ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಮ್, ಸಿಗ್ನಲ್‌ಗೂ ಕೇಂದ್ರದ ನೋಟಿಸ್

ಕೇಂದ್ರ ಸರ್ಕಾರವು ವಾಟ್ಸಾಪ್‌ ಬೆನ್ನಲ್ಲೇ ಟೆಲಿಗ್ರಾಮ್ ಮತ್ತು ಸಿಗ್ನಲ್‌ಗೂ 'ಯೂಸರ್ ನೇಮ್' ವೈಶಿಷ್ಟ್ಯದ ಕುರಿತು ನೋಟಿಸ್ ಜಾರಿ ಮಾಡಿದೆ. ಆನ್‌ಲೈನ್ ವಂಚನೆ ತಡೆಯಲು ಮೆಸೇಜಿಂಗ್ ಆ್ಯಪ್‌ಗಳು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಕೇಂದ್ರ ಪ್ರಶ್ನಿಸಿದೆ. ಈ ವೈಶಿಷ್ಟ್ಯವು ಮೊಬೈಲ್ ಸಂಖ್ಯೆ ಇಲ್ಲದೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡುತ್ತಿದ್ದು, ದುರುಪಯೋಗ ತಡೆಯಲು ಕಟ್ಟುನಿಟ್ಟಿನ ನಿಯಮಗಳಿಗೆ ಸರ್ಕಾರ ಒತ್ತಾಯಿಸಿದೆ.

ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಮ್, ಸಿಗ್ನಲ್‌ಗೂ ಕೇಂದ್ರದ ನೋಟಿಸ್
ಆ್ಯಪ್​ಗಳು

Updated on: Jul 03, 2026 | 7:29 AM

ನವದೆಹಲಿ, ಜುಲೈ 03: ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಚಾಟ್ ಮಾಡಲು ಅನುಕೂಲ ಕಲ್ಪಿಸುವ ‘ಯೂಸರ್​​ನೇಮ್’ (Username) ವೈಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ವಿರುದ್ಧ ತನ್ನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ. ಬುಧವಾರವಷ್ಟೇ ವಾಟ್ಸಾಪ್ ಸಂಸ್ಥೆಗೆ ನೋಟಿಸ್ ನೀಡಿದ್ದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈಗ ಪ್ರಮುಖ ಮೆಸೇಜಿಂಗ್ ಆಪ್‌ಗಳಾದ ಟೆಲಿಗ್ರಾಮ್ ಮತ್ತು ಸಿಗ್ನಲ್ (Signal)ಗೂ  ಅಧಿಕೃತ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಸರ್ಕಾರದ ಕಳವಳ ಮತ್ತು ಪ್ರಶ್ನೆಗಳೇನು?
ಮೊಬೈಲ್ ಸಂಖ್ಯೆ ಇಲ್ಲದೆಯೇ ಸಂಪರ್ಕ ಸಾಧಿಸಲು ಬಳಕೆದಾರರಿಗೆ ಮುಕ್ತ ‘ಯೂಸರ್ ನೇಮ್’ ನೀಡುತ್ತಿರುವುದಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಕೇಳಿದೆ.
ಸಾರ್ವಜನಿಕ ಅಧಿಕಾರಿಗಳು, ಪ್ರಸಿದ್ಧ ವ್ಯಕ್ತಿಗಳು, ಬ್ಯಾಂಕುಗಳು ಹಾಗೂ ಸರ್ಕಾರಿ ಇಲಾಖೆಗಳ ಅಧಿಕೃತ ಹೆಸರುಗಳನ್ನು ಹೋಲುವ ನಕಲಿ ಯೂಸರ್ ನೇಮ್‌ಗಳನ್ನು ಸೃಷ್ಟಿಸಿ ಆನ್‌ಲೈನ್ ವಂಚನೆ ಮಾಡುವುದನ್ನು ತಡೆಯಲು ನೀವು ಕೈಗೊಂಡಿರುವ ಸುರಕ್ಷತಾ ಕ್ರಮಗಳೇನು ಎಂದು ಪ್ರಶ್ನಿಸಿದೆ.

ವಾಟ್ಸಾಪ್ ನೀಡಿದ ವಿವರಣೆ
ಇದೇ ವಿಷಯವಾಗಿ 3 ದಿನಗಳ ಒಳಗೆ ವಿವರಣೆ ನೀಡುವಂತೆ ಮತ್ತು ಸಮಾಲೋಚನೆ ಮುಗಿಯುವವರೆಗೆ ಈ ವೈಶಿಷ್ಟ್ಯವನ್ನು ಭಾರತದಲ್ಲಿ ಬಿಡುಗಡೆ ಮಾಡದಂತೆ ವಾಟ್ಸಾಪ್‌ಗೆ ಸರ್ಕಾರ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವಾಟ್ಸಾಪ್, ವಂಚನೆ ತಡೆಯಲು ನಿಖರವಾದ ಯೂಸರ್ ನೇಮ್ ಗೊತ್ತಿರಬೇಕಾದ ನಿಯಮ, ಊಹಿಸುವ ಪ್ರಯತ್ನಗಳಿಗೆ ಬ್ಲಾಕ್ ಹಾಗೂ ಅಪರಿಚಿತ ಸಂದೇಶ ಬಂದಾಗ ಅದು ಯಾವ ದೇಶದ್ದು ಎಂಬ ವಿವರಗಳನ್ನು ಪ್ರದರ್ಶಿಸುವ ಭದ್ರತಾ ಪದರಗಳನ್ನು ಅಳವಡಿಸಿರುವುದಾಗಿ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: WhatsApp Username: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್

ಟೆಲಿಗ್ರಾಮ್ ಆ್ಯಪ್ ಈಗಾಗಲೇ ಇತ್ತೀಚಿನ ದಿನಗಳಲ್ಲಿ ಸರ್ಕಾರದ ತೀವ್ರ ನಿಗಾದಲ್ಲಿದೆ. ಕಳೆದ ತಿಂಗಳು ನೀಟ್ (NEET) ಪರೀಕ್ಷೆಯ ನಕಲಿ ಪಶ್ನೆಪತ್ರಿಕೆಗಳ ಸೋರಿಕೆ ಮತ್ತು ಪ್ರಸರಣಕ್ಕೆ ಈ ವೇದಿಕೆಯನ್ನು ವ್ಯಾಪಕವಾಗಿ ಬಳಸಲಾದ ಆರೋಪದ ಮೇಲೆ ಟೆಲಿಗ್ರಾಮ್ ಮೇಲೆ ಒಂದು ವಾರದ ಕಾಲ ನಿಷೇಧ ಹೇರಲಾಗಿತ್ತು. ಜೂನ್ 22 ರಂದು ಈ ನಿಷೇಧ ಕೊನೆಗೊಂಡು ಸೇವೆಗಳು ಮರಳಿದ್ದರೂ, ಈಗ ಯೂಸರ್ ನೇಮ್ ವಿವಾದವು ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೆ ಹೊಸ ತಲೆನೋವು ತಂದಿಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us