ನ 2ನೇ ಡೋಸ್ 4ರಿಂದ 6 ವಾರಗಳ ನಂತರ ನೀಡಲಾಗುವುದು. ನಾವು ಈ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ’ ಎಂದು ಅವರು ಹೇಳಿದರು.
(Government of India Schedules 12 weeks distance for 2nd vaccine No mixing of vaccines)
ಇದನ್ನೂ ಓದಿ: Sputnik V Vaccine ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ 30 ಲಕ್ಷ ಡೋಸ್
Published On - 6:25 pm, Tue, 1 June 21