AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Username: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್

WhatsApp's new feature username: ಮೆಟಾ ಮಾಲಕತ್ವದ ವಾಟ್ಸಾಪ್ ಪ್ಲಾಟ್​ಫಾರ್ಮ್​ನಲ್ಲಿ ಯೂಸರ್​ನೇಮ್ ಎನ್ನುವ ಹೊಸ ಫೀಚರ್ ಬಿಡುಗಡೆ ಆಗಿದೆ. ಫೋನ್ ನಂಬರ್ ಬಹಿರಂಗಪಡಿಸದೆ ಯೂಸರ್​ನೇಮ್​ನಿಂದಲೇ ಗುರುತಿಸಿಕೊಳ್ಳಲು ಈ ಫೀಚರ್ ನೆರವಾಗುತ್ತದೆ. ವಾಟ್ಸಾಪ್ ಬಳಕೆದಾರರು ಈಗಲೇ ತಮಗೆ ಬೇಕಾದ ಯೂಸರ್​ನೇಮ್ ರಿಸರ್ವ್ ಮಾಡಿಕೊಳ್ಳಬಹುದು.

WhatsApp Username: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್
ವಾಟ್ಸಾಪ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 30, 2026 | 12:18 PM

Share

ಮುಖ್ಯಾಂಶಗಳು

  • ವಾಟ್ಸಾಪ್ ಪ್ಲಾಟ್​ಫಾರ್ಮ್​ನಲ್ಲಿ ಯೂಸರ್​ನೇಮ್ ಎನ್ನುವ ಹೊಸ ಫೀಚರ್ ಬಿಡುಗಡೆ ಆಗಿದೆ.
  • ಫೋನ್ ನಂಬರ್ ಬಹಿರಂಗಪಡಿಸದೆ ಯೂಸರ್​ನೇಮ್​ನಿಂದಲೇ ಗುರುತಿಸಿಕೊಳ್ಳಬಹುದು.
  • ಬಳಕೆದಾರರು ಈಗಲೇ ತಮಗೆ ಬೇಕಾದ ಯೂಸರ್​ನೇಮ್ ರಿಸರ್ವ್ ಮಾಡಿಕೊಳ್ಳಬಹುದು.

ಬೆಂಗಳೂರು, ಜೂನ್ 30: ಇನ್ಮುಂದೆ ವಾಟ್ಸಾಪ್‌ನಲ್ಲಿ (WhatsApp) ಯಾರಿಗಾದರೂ ಸಂದೇಶ ಕಳುಹಿಸಬೇಕಾದರೆ ನಿಮ್ಮ ವೈಯಕ್ತಿಕ ಫೋನ್ ನಂಬರ್ ಬಹಿರಂಗಪಡಿಸಬೇಕಾದ ಅಗತ್ಯವಿರುವುದಿಲ್ಲ. ವಾಟ್ಸಾಪ್ ಸಂಸ್ಥೆಯು ಬಳಕೆದಾರರ ಗೌಪ್ಯತೆಯನ್ನು (Privacy) ಹೆಚ್ಚಿಸಲು ‘ಯೂಸರ್‌ನೇಮ್’ (Usernames) ಎನ್ನುವ ಹೊಸ ಫೀಚರ್ ಪರಿಚಯಿಸುತ್ತಿದೆ. ನೀವು ಫೋನ್ ನಂಬರ್ ಬದಲು ಯೂಸರ್​ನೇಮ್ ಗುರುತಿನಲ್ಲಿ ಮೆಸೇಜ್ ಶೇರ್ ಮಾಡಿಕೊಳ್ಳಲು ಅವಕಾಶ ಇದೆ. ಕುನಾಲ್ ಶಾ (Kunal Shah) ಅವರು ವಾಟ್ಸಾಪ್ ಮುಖ್ಯಸ್ಥರಾಗಿ ಸೇರಿದ ಬಳಿಕ ಈ ಪ್ಲಾಟ್​ಫಾರ್ಮ್​ನಲ್ಲಿ ಮೊದಲ ಪ್ರಮುಖ ಅಪ್​ಡೇಟ್ ಇದು.

ವಾಟ್ಸಾಪ್‌ನ ನೂತನ ಸಿಇಒ ಕುನಾಲ್ ಶಾ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. “ಸಮಯ ಪ್ರಮುಖವಾದದ್ದು. ಜಗತ್ತಿಗೆ ಈ ಫೀಚರ್ ಬಿಡುಗಡೆಯಾಗುವ ಮುನ್ನವೇ ನಾನು ವಾಟ್ಸಾಪ್ ಸೇರಿ ನನ್ನ ಯೂಸರ್‌ನೇಮ್ ಪಡೆದುಕೊಂಡಿದ್ದೇನೆ. ನಿಮ್ಮ ಹೆಸರನ್ನು ಕಾಯ್ದಿರಿಸಲು ಇದುವೇ ಸರಿಯಾದ ಸಮಯ” ಎಂದು ಅವರು ಬಳಕೆದಾರರಿಗೆ ಕರೆ ನೀಡಿದ್ದಾರೆ.

ವಾಟ್ಸಾಪ್ ಸಿಇಒ ಕುನಾಲ್ ಶಾ ಅವರ ಟ್ವೀಟ್

ಈ ‘ಯೂಸರ್‌ನೇಮ್’ ಫೀಚರ್​ನ ಮುಖ್ಯ ಉದ್ದೇಶವೇನು?

ಪ್ರಸ್ತುತ ವಾಟ್ಸಾಪ್‌ನಲ್ಲಿ ಹೊಸಬರ ಜೊತೆ ಚಾಟ್ ಮಾಡಬೇಕಾದರೆ ಫೋನ್ ನಂಬರ್ ಹಂಚಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಅಪರಿಚಿತರು, ನೆರೆಹೊರೆಯವರು ಅಥವಾ ಕಚೇರಿಯ ಕೆಲಸದ ನಿಮಿತ್ತ ಸಿಗುವವರಿಗೆ ಫೋನ್ ನಂಬರ್ ಕೊಡುವುದು ಹಲವರಿಗೆ ಇಷ್ಟವಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಿಮ್ಮ ಫೋನ್ ನಂಬರ್ ಬದಲಿಗೆ ಕೇವಲ ಒಂದು ಯೂಸರ್‌ನೇಮ್ (ಉದಾಹರಣೆಗೆ: @Kumar) ನೀಡುವ ಮೂಲಕ ಚಾಟ್ ಮಾಡಬಹುದು. ಇದರಿಂದ ನಿಮ್ಮ ಮೊಬೈಲ್ ನಂಬರ್ ಸುರಕ್ಷಿತವಾಗಿರಲಿದೆ.

ಇದನ್ನೂ ಓದಿ: ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್​ಲೈನ್​ಗಳಿವೆ, ಗಮನಿಸಿ

ಇದು ಇನ್‌ಸ್ಟಾಗ್ರಾಮ್ ಅಥವಾ ಎಕ್ಸ್ (ಟ್ವಿಟರ್) ನಂತೆ ಸಾರ್ವಜನಿಕವಾಗಿ ಯಾರಿಗೆ ಬೇಕಾದರೂ ಹುಡುಕಲು ಸಿಗುವ ಖಾತೆಯಾಗಿರುವುದಿಲ್ಲ. ನಿಮ್ಮ ಯೂಸರ್‌ನೇಮ್ ಅನ್ನು ನೀವು ಯಾರಿಗೆ ನೀಡುತ್ತೀರೋ, ಅವರು ಮಾತ್ರ ನಿಮ್ಮನ್ನು ಸಂಪರ್ಕಿಸಬಹುದಾಗಿದೆ.

ಭದ್ರತೆಗಾಗಿ ‘ಯೂಸರ್‌ನೇಮ್ ಕೀ’

ಹೆಚ್ಚುವರಿ ಭದ್ರತೆಗಾಗಿ ವಾಟ್ಸಾಪ್ ‘ಯೂಸರ್‌ನೇಮ್ ಕೀ’ (Username Key) ಎಂಬ ಆಯ್ಕೆಯನ್ನು ನೀಡುತ್ತಿದೆ. ಹೊಸದಾಗಿ ಯಾರಾದರೂ ನಿಮ್ಮ ಯೂಸರ್‌ನೇಮ್ ಬಳಸಿ ಸಂದೇಶ ಕಳುಹಿಸಬೇಕಾದರೆ, ನೀವು ನಿಗದಿಪಡಿಸಿದ ಈ ‘ಕೀ’ (ಪಾಸ್‌ವರ್ಡ್‌ನಂತಹ ಕೋಡ್) ಅನ್ನು ಅವರು ನಮೂದಿಸಬೇಕಾಗುತ್ತದೆ.

ನಿಮ್ಮ ಯೂಸರ್‌ನೇಮ್ ಕಾಯ್ದಿರಿಸುವುದು ಹೇಗೆ?

ಜೂನ್ 29 ರಿಂದ ಜಾಗತಿಕವಾಗಿ ಈ ಯೂಸರ್‌ನೇಮ್ ಕಾಯ್ದಿರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಹಂತಹಂತವಾಗಿ ಎಲ್ಲ ಬಳಕೆದಾರರಿಗೆ ಸಿಗಲಿದೆ. ನಿಮ್ಮ ಆ್ಯಪ್‌ನಲ್ಲಿ ಈ ಆಯ್ಕೆ ಬಂದಾಗ ಕೆಳಗಿನ ಹಂತಗಳನ್ನು ಅನುಸರಿಸಿ:

  • ನಿಮ್ಮ ವಾಟ್ಸಾಪ್ ಆ್ಯಪ್ ಅನ್ನು ಅಪ್‌ಡೇಟ್ ಮಾಡಿ.
  • ಆ್ಯಪ್‌ನ Settings (ಸೆಟ್ಟಿಂಗ್ಸ್) ಗೆ ಹೋಗಿ.
  • Account (ಅಕೌಂಟ್) ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ Username (ಯೂಸರ್‌ನೇಮ್) ಆಯ್ಕೆಯನ್ನು ಆರಿಸಿ.
  • ನಿಮಗೆ ಬೇಕಾದ, ಲಭ್ಯವಿರುವ ಹೆಸರನ್ನು ಆಯ್ಕೆ ಮಾಡಿ ಕನ್ಫರ್ಮ್ ಮಾಡಿ.

ಇದನ್ನೂ ಓದಿ: AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ ‘AI ಏಜೆಂಟ್‌ಗಳು’; ಏನಿದು ಹೊಸ ಟೆಕ್ನಾಲಜಿ?

ಹಾಗೆಯೇ, ನಿಮ್ಮ ಫೇಸ್​ಬುಕ್ ಅಥವಾ ಇನ್​ಸ್ಟಾಗ್ರಾಮ್ ಪ್ಲಾಟ್​ಫಾರ್ಮ್​ನಲ್ಲಿರುವ ಐಡಿ ಹೆಸರನ್ನೂ ವಾಟ್ಸಾಪ್ ಯೂಸರ್​ನೇಮ್ ಆಗಿ ನಿಗದಿ ಮಾಡಿಕೊಳ್ಳಬಹುದು. ಯಾವ ಯೂಸರ್​ನೇಮ್ ಇಟ್ಟುಕೊಳ್ಳುವುದು ಎನ್ನುವ ಗೊಂದಲ ಮೂಡಿದಲ್ಲಿ, ವಾಟ್ಸಾಪ್​ನಲ್ಲೇ ಯೂಸರ್​ನೇಮ್ ಜನರೇಟರ್ ಎನ್ನುವ ಹೆಲ್ಪ್ ಸರ್ವಿಸ್ ಇರುತ್ತದೆ. ಅದನ್ನು ಬಳಸಬಹುದು.

ಸೆಲಬ್ರಿಟಿಗಳ ಹೆಸರು ದುರ್ಬಳಕೆ ಕಷ್ಟಸಾಧ್ಯ

ಗಮನಿಸಬೇಕಾದ ಸಂಗತಿ ಎಂದರೆ, ಸೆಲೆಬ್ರಿಟಿಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗುವುದನ್ನು ತಡೆಯಲು ಅವರ ಯೂಸರ್‌ನೇಮ್‌ಗಳನ್ನು ವಾಟ್ಸಾಪ್ ಮೊದಲೇ ಕಾಯ್ದಿರಿಸಿದೆ. ಹೀಗಾಗಿ, ಹೆಸರು ದುರ್ಬಳಕೆ ಮಾಡಿಕೊಳ್ಳಲು ಕಷ್ಟಸಾಧ್ಯವಾಗಲಿದೆ.

ನಿಮ್ಮ ಹಳೆಯ ಚಾಟ್‌ಗಳು, ಬ್ಲಾಕ್ ಲಿಸ್ಟ್ ಹಾಗೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಭದ್ರತೆಗಳು ಎಂದಿನಂತೆಯೇ ಮುಂದುವರಿಯಲಿವೆ. ಈ ವರ್ಷದ ಅಂತ್ಯದ ವೇಳೆಗೆ ಈ ಫೀಚರ್ ಜಗತ್ತಿನಾದ್ಯಂತ ಸಂಪೂರ್ಣವಾಗಿ ಲಭ್ಯವಾಗಲಿದೆ.

ವಾಟ್ಸಾಪ್ ಯೂಸರ್​ನೇಮ್ ಫೀಚರ್ ಪ್ರೊಮೋಟ್ ಮಾಡುವ ಅಧಿಕೃತ ವಿಡಿಯೋ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Tue, 30 June 26

Follow Us