ಸಾಂದರ್ಭಿಕ ಚಿತ್ರ
ದೆಹಲಿ: ಭಾರತ ವಿಶಿಷ್ಟ ಗುರುತು ಪ್ರಾಧಿಕಾರವು (The Unique Identification Authority of India – UIDAI) ಆಧಾರ್ ಸಂಖ್ಯೆಗಳ ಅಕ್ರಮ ಬಳಕೆಯ ಮೂಲಕ ಆಗುವ ಮೋಸ ತಡೆಗಟ್ಟಲು ಏಳು ಸಲಹೆಗಳನ್ನು ನೀಡಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಡಿಜಿಟಲ್ ಇಡಿಯಾ’ ಉಪಕ್ರಮಕ್ಕೆ ವಿಶಿಷ್ಟ ಗುರುತು ಪ್ರಾಧಿಕಾರವು ಆಧಾರ ಸ್ತಂಭ ಎನಿಸಿದೆ. ದೇಶದ ಎಲ್ಲ ನಾಗರಿಕರಿಗೂ ಪ್ರಾಧಿಕಾರವು ವಿಶಿಷ್ಟು ಸಂಖ್ಯೆಗಳನ್ನು ನೀಡಲಿದೆ. ಆಧಾರ್ನ ಭಾಗವಾಗಿ ನಿಮ್ಮ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಇತರ ವಿಚಾರಗಳು ಆಧಾರ್ನ ಭಾಗವಾಗಿ ಇರುತ್ತವೆ. ಆಧಾರ್ ಮೂಲಕ ಸಂಗ್ರಹಿಸುವ ದತ್ತಾಂಶಗಳು ಸುರಕ್ಷಿತವಾಗಿರುತ್ತವೆ ಎಂದು ಕೇಂದ್ರ ಸರ್ಕಾರವು ಖಾತ್ರಿಪಡಿಸಿದೆಯಾದರೂ, ಆಧಾರ್ನ ಸುರಕ್ಷಿತ ಬಳಕೆಗೆ ಒತ್ತು ನೀಡಬೇಕೆಂದು ಜನರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ: Aadhaar Card ಆಧಾರ್ ಕಾರ್ಡ್ ಫೋಟೊಕಾಪಿ ಹಂಚಿಕೊಳ್ಳಬೇಡಿ ಎಂಬ ಯುಐಡಿಎಐ ಎಚ್ಚರಿಕೆ ವಾಪಸ್ ಪಡೆದ ಕೇಂದ್ರ ಸರ್ಕಾರ
ಆಧಾರ್ ಅಂಕಿಗಳ ಬಳಕೆಯಿಂದ ಆಗುವ ಅಕ್ರಮ ತಡೆಯಲು ವಹಿಸಬೇಕಾದ ಮುಂಜಾಗ್ರತೆ ಕುರಿತು ವಿಶಿಷ್ಟ ಗುರುತು ಪ್ರಾಧಿಕಾರವು ಸಲಹೆಗಳನ್ನು ನೀಡಿದೆ. ಈ ಸಲಹೆಗಳ 7 ಮುಖ್ಯ ಅಂಶಗಳಿವು…
- ಆಧಾರ್ ದೃಢೀಕರಣ: ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಬಳಸುವ ಮೊದಲು ಅದನ್ನು ಪರಿಶೀಲಿಸಿ, ದೃಢೀಕರಿಸಬೇಕಾಗುತ್ತದೆ. ಕೇವಲ 12 ಅಂಕಿಗಳನ್ನಷ್ಟೇ ಆಧಾರ್ ಎಂದು ಪರಿಗಣಿಸಲು ಆಗುವುದಿಲ್ಲ. ಆಧಾರ್ ಅನ್ನು ದೃಢೀಕರಿಸಲು myaadhaar.uidai.gov.in/verifyAadhaar ವೆಬ್ಸೈಟ್ಗೆ ಹೋಗಬೇಕು ಎಂದು UIDAI ಹೇಳಿದೆ.
- ಆಧಾರ್ ಒಟಿಪಿ: ಆಧಾರ್ ದೃಢೀಕರಣಕ್ಕೆ ಇರುವ ಅತ್ಯುತ್ತಮ ಮತ್ತು ಸುಲಭದ ಮಾರ್ಗವೆಂದರೆ ಆಧಾರ್ ಒಟಿಪಿ. ಇದನ್ನು ನೀವಷ್ಟೇ ಬಳಸಬೇಕು. ಬೇರೆ ಯಾರೊಂದಿಗೂ ಇದನ್ನು ಶೇರ್ ಮಾಡಬಾರದು. ನೀವು ನೋಂದಾಯಿಸಿರುವ ಮೊಬೈಲ್ ನಂಬರ್ಗೆ ಮಾತ್ರ ಆಧಾರ್ ಒಟಿಪಿ ಬರುತ್ತದೆ.
- ಆಧಾರ್ ದೃಢೀಕರಣದ ಇತಿಹಾಸ: ಕಳೆದ 6 ತಿಂಗಳ ಅವಧಿಯಲ್ಲಿ ನೀವು ಎಷ್ಟು ಬಾರಿ ಆಧಾರ್ ದೃಢೀಕರಿಸಿದ್ದೀರಿ ಎನ್ನುವುದನ್ನು ಪರಿಶೀಲಿಸಬಹುದು. ಗಮನಿಸಿ, ಇದು ಗರಿಷ್ಠ 50 ದೃಢೀಕರಣನ್ನು ಮಾತ್ರ ತೋರಿಸುತ್ತದೆ. ಒಂದು ವೇಳೆ ನಿಮ್ಮ ಇಷ್ಟಕ್ಕೆ ವಿರುದ್ಧವಾಗಿ ಅಥವಾ ನಿಮ್ಮ ಗಮನಕ್ಕೆ ಬಾರದಂತೆ ಆಧಾರ್ ಸಂಖ್ಯೆ ಬಳಕೆಯಾಗಿದ್ದರೆ ಈ ಹಂತದಲ್ಲಿ ನೀವು ಕಂಡುಕೊಳ್ಳಬಹುದು.
- ಆಧಾರ್ ಡೌನ್ಲೋಡ್: UIDAI ವೆಬ್ಸೈಟ್ ಬಳಕೆಯ ಮುಖ್ಯ ಉದ್ದೇಶವೇ ಆಧಾರ್ ಡೌನ್ಲೋಡ್ ಮಾಡಿಕೊಳ್ಳುವುದು ಆಗಿರುತ್ತದೆ. ಒಂದು ವೇಳೆ ನೀವು ಸಾರ್ವಜನಿಕ ಕಂಪ್ಯೂಟರ್ನಲ್ಲಿ ಆಧಾರ್ ಡೌನ್ಲೋಡ್ ಮಾಡಿಕೊಂಡಿದ್ದರೆ ಅಥವಾ UIDAI ವೆಬ್ಸೈಟ್ ಬಳಸಿದ್ದರೆ ಡೌನ್ಲೋಡ್ ಆಗಿರುವ ಫೈಲ್ ಡಿಲೀಟ್ ಮಾಡಲು ಮತ್ತು ಹಿಸ್ಟರಿ ಕ್ಲಿಯರ್ ಮಾಡಲು ಮರೆಯದಿರಿ.
- ಆಧಾರ್ ಬಯೊಮೆಟ್ರಿಕ್ಸ್: ಆಧಾರ್ ಬಯೊಮೆಟ್ರಿಕ್ಸ್ ವಿವರಗಳನ್ನು ಪರಿಶೀಲಿಸುವ ಮೂಲಕವೂ ಆಧಾರ್ ದುರ್ಬಳಕೆ ತಡೆಯಬಹುದು. ಇದಕ್ಕಾಗಿ ಆಧಾರ್ ಆ್ಯಪ್ ಅಥವಾ ಪೋರ್ಟಲ್ ಬಳಸಬಹುದು. ಗಮನಿಸಿ, ಈ ಪ್ರಕ್ರಿಯೆ ಪೂರ್ಣಗೊಳಿಸಲು ವರ್ಚುವಲ್ ಐಡಿ (VID) ಅತ್ಯಗತ್ಯ. ಬಯೊಮೆಟ್ರಿಕ್ಸ್ ನಿಯಂತ್ರಕ್ಕಾಗಿ ಬಳಸಬೇಕಾದ ಲಿಂಕ್: resident.uidai.gov.in/aadhaar-lockunlock
- ಮಾಸ್ಕಡ್ ಆಧಾರ್: ನಿಮಗೆ ಆಧಾರ್ ನಂಬರ್ ಸಂಪೂರ್ಣವಾಗಿ ಬಹಿರಂಗಪಡಿಸುವುದು ಇಷ್ಟವಿಲ್ಲ ಎಂದಾದರೆ ನೀವು ಮಾಸ್ಕಡ್ ಆಧಾರ್ ಅಥವಾ ವರ್ಚುವಲ್ ಐಡಿ (VID) ಬಳಸಬಹುದು. ಇದಕ್ಕೂ ಮಾನ್ಯತೆಯಿದ್ದು, ಎಲ್ಲಡೆ ಬಳಸಬಹುದಾಗಿದೆ. ಮಾಸ್ಕ್ ಆಧಾರ್ ಆಪ್ಷನ್ ಮೂಲಕ ನೀವು ಡೌನ್ಲೋಡ್ ಮಾಡಿಕೊಂಡರೆ ನಿಮ್ಮ ಆಧಾರ್ ನಂಬರ್ ಮರೆಮಾಚಬಹುದು. ನಿಮ್ಮ ಆಧಾರ್ ಅಂಕಿಗಳನ್ನು xxxx-xxxx ಮೂಲಕ ನಿಮ್ಮ ನಿಜವಾದ ಅಂಕಿಗಳನ್ನು ಮಾಸ್ಕಡ್ ಆಧಾರ್ಗಳಲ್ಲಿ ಮರೆಮಾಚಬಹುದು. ಕೊನೆಯ ನಾಲ್ಕು ಅಂಕಿಗಳು ಮಾತ್ರ ಎಲ್ಲರಿಗೂ ಕಾಣಿಸುತ್ತದೆ.
- ಮೊಬೈಲ್ / ಇಮೇಲ್ ಅಪ್ಡೇಟ್ ಮಾಡಿ: ಆಧಾರ್ ವ್ಯವಸ್ಥೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದನ್ನು ಮರೆಯದಿರಿ. ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಅಪ್ಡೇಟ್ ಮಾಡುವಲ್ಲಿ ಸಮಸ್ಯೆಯಾಗಿದೆ ಎನಿಸಿದರೆ myaadhaar.uidai.gov.in/verify-email-mobile ಲಿಂಕ್ ಮೂಲಕ ನೀವು ನಿಮ್ಮ ಆಧಾರ್ಗೆ ಜೋಡಣೆಯಾಗಿರುವ ಮೊಬೈಲ್, ಇಮೇಲ್ ಸರಿಪಡಿಸಿಕೊಳ್ಳಬಹುದು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ