ದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಐದು ರಾಜ್ಯಗಳಿಗೆ ಪತ್ರ ಬರೆದು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಮಿಜೋರಾಂ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಕೇಂದ್ರ ಅರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ. ಟೆಸ್ಟ್, ಟ್ರ್ಯಾಕ್, ಟ್ರೀಟ್ಮೆಂಟ್, ವ್ಯಾಕ್ಸಿನೇಷನ್ ಹೆಚ್ಚಿಸುವಂತೆ ಅವರು ಸಲಹೆ ಮಾಡಿದ್ದಾರೆ. ಜಿನೋಮಿಕ್ ಸೀಕ್ವೆನ್ಸಿಂಗ್ ಹೆಚ್ಚಿಸಿ, ಹೆಚ್ಚು ಜನರು ಗುಂಪು ಸೇರದಂತೆ ನಿಗಾವಹಿಸಿ, ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಹೇಳಿದ್ದಾರೆ. ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.
ಭಾರತದಲ್ಲಿ ಕಳೆದ ಎರಡು ತಿಂಗಳುಗಳಿಂದ ಕೊವಿಡ್-19 ಪ್ರಕರಣಗಳು ಸತತವಾಗಿ ಇಳಿಕೆಯಾಗುತ್ತಿವೆ. ದೇಶದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಸುಮಾರು 1000ದ ಆಸುಪಾಸಿನಲ್ಲಿದೆ. ಪಾಸಿಟಿವಿಟಿ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆಯಿದೆ. ಆದರೆ ಇತ್ತೀಚೆಗೆ ಕೆಲ ರಾಜ್ಯಗಳಿಂದ ವರದಿಯಾಗುತ್ತಿರುವ ಸೋಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ಈಗಾಗಲೇ ಸಾಧಿಸಿರುವ ಯಶಸ್ಸು ವಿಫಲವಾಗದಂತೆ ಇಂಥ ರಾಜ್ಯಗಳು ಕ್ರಮಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಇನ್ಫ್ಲುಯೆನ್ಜಾ ಮತ್ತು ಶ್ವಾಸಕೋಶದ ಸೋಂಕು ಪ್ರಕರಣಗಳನ್ನು ಗುರುತಿಸಿ, ಚಿಕಿತ್ಸೆ ಕೊಡಿಸಬೇಕು. ವಿದೇಶಗಳಿಂದ ಬರುವ ಪ್ರಯಾಣಿಕರ ಜಿನೊಮಿಕ್ ಸೀಕ್ವೆನ್ಸಿಂಗ್ ಮಾಡಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಮಾದರಿ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು. ಪ್ರಕರಣಗಳು ಬೆಳಕಿಗೆ ಬಂದ ಸ್ಥಳದಲ್ಲಿ ಸ್ಥಳೀಯವಾಗಿ ಕ್ಲಸ್ಟರ್ ರೂಪಿಸಬೇಕು ಎಂದು ಭೂಷಣ್ ಸಲಹೆ ಮಾಡಿದ್ದಾರೆ.
ಎಲ್ಲ ಅರ್ಹ ವಯೋಮಿತಿಯವರಿಗೆ ಲಸಿಕೆ ಸಿಗುವುದನ್ನು ಖಾತ್ರಿಪಡಿಸಿಕೊಳ್ಳಬೇಕು ವೈರಸ್ ಹರಡುವುದು ಮತ್ತು ರೂಪಾಂತರಗೊಳ್ಳುವುದನ್ನು ತಡೆಯಲು ಕಟ್ಟೆಚ್ಚರ ವಹಿಸಬೇಕು. ಟೆಸ್ಟಿಂಗ್ ಮತ್ತು ಸರ್ವಲೆನ್ಸ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಯಾವುದೇ ಹಂತದಲ್ಲಿ ನಾವು ಎಚ್ಚರ ತಪ್ಪಿದರೂ ಸೋಂಕು ನಿರ್ವಹಣೆ ವಿಚಾರದಲ್ಲಿ ಈವರೆಗೆ ಸಾಧಿಸಿದ ಎಲ್ಲ ಮುನ್ನಡೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭಾರತದಲ್ಲಿ ಮಂಗಳವಾರ (ಏಪ್ರಿಲ್ 19) 11,860 ಸಕ್ರಿಯ ಪ್ರಕರಣಗಳಿದ್ದವು.
ಇದನ್ನೂ ಓದಿ: ಅಮಾರೈಟ್: ಈ ‘ಕೋಮು ಕೊರೊನಾ’ದಿಂದ ನಮ್ಮನ್ನು ಕಾಪಾಡುವುದು ಮಾಸ್ಕುಗಳಲ್ಲ, ಮಾಸ್ಕಿಲ್ಲದ ಮನಸ್ಸು ಮಾತ್ರ
ಇದನ್ನೂ ಓದಿ: ದೇಶದಲ್ಲಿ ಇಂದು 2 ಸಾವಿರಕ್ಕೂ ಅಧಿಕ ಕೊರೊನಾ ಕೇಸ್ಗಳು ದಾಖಲು; ನಿನ್ನೆಗಿಂತ ಸಾವಿರ ಹೆಚ್ಚು, 214 ಮಂದಿ ಸಾವು
Published On - 7:25 am, Wed, 20 April 22