ಅಮಾರೈಟ್: ಈ ‘ಕೋಮು ಕೊರೊನಾ’ದಿಂದ ನಮ್ಮನ್ನು ಕಾಪಾಡುವುದು ಮಾಸ್ಕುಗಳಲ್ಲ, ಮಾಸ್ಕಿಲ್ಲದ ಮನಸ್ಸು ಮಾತ್ರ

Bhavya Naveen : ನನಗಿಲ್ಲಿ ಈ ಬಿರುಬೇಸಿಗೆಯ ಮಳೆದಿನದಲ್ಲಿ ಪೆನ್ಸಿಲು, ಬರೆಬರೆಯುತ ಬರೆದ ತಪ್ಪುಗಳಂತೆ ಅನಿಸಿದರೆ, ಎರೇಸರ್‌ ಅದನ್ನೆಲ್ಲಾ ಅಳಿಸಿ, ಒರೆಸಿ ಸರಿಪಡಿಸಿಕೊಡಬಹುದಾದ ‘ಕ್ಷಮೆʼ ಎನಿಸುತ್ತಿದೆ. ಇನ್ನು ಈ ಶಾರ್ಪ್‌ನರ್‌ ಎಂದರೆ ಅವಕಾಶಗಳ ಹಾಗೆ. ಬೇಕಾದರೆ ತಪ್ಪುಗಳನ್ನಾದರೂ ಶಾರ್ಪ್‌ ಮಾಡಬಹುದು, ಎರೇಸರನ್ನೂ!

ಅಮಾರೈಟ್: ಈ ‘ಕೋಮು ಕೊರೊನಾ’ದಿಂದ ನಮ್ಮನ್ನು ಕಾಪಾಡುವುದು ಮಾಸ್ಕುಗಳಲ್ಲ, ಮಾಸ್ಕಿಲ್ಲದ ಮನಸ್ಸು ಮಾತ್ರ
Follow us
|

Updated on: Apr 19, 2022 | 6:00 AM

ಅಮಾರೈಟ್ | Amaright : ಮಕ್ಕಳಿಗೀಗ ರಜೆ. ಓದುವುದನ್ನು ಸದ್ಯಕ್ಕೆ ಅವರು ಸ್ವಯಂ ನಿಷೇಧಿಸಿಕೊಂಡಿರುವುದರಿಂದ ಜಗತ್ತು ಅವರ ಪಾಲಿಗೀಗ ತುಂಬಾ ಕಲರ್‌ಫುಲ್. ಅವರ ತಳಬುಡವಿಲ್ಲದ ಅನಂತ ಕನಸುಗಳು ಗೀಚು ಗೆರೆಗಳಲ್ಲಿ ಎಷ್ಟು ನಿಯತ್ತಾಗಿ ಅದ್ಭುತ ಕಲಾಕೃತಿಗಳಂತೆ ರೂಪು ಪಡೆಯುತ್ತಿರುತ್ತಾವೆಂದರೆ ಅದರ ಬಗ್ಗೆ ಹೇಳಿದರೆ ಹೆಚ್ಚೋ, ಕಡಿಮೆಯೋ ಆಗಿ ಕಣ್ಣೆಸರಾದರೆ ಅಂತ ಖುದ್ದು ನಾನೇ ಕಂಜೂಸಿಂದ ಆ ಕಡೆ ದೃಷ್ಟಿ ಹಾಯಿಸುತ್ತೇನೆ. ‌ನಿತ್ಯ ಹಳವಂಡಗಳ ವ್ಯಸ್ತ ಕಣ್ಣುಗಳಿಗೆ ಈಗ ದಿನಾಪ್ರತಿ ಆರ್ಟ್‌ ಎಕ್ಸಿಬಿಷನ್!; ಸೋಫಾ ಕುಷನ್ನಿನ ಸಂದುಗಳಲ್ಲಿ ಎರೇಸರ್ ಕದ್ದಿಟ್ಟಿದ್ದರೆ, ಹಾಸಿಗೆಯ ತಲೆಬಳಿ ಶಾರ್ಪ್‌ ಮಾಡಿದ ಪೆನ್ಸಿಲಿನ ಹೂದಳಗಳು. ಮೂಲೆಯಲ್ಲಿ ಕಸ ಗುಡಿಸುವಾಗ ಈಗೀಗಂತೂ ತುಂಬಾ ಎಚ್ಚರವಾಗಿರಬೇಕು. ಕಸದ ಮಧ್ಯೆ ಕ್ರೇಯಾನ್ಸು, ಮೋಟು ಪೆನ್ಸಿಲು, ಅಕ್ಷರಶಃ ಗಬ್ಬೆದ್ದು ಹೋಗಿರುವ ಎರೇಸರ್‌ ಮತ್ತು ಅವೇ ಅವರ ಸೂಕ್ಷ್ಮ ಕಲಾಕೃತಿಗಳು ಬೇರೆಂದಿಗಿಂತಲೂ ಹೆಚ್ಚು ಬೆರೆತು ಹೋಗಿರುತ್ತವಲ್ಲ.. ಅವನ್ನು ನಾಜೂಕಾಗಿ ಆರಿಸಿ ತೆಗೆದು ಜೋಪಾನಿಸಿಕೊಳ್ಳಬೇಕಾದ ಎಚ್ಚರ ಮೈಗೂಢಿಸಿಕೊಳ್ಳುವುದೇ ಅಮ್ಮಂದಿರಿಗೆ ಒಂಥರಾ ಬೇಸಿಗೆ ಶಿಬಿರ. ಈ ಶಿಬಿರದಲ್ಲಿ, ಹಿಂದೆಂದಿಗಿಂತ ಬೇರೆಯದಾಗಿ… ಬರೆದು, ಅಳಿಸಿ, ಕಡೆಗೂ ಚಿತ್ರಿಸುವ ಕಲೆಗಾರಿಕೆಯ ಪ್ರಕ್ರಿಯೆಗಳು ನನಗೆ ಬೇರೆಯೇ ಕಾಣಿಸುತ್ತಿದೆ. ಕಸದಲ್ಲಿ ಪುನಃ ಪುನಃ ಸಿಗೇ ಬೀಳುತ್ತಿರುವ ಈ ಪರಿಕರಗಳು ಹೊಸ ಉಪಮೆಗಳಾಗಿ ಎದೆ ಸೇರಿಕೊಂಡಿವೆ. ಭವ್ಯಾ ನವೀನ, ಕವಿ, ಲೇಖಕಿ (Bhavya Naveen)

(ಬಿಲ್ಲೆ 8)

ಜಗತ್ತಲ್ಲಿ ತಪ್ಪಿನ ತೂಕಕ್ಕೆ ಸರಿಸಮವಾದ ಮತ್ತೊಂದಿದ್ದರೆ ಅದು ನೂರಕ್ಕೆ ನೂರು – ಕ್ಷಮೆಯೇ. ತಪ್ಪಿನ ಆಘಾತ-ಅನಾಹುತಗಳ ಆಳಕ್ಕಿಂತಲೂ ಆಳದಲ್ಲಿ, ಕ್ಷಮೆ ಎನ್ನುವ ಜಾದೂ ತೀವ್ರವಾಗಿ ಕೆಲಸ ಮಾಡುತ್ತಿರುತ್ತದೆ. ತಪ್ಪಿಗಿಂತಲೂ ದೊಡ್ಡದು ಕ್ಷಮೆ ಅಂತ ಮಾತಿಗೆ ಹೇಳಬಹುದೇನೋ. ಆದರೆ ಸದಾ ಸಮಾನತೆಯ ಮಾತಾಡುವ ಸಮಯದಲ್ಲಿ ಜೊತೆಜೊತೆಗೆ ಬದುಕಬೇಕಾದ ತಪ್ಪು-ಕ್ಷಮೆ ಎಂಬಿಬ್ಬರ ಮಧ್ಯೆ ಮನಸ್ತಾಪ ಯಾಕೆ ತಂದಿಡುವುದು ಅಂತ ಅವೆರಡನ್ನೂ ಒಂದೇ ತೂಗುಬಟ್ಟಿನಲ್ಲಿ ತೂಗುತ್ತಿದ್ದೇನೆ. ಅದರಲ್ಲೂ ಮೊದಲೇ ಹೇಳಿದೆನಲ್ಲ. ಈ ಇನ್‌ಹೋಮ್‌ ಬೇಸಿಗೆ ಶಿಬಿರದಲ್ಲಿ ಯಥೇಚ್ಛವಾಗಿ ಕಾಣಿಸುತ್ತಿರುವ ಮೋಟಾದ ಪೆನ್ಸಿಲ್, ಸವೆದ ಎರೆಸರ್‌ ಮತ್ತು ಮೊಂಡುಬಿದ್ದ ಶಾರ್ಪ್‌ನರ್‌ಗಳ ಸಂತೆಯಲ್ಲಿ; ಎಲ್ಲವೂ ಸಮಾ ಸಮಾ ಅಂತಲೇ ನನಗನ್ನಿಸುತ್ತಿದೆ. ಪೆನ್ಸಿಲಿಗಿಂತ ಎರೆಸರ್‌, ಎರೆಸರ್‌ಗಿಂತ ಶಾರ್ಪ್‌ನರ್‌ ಹೇಗೂ ಭಿನ್ನವೂ ಅಲ್ಲ, ಮುಖ್ಯ – ಅಮುಖ್ಯವೂ ಅಲ್ಲ. ಎರೇಸರ್‌ ಇಲ್ಲದೆ ಪೆನ್ಸಿಲಿತ್ತಾದರೆ ಚಿತ್ತುಚಿತ್ತಾದ ಚಿತ್ರಪುಸ್ತಕದಲ್ಲಿ ಏನನ್ನು ಹುಡುಕುವುದು? ಪೆನ್ಸಿಲಿಲ್ಲದ ಎರೇಸರ್‌ ಇಟ್ಟುಕೊಂಡು ಸಾಧಿಸುವುದಾದರೂ ಏನನ್ನು? ಇನ್ನು ಅವೆರಡೂ ಇದ್ದು ಶಾರ್ಪ್‌ನರ್‌ ಕೈಗೆ ಸಿಗದಿದ್ದರೆ  ಮುರಿದ ಮದ್ದಿನ ಪೆನ್ಸಿಲಿನಿಂದ ಏನನ್ನು ತಾನೇ ಸೃಜಿಸಬಹುದು! ನನಗಿಲ್ಲಿ ಈ ಬಿರುಬೇಸಿಗೆಯ ಮಳೆದಿನದಲ್ಲಿ  ಪೆನ್ಸಿಲು – ಬರೆ ಬರೆಯುತ ಬರೆದ ತಪ್ಪುಗಳಂತೆ ಅನಿಸಿದರೆ, ಎರೇಸರ್‌ ಅದನ್ನೆಲ್ಲಾ ಅಳಿಸಿ, ಒರೆಸಿ ಸರಿಪಡಿಸಿಕೊಡಬಹುದಾದ ‘ಕ್ಷಮೆʼ ಎನಿಸುತ್ತಿದೆ. ಇನ್ನು ಈ ಶಾರ್ಪ್‌ನರ್‌ ಎಂದರೆ ಅವಕಾಶಗಳ ಹಾಗೆ. ಬೇಕಾದರೆ ತಪ್ಪುಗಳನ್ನಾದರೂ ಶಾರ್ಪ್‌ ಮಾಡಬಹುದು, ಎರೇಸರನ್ನೂ.. !  ಅಮಾರೈಟ್‌..?

ನಿಮಗೆಲ್ಲಾ ಗೊತ್ತೇ ಇರುವ ತಮಾಶೆಯೆಂದರೆ, ಯಾವುದು ತಪ್ಪು ಅಂತ ನಿರ್ಧರಿಸುವುದರಲ್ಲೇ ಬಹಳಷ್ಟು ಸಾರ್ತಿ ತಪ್ಪುಗಳಾಗಿ ಹೋಗಿರುತ್ತವೆ ಎನ್ನುವುದು. ಎದುರಿನವರ ತಪ್ಪು, ಒಳಗಿನವರ ತಪ್ಪು, ಹತ್ತಿರದವರ ತಪ್ಪು ಮತ್ತು ಸ್ವಯಂಕೃತ ತಪ್ಪು. ಇಲ್ಲಿ ಯಾರ ತಪ್ಪುಗಳು, ಯಾವುದು ತಪ್ಪು ಮತ್ತು ಎಷ್ಟು ತಪ್ಪು ಅಂತ ನಿರ್ಧರಿಸುವುದು ಬಹಳ ಕಷ್ಟ. ಈ ಕಡೆ ಕ್ಷಮೆ ಎನ್ನುವುದೂ ಅಷ್ಟೇ ಕಾಂಪ್ಲಿಕೇಟೆಡ್. ಮಗಳು ಬಿಡಿಸಿ ತೋರಿಸಿದ ಚಿತ್ರದಲ್ಲಿ ತೆಳ್ಳಗಿದ್ದರೂ ಗಾಢವಾಗಿ ಕಾಣಿಸುತ್ತಿರುವ ಬಿಡಿಸಿ ಒರೆಸಿದ ಕಲೆ ಇದೆಯಲ್ಲ… ಅದು ಕ್ಷಮೆ ಎನ್ನುವುದನ್ನು ಬರೀ ಕಾಂಪ್ಲಿಕೇಟೆಡ್‌ ಅಂತಷ್ಟೇ ಹೇಳಿ ಮುಗಿಸಲು ಬಿಡುವುದಿಲ್ಲ, ಅದೊಂಥರ ಇಂಟಗ್ರಲ್‌ ಎಲಿಮೆಂಟ್‌ ಆಗಿ  ಎಂದಿನವರೆಗೂ ಉಳಿದೇ ಹೋಗುವ ಎಲ್ಲಾ ಸಾಧ್ಯತೆಗಳು ಅಲ್ಲಿದ್ದೇ ಇದೆ.

ತಪ್ಪುಗಳೆಂದರೆ ಲಿಟ್ರಲೀ… ಕಲೆಗಳಿರುವ ಕಲಾಕೃತಿಗಳೇ! ಎರೇಸರ್‌ಗೇನು. ತನ್ನ ಕೆಲಸ ಮಾಡಿಯಷ್ಟೇ ಗೊತ್ತು. ಮ್ಯಾಜಿಕ್‌ ಮಾಡುವುದಕ್ಕೆಲ್ಲಿ ಗೊತ್ತು?. “ಕ್ಷಮೆಗೆ ಮಾತ್ರ ಮ್ಯಾಜಿಕ್‌ ಗೊತ್ತಿದೆ” ಅನ್ನುವುದನ್ನು ನಾನು ಅಕ್ಷರಶಃ ನಂಬಿಯೂ; ಕ್ಷಮೆ ಅನ್ನುವುದನ್ನೇ ಅತೀ ದೊಡ್ಡ ಕ್ಲೀಷೆಯಾಗಿ ನೋಡುವುದನ್ನು ರೂಢಿಸಿಕೊಳ್ಳುವುದರ ಬಗ್ಗೆ ಇರಬಹುದಾದ ಆಳದ ಹಿನ್ನೆಲೆಗಳನ್ನೂ ನಂಬಬೇಕಾಗುತ್ತದೆ ಅಂದರೆ, ಅದು ಒಪ್ಪಬೇಕಾಗಿರುವುದೇ. ತಪ್ಪಿನ ಕಲೆ ಉಳಿಸಿಕೊಂಡೇ ‘ಕ್ಷಮೆʼಯೂ ಮತ್ತು ಕಲೆಯಾಗಿ ಉಳಿದ ‘ತಪ್ಪೂʼ ಒಂದೇ ಚಿತ್ರದಲ್ಲಿ ಹೈಲೈಟ್‌ ಆದಾಗ ಮಾತ್ರ ಅದೊಂದು ರೆಫರೆನ್ಸ್‌ ಆಗಿ ಎದೆಗೋಡೆಗಂಟಿಕೊಳ್ಳುತ್ತದೇನೋ.. ಐ ಡೋಂಟ್‌ ನೋ..! ಆದರೂ ಜಗತ್ತಿನ ಮಿಕ್ಕೆಲ್ಲಕ್ಕಿಂತಲೂ.. ಕ್ಷಮೆಗಿಂತಲೂ.. ತಪ್ಪುಗಳಿಗೇ ಪ್ರಾಮಾಣಿಕತೆ ಜಾಸ್ತಿ. ಕ್ಷಮೆಯ ವಿಚಾರಕ್ಕೆ ಬಂದಾಗ ಬಹಳಷ್ಟು ಸಾರ್ತಿ ‘ಕ್ಷಮೆʼ ಕ್ಷಮಿಸಿದ ಮೇಲೂ ತಪ್ಪಿನ ಗಾಢ ನೆರಳನ್ನು ಮತ್ತೂ ಅಲ್ಲೇ ಉಳಿಸಿ ಬಂದಿರುತ್ತದೆ. ತಪ್ಪುಗಳು ತಮ್ಮ ಮಟ್ಟಿಗೆ ಸರ್ವ ಸ್ವತಂತ್ರ. ಕೆಲವೊಮ್ಮೆ ತಪ್ಪುಗಳೇ ತಪ್ಪುಗಳನ್ನು ಸರಿ ಮಾಡಿದರೆ, ಕೆಲವೊಮ್ಮೆ ಸಣ್ಣ ತಪ್ಪುಗಳೇ ದೊಡ್ಡ ತಪ್ಪುಗಳನ್ನು ಮಾಡಿ ಮುಗಿಸುವಷ್ಟಿದೆ ಅನ್ನುವುದೂ ಅವರವರವರ ಮಟ್ಟಿಗೆ ಅನುಭವವೇ.

‌*

ಇದನ್ನೂ ಓದಿ : Gabriel Garcia Marquez Death Anniversary: ಪ್ರೀತಿ ಕೂಡ ಚುಕ್ಕಾಣಿಯಾಗದೇ ಹೋದರೆ ಏನು ಮಾಡಬೇಕು

ಮನೆ ತುಂಬಾ ಮಕ್ಕಳಿರಬೇಕು. ಕಲಿಯುವುದಕ್ಕೆ ಪುರುಸೊತ್ತಿಲ್ಲದ ಗ್ಯಾಪಿನಲ್ಲೂ ಅವರು ಸಿಕ್ಕಾಪಟ್ಟೆ ಕಲಿಸಾಗಿರುತ್ತದೆ. ಆದರೆ ಕಲಿತ ಪಾಠ ಪರೀಕ್ಷೆಯಲ್ಲಿ ಕೈ ಕೊಟ್ಟು ಆಚೆ ಬಂದ ಮೇಲೆ ಒಂದೊಂದಾಗೇ ನೆನಪಾಗುತ್ತದಲ್ಲ, ಹಾಗಾದಾಗ ಕ್ಷಮೆ ಎನ್ನುವುದೂ ಧಾರಾಳವಾಗಿಯೇ ಬೇಕಾಗುತ್ತದೆ.  ನನಗೋ ಈ ವಿಪರೀತ ಸಿಟ್ಟು ಬರುವ ಅಪರೂಪದ ದಿನಗಳಲ್ಲೇ,  ಮುಖ್ಯವಾಗಿರುವವರು.. ಆಪ್ತರು ಎದುರಾದಾಗುವುದನ್ನು ನಾನೀಗೀಗ ಸಪ್ರೈಸ್‌ ಟೆಸ್ಟುಗಳೇ ಅಂತ ಪರಿಗಣಿಸಿದ್ದೇನಾದರೂ ನಾನು ಈ ಟೆಸ್ಟ್‌ಗಳಲ್ಲಿ ಪಾಸ್ ಆಗುವುದು ತೀರಾ ಕಡಿಮೆ.

ಇನ್ನೊಂದು ವಿಷಯದ ಬಗ್ಗೆ ಹೇಳಲೇಬೇಕು, ತಪ್ಪುಗಳನ್ನು ಮಾಡುವುದು ಎಷ್ಟು ತಪ್ಪೋ.. ತಪ್ಪುಗಳನ್ನು ನೋಡಿ ಸುಮ್ಮನಾಗುವುದು ಎಷ್ಟು ತಪ್ಪೋ.. ಹಾಗೆಯೇ; ಈಗೀಗ ತಪ್ಪುಗಳನ್ನು ತಪ್ಪು ಅಂತ ಎತ್ತೆತ್ತಿ ಎಣಿಸಿಕೊಡುವುದು ಅಷ್ಟೇ ದೊಡ್ಡ ತಪ್ಪಾಗಿ ಬಿಂಬಿತವಾಗುತ್ತಿರುವುದನ್ನು ಗಮನಿಸಬೇಕು. ಒಮ್ಮೊಮ್ಮೆಯಂತೂ ತಪ್ಪು ಮಾಡುವುದಕ್ಕಿಂತಲೂ, ಬರೀ ತಪ್ಪನ್ನು ಮಾತಾಡಿಯೇ ತಪ್ಪಿತಸ್ಥರಾಗುವುದಿದೆಯಲ್ಲಾ.. ಅಂತಹದ್ದೊಂದು ದೊಡ್ಡ ಸಮುದಾಯವೇ “ಹಾಗಲ್ಲ, ಹೀಗೆ.. ಹೀಗಲ್ಲ ಹಾಗೇ” ಅಂತ ಅಲವತ್ತುಕೊಂಡೇ ಅಸ್ತಿತ್ವದಲ್ಲಿದೆ ಎನ್ನುವುದನ್ನು ಎಷ್ಟು ಮಂದಿ ನಿರಾಕರಿಸಿ ಯಾರು ಹೇಳಿ?

*

ನಮ್ಮ ಬಾಲ್ಯದಲ್ಲಿ ಪೆನ್ಸಿಲ್ಲು, ರಬ್ಬರು, ಮೆಂಡರು ಅಂತ ಕರೆಯುತ್ತಿದ್ದವೆಲ್ಲಾ ಈಗ ನಾಜೂಕಾಗಿ ಪೆನ್ಸಿಲ್‌, ಎರೇಸರ್‌, ಶಾರ್ಪ್‌ನರ್‌ ಆಗಿ ಮಕ್ಕಳ ಬಾಯಲ್ಲಿ ಬರುವಾಗ ತಪ್ಪು, ಕ್ಷಮೆ ಮತ್ತು ಅವಕಾಶಗಳ ವ್ಯಾಖ್ಯಾನವೂ ಒಂದು ಕಾಲದ ನಂತರ ಒಂದಷ್ಟು ಪಾಲಿಶ್‌ ಆಗುವ ಎಲ್ಲಾ ಸಾಧ್ಯತೆಗಳನ್ನೂ ತನ್ನೊಳಗಿಟ್ಟುಕೊಂಡೇ ಮುಂದುವರೆಯುತ್ತದೆ. ಕಾಲ ಕಾಲಕ್ಕೆ ತಕ್ಕಂತೆ ತಪ್ಪು ಒಪ್ಪುಗಳ ನಿಭಾಯಿಸಿಕೊಂಡು ಹೋಗುವ ಕಲೆಯನ್ನೂ ಅರಗಿಸಿಕೊಂಡು!

ಇದನ್ನೂ ಓದಿ : Literature: ಅನುಸಂಧಾನ; ‘ನೋಟವು ಶಬ್ದಗಳಿಗಿಂತ ಮೊದಲು ತೊಡಗುತ್ತದೆ’

*

ಅವಕಾಶಗಳು ಎಲ್ಲೆಡೆಯೂ ಇರುತ್ತದೆ, ಎಲ್ಲಕ್ಕೂ. ತಪ್ಪಿಗಂತೂ ಸಿಕ್ಕಾಪಟ್ಟೆ ಅವಕಾಶವಿರುತ್ತದೆ. ತಪ್ಪು ಮಾಡುವುದಕ್ಕಾಗಲೀ, ಮಾಡಿದ್ದನ್ನು ವಿರೋಧಿಸದೆ ಉಳಿಯುವುದಕ್ಕಾಗಲೀ, ಅಥವಾ ಯಾರೋ ಮಾಡಿದ್ದನ್ನೇ ಎತ್ತೆತ್ತಿ ತೋರುವುದಕ್ಕಾಗಲೀ ಅವಕಾಶಗಳು ಎಲ್ಲೆಡೆಯೂ ಇರುತ್ತವೆ. ನನ್ನ ಮಟ್ಟಿಗಂತೂ ನಾನು ಈ ಮೂರು ವರ್ಗಗಳಲ್ಲೂ ಬರೋಬ್ಬರಿ ಇದ್ದೇನೆ. ಎರೇಸರ್‌ ಅನ್ನುವುದೂ ಅಷ್ಟೇ ಸುಲಭಕ್ಕೆ ನನ್ನ ಇನ್‌ಬಿಲ್ಟ್‌ ಆರ್ಗನ್. ಕಾಂಪ್ಲಿಕೇಷನ್ ಅನ್ನುವುದು ಇಲ್ಲಿಂದಲೇ ಶುರುವಾಗಿ ಹಿಂಬಾಲಿಸುತ್ತದೆ ಅಂತ ಗೊತ್ತಿದ್ದೂ ನಾನು ಪದ್ಯಗಳನ್ನು ಬರೆದು, ಗದ್ಯಗಳಲ್ಲಿ ಹುಗಿದು ಬರೆಯಬಲ್ಲೆನೆ ಹೊರತು “ಕಂಟ್ರೋಲ್‌” ಅನ್ನುವಂತದ್ದನ್ನು ಸಾಧಿಸುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ ಅನ್ನುವಂತೆ ಇದ್ದುಬಿಡುತ್ತೇನೆ ಅನ್ನುವುದನ್ನು ಹೀಗೇ ಧೈರ್ಯವಾಗಿ ಬರೆದುಕೊಳ್ಳುತ್ತಿದ್ದೇನೆ ಅನ್ನುವುದಕ್ಕೊಂದೇ ಸಮಾಧಾನ, ಅದು “ಆಮ್‌ ಜಸ್ಟ್‌ ಅನದರ್‌ ಯೂ” ಅನ್ನುವ ಅಪಾರ ನಂಬಿಕೆ.

ಪರ್ಸನಲೀ ಬಿಟ್ಟು ಬಿಡಿ ! ಜನರಲೀ.. ಅದರಲ್ಲೂ ಸಾರ್ವಜನಿಕವಾಗಿ ಇತ್ತೀಚೆಗೆ ತುಂಬಾ ತಪ್ಪುಗಳಾಗುತ್ತಿವೆಯಲ್ಲಾ…  ಅದು ನಮ್ಮ ಮುಂದೆ ಬೇಕಾದ್ದನ್ನು ಗೀಚುವ ಅನಂತ ಕ್ಯಾನ್ವಾಸಿನ ಹಾಗೇ ಇರುವ ಡಿಜಿಟಲ್ ಸ್ಪೇಸು ಮತ್ತು ಸಿಕ್ಕಾಪಟ್ಟೆ ಚೂಪಾಗಿರುವ ಅಸಂಖ್ಯ ಪೆನ್ಸಿಲುಗಳ ದೆಸೆಯಿಂದಲೇ ಅನ್ನುವುದು ಒಂದು ವಿಪರ್ಯಾಸ. ತಪ್ಪು ಅನ್ನುವುದು ಭಯಂಕರ ಸಾಂಕ್ರಾಮಿಕ ಕಾಯಿಲೆ, ಬೇಕಾದರೆ ಎಂದೆಂದಿಂದಲೂ ಇರುವ ಕೊರೊನಾ ವೈರಸ್‌ ಅಂತಲೇ ಅನ್ನಿ, ಇದು ತಪ್ಪನ್ನು ಎತ್ತೆತ್ತಿ ತೋರಿಸಿ ತಪ್ಪು ಮಾಡುವ ಮೂರನೇ ವರ್ಗದ ಸೋಂಕಿತರಿಂದ ಹರಡುವಂಥದ್ದು. ಈ “ಕೋಮು ಕೊರೊನಾ”ದಿಂದ ನಮ್ಮನ್ನು ಕಾಪಾಡುವುದು ಮಾಸ್ಕುಗಳಲ್ಲ, ಮಾಸ್ಕಿಲ್ಲದ ಮನಸ್ಸು ಮಾತ್ರ. ಐ ವಿಶ್‌ ಗೆಟ್‌ ವೆಲ್‌ ಸೂನ್‌ ಕರ್ನಾಟಕ!

(ಮುಂದಿನ ಬಿಲ್ಲೆ : 3.5.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಹಿಂದಿನ ಬಿಲ್ಲೆ : ಅಮಾರೈಟ್: ಓದೋದುತ್ತಲೇ ನಾವೂ ಕತೆಯಾಗುವ ಸುಖವನ್ನೂ ಕರುಣಿಸುವ ಸ್ಟೇಷನ್ನು