ಅಮಾರೈಟ್: ಓದೋದುತ್ತಲೇ ನಾವೂ ಕತೆಯಾಗುವ ಸುಖವನ್ನೂ ಕರುಣಿಸುವ ಸ್ಟೇಷನ್ನು

Train Journey : ಶತಾಬ್ಧಿ ರಿಸರ್ವೇಷನ್ನಿನ ಬೋಗಿಯಲ್ಲಿ ಕಾಣುವ ಸಿನಿಮಾಕ್ಕಿಂತ ಭಿನ್ನವಾಗಿ ಶರಾವತಿ ರೈಲಿನ ಕೊನೇ ಬೋಗಿಯಲ್ಲಿ ಕಾಡುವ ಸಿನಿಮಾ. ಒಂದೊಂದರಲ್ಲಿ ಒಂದೊಂದು ಥರ. ಅಷ್ಟೆಲ್ಲದರ ನಡುವೆಯೂ ಸದಾ ಕಾಡುವ ಪಾತ್ರ ಒಂದಿದೆ, ಅದೇ ಆ ಕೆಂಜುಗೂದಲಿನ ವಾರಸುದಾರರದು.

ಅಮಾರೈಟ್: ಓದೋದುತ್ತಲೇ ನಾವೂ ಕತೆಯಾಗುವ ಸುಖವನ್ನೂ ಕರುಣಿಸುವ ಸ್ಟೇಷನ್ನು
ಫೋಟೋ : ಬಾದಲ್ ನಂಜುಂಡಸ್ವಾಮಿ
Follow us
|

Updated on: Apr 05, 2022 | 12:44 PM

ಅಮಾರೈಟ್ | Amaright : ಕನಸುಗಳು, ಗುರಿಗಳು ಸದಾ ಕಣ್ಣೆದುರಿಗೇ ಇರುತ್ತವೆ ಅನ್ನುವುದು ತುಂಬಾ ಪೂರ್ವಾಗ್ರಹ ಅನ್ನಿಸುತ್ತದೆ. ಕನಸುಗಳು ಒಮ್ಮೊಮ್ಮೆ ಬೆನ್ನುಮೂಳೆಗೆ ಅಂಟಿಕೊಂಡ ಹೊರೆಯೂ ಆಗಿರುತ್ತದೆ. ಕೊರಳು ತಬ್ಬಿ ಕೂಸುಮರಿ ಮಾಡಿಕೊಂಡಿರುವ ಕನಸುಗಳ ನೆರಳನ್ನು ಕಣ್ದುಂಬಿಕೊಂಡೇ ಮುನ್ನಡೆಯುವುದು ಬರೀ ನನ್ನದೊಬ್ಬಳದಲ್ಲ, ಬಹಳಷ್ಟು ಜನರ ಅನಿವಾರ್ಯತೆ. ಹೀಗೇ.. ಕನಸುಗಳನ್ನು ಹೊರೆ ಅಂದುಕೊಳ್ಳುವುದನ್ನು ಬಹುಶಃ ಈ ಸಫೋಸ್ಟಿಕೇಟೆಡ್‌ ಮನಸ್ಥಿತಿಯ ಜನರು ಒಪ್ಪಿಕೊಳ್ಳುವುದಿಲ್ಲ. “ಸಫೋಸ್ಟಿಕೇಟೆಡ್‌” ಅನ್ನುವಂಥದ್ದೇ ಬದುಕನ್ನು ಬಹಳಷ್ಟು ಕಾಲ ಬದುಕಿದ ಮೇಲೆ ಮೈದಾನಕ್ಕಿಳಿದು ಆಲ್‌ರೌಂಡರ್‌ ಆಗುವ ಕನಸನ್ನು ಬೆನ್ನಿಗಂಟಿಸಿಕೊಂಡ ಅನುಭವದ ಮೇಲೆ ಹೇಳುತ್ತಿದ್ದೇನೆ. ಒಂದು ಕಂಫರ್ಟ್‌ ಝೋನಿನ ಆಚೆಗೆ ಬಂದು ಎದೆಯ ತಳದಲ್ಲಿದ್ದ ಹಳೆಯ ಕನಸೊಂದನ್ನು ಹೊಸದಾಗಿ ಬದುಕುವುದೆಂದರೆ..! ಎದೆತಳಕ್ಕೂ ಬೆನ್ನುಮೂಳೆಗೂ ಬಹಳ ದೂರವೆಲ್ಲಿದೆ ಹೇಳಿ? ಭವ್ಯಾ ನವೀನ, ಕವಿ, ಲೇಖಕಿ (Bhavya Naveen)

(ಬಿಲ್ಲೆ 7)

ಮಾಡುವುದಕ್ಕೆ ಕೈ ತುಂಬಾ ಕೆಲಸವಿರುವ ಸೃಜನಶೀಲ ಕೂಲಿ ನಾನು ಅನ್ನುವ ಖುಷಿ ಇದೆ ನನಗೆ. ಕೂಲಿ ಅಂದ ಮೇಲೆ ಸಮಯಕ್ಕೆ ಸರಿಯಾಗಿ ಬಟವಾಡೆಯೂ ಇದ್ದೇ ಇರುತ್ತಿತ್ತು. ಆದರೂ ಅಲ್ಲಿಂದ, ಅಥವಾ ಅದರೊಟ್ಟಿಗೇ ಮತ್ತೊಂದು ಕೆಲಸಕ್ಕೆ ಜಿಗಿಯುವುದೆಂದರೆ ಅದು ಆಸೆಯೇ ಆಗಬೇಕಂತಲ್ಲ, ಅದನ್ನು ಅನಿವಾರ್ಯತೆ ಅಂದುಕೊಳ್ಳುವಂತೆಯೂ ಇಲ್ಲ. ಅದೊಂದು ಮಚ್‌ ನೀಡೆಡ್‌ ರಿಲ್ಯಾಕ್ಸೇಷನ್‌ ಅಷ್ಟೇ. ಯಾರು ಹೇಳಿದ್ದಂತ ಗೊತ್ತಿಲ್ಲ.. ಆದರೆ ‘ನಮ್ಮ ಶ್ರಮಕ್ಕಿಂತಲೂ ಹೆಚ್ಚಿಗೆ ನಮ್ಮ ಯೋಚನೆಗಳೇ ನಮ್ಮನ್ನು ಹೆಚ್ಚು ದಣಿಸಿಬಿಡುತ್ತವಂತೆʼ ಅನ್ನುವುದನ್ನು ಕೇಳಿದ್ದೇನೆ. ಕೆಲವೊಂದು ಕೆಲಸಗಳು ಶ್ರಮಕ್ಕಿಂತ ಹೆಚ್ಚಿಗೆ ಯೋಚನೆಗೆ ಹಚ್ಚುತ್ತವಲ್ಲ, ಆಗ ಕೆಲಸದಿಂದ ಹಿಂದೆ ಸರಿಯುವುದಕ್ಕಿಂತ ಮತ್ತೊಂದು ಕೆಲಸಕ್ಕೆ ಶಿಫ್ಟ್‌ ಆಗುವುದೇ ರಿಲ್ಯಾಕ್ಸೇಷನ್‌ ಅನ್ನುವುದನ್ನು    ಕಂಡುಕೊಳ್ಳುವುದು ಒಂಥರ ‘ಯುರೇಕಾ..ಯುರೇಕಾʼ ಮೊಮೆಂಟ್.

ಹಾಗಂತ ಈ ರಿಲ್ಯಾಕ್ಸೇಷನ್‌ಗೆ ಸಿದ್ಧವಾಗಿ ನಿಂತಾಗ ಎಲ್ಲವೂ ಚಂದಗೇ ಇರುವುದಿಲ್ಲ. ನಮಗಂತಲೇ ಇದ್ದ ಛೇರೋಂದನ್ನು ಪಕ್ಕಕ್ಕೆ ಸರಿಸಿ, ಹೊಸ ಗರಿಮುರಿ ಛೇರು ಬಯಸಿ ಎದ್ದುನಿಲ್ಲುವುದನ್ನು ಸಾಧನೆ ಅನ್ನುವವರ ಜೊತೆಗೆ ಹುಚ್ಚುತನ ಅನ್ನುವವರೂ ಇರುತ್ತಾರಲ್ಲ, ಅವರಿಗೆಲ್ಲ ಒಂದು ಅರ್ಥಬದ್ಧ ನಗು ನಕ್ಕಾಗಲೇ ನಾವು ಸಾಧಕರಾಗಿ ಬಿಡುತ್ತೇವೆ. ಬಹಳಷ್ಟು ಸಾರ್ತಿ ನನಗೆ ಅಂತಹ ನಗು ಒಲಿಯುವುದೇ ಇಲ್ಲ ಅನ್ನುವುದು ಬೇರೆ ಮಾತು.   ಎದ್ದು ಹೊರಡುವುದು ಅಂದರೆ ಸುಮ್ಮನೆ ಮಾತಲ್ಲ, ಅದು ಎಲ್ಲಿಂದ – ಎಲ್ಲಿಗಾದಾರೂ, ಯಾಕಾದರೂ, ಯಾವಾಗಾದರೂ ಥಟಕ್ಕನೆ ಎದ್ದು ಹೊರಡುವುದು ಅಂದರೆ ನಿಜಕ್ಕೂ ಸುಮ್ಮನೆ ಮಾತಲ್ಲ. ಹಾಗೇ ವಾರದ ಮೊದಲಿಗೆ ಬೆಳ್ಳಂಬೆಳಗ್ಗೆ ಬಸ್ಸಿಳಿದು ಬಂದು ಸೀದಾ ರೈಲ್ವೇ ಸ್ಟೇಷನ್ನಿನ ಸ್ಟೀಲು ಬೆಂಚಿನ ಮೇಲೆ ಕಾಯುತ್ತಾ ಕೂರುವುದು ಎರಡೆರಡು ಹಳಿಗಳ ಮೇಲೆ ಸಮ ಸಮ ಓಡುವ ರೈಲಿಗಾಗಿ. ಚುಮುಚುಮು ಮುಂಜಾವಿನ ಹೊತ್ತು ಎರಡು ಹಳಿಗಳ ಮೇಲೆ ಸಮಾ ಸಮಾ ಓಡಬೇಕಿರುವ ನಾನೆಂಬೋ ರೈಲೊಂದು, ಚುಕುಬುಕು ರೈಲಿಗಾಗಿ ಕಾಯುತ್ತಾ ಕೂರುವುದನ್ನು ಬರಿ ಇಷ್ಟ-ಕಷ್ಟದ ನಿಟ್ಟಿನಲ್ಲಿ ಹೇಳಲಾಗುವುದಿಲ್ಲ. ಅದೊಂದು ನೆಮ್ಮದಿ.

ಇದನ್ನೂ ಓದಿ : ಋತುವಿಲಾಸಿನಿ: ಮುಕ್ಕಾಲು ಹೆಣ್ಣುಮಕ್ಕಳು ಮೊಮ್ಮಕ್ಕಳ ಕಂಡರೂ ಕನ್ಯೆಯಾಗಿಯೇ ಸಾಯುತ್ತಾರೆ

ನಾನು ಈ ನೆಮ್ಮದಿಯನ್ನು ಅನುಭವಿಸುವಾಗಲೆಲ್ಲಾ ಚದುರುತ್ತಲೇ ಇರುವ ಜಗತ್ತು ನನ್ನ ಸುತ್ತ ಹಾಯುತ್ತಲೇ ಇರುತ್ತದೆ. ಕೆಲವೊಮ್ಮೆ ಕಾಣಿಸುತ್ತದೆ, ಕೆಲವೊಮ್ಮೆ ಕಾಣಿಸುವುದಿಲ್ಲ. ಸಂತೆಯಲ್ಲಿನ ಧ್ಯಾನದ ಅನುಭವಕ್ಕೆ ಆಗಾಗ ಗಿಜಿಗುಡುವ ರೈಲ್ವೇ ಸ್ಟೇಷನ್ನಿನಲ್ಲಿ ಕೂತು ನೋಡಬೇಕು. ಸಾವಿರ ಕತೆಗಳ ಕುಡಿಕೆಯಿಂದ ಬೇಕಾದ್ದನ್ನು ಮಾತ್ರ ಆಯ್ದು ಓದುವ ಸುಖದ ಸ್ಟೇಷನ್ನು ಅದು. ಓದೋದುತ್ತಲೇ ನಾವೂ ಕತೆಯಾಗುವ ಸುಖವನ್ನೂ ಕರುಣಿಸುವ ಸ್ಟೇಷನ್ನು. ಬರುವವರು ಬರುತ್ತಾ, ಹೋಗುವವರು ಹೋಗುತ್ತಾ ಕತೆಗಳು ಆಗಾಗ ಅರ್ಧಂಬರ್ಧಕ್ಕೆ ನಿಂತರೂ ಸಮಾಧಾನಿಸಿ, ಹೊಸ ಪಾತ್ರಗಳನ್ನು ಪರಿಚಯಿಸುವ ಸ್ಟೇಷನ್ನು. ನಾವು ಹುಡುಕಿಕೊಂಡರೆ ನಾವಾದರೂ ಕಾಣಿಸಬಹುದಾದ.. ಬೇಕಾದರೆ, ಬೇಕೆನಿಸಿದವರಂತೆ ನಟಿಸಬಹುದಾದ ಎಲ್ಲಾ ಸಾಧ್ಯತೆಗಳನ್ನು ಆ ಪ್ಲಾಟ್‌ಫಾರ್ಮಿನ ಉದ್ದನ ಸ್ಟೇಜಿನ ಮೇಲೆ ಗುಡ್ಡೆಹಾಕಿಕೊಡುವ ಸ್ಟೇಷನ್ನು. ಕಣ್ಮುಂದೆ ಕನಸಿಟ್ಟುಕೊಂಡವರೂ, ಕನಸನ್ನು ಬೆನ್ನು ಹತ್ತಿಸಿಕೊಂಡವರು, ಕನಸೇ ಇಲ್ಲದಂತೆಯೂ.. ಕನಸಿನಂತೆಯೂ ಬದುಕುತ್ತಿರುವವರನ್ನು ಕಾಣಬೇಕಾದರೆ ನಿರಂತರ ರೈಲ್ವೇ ಸ್ಟೇಷನ್ನಿನಲ್ಲಿ ಕೂತು ರೈಲಿಗಾಗಿ ಕಾಯಬೇಕೇನೋ ಅನ್ನಿಸುತ್ತದೆ. ಶತಾಬ್ಧಿ ರಿಸರ್ವೇಷನ್ನಿನ ಬೋಗಿಯಲ್ಲಿ ಕಾಣುವ ಸಿನಿಮಾಕ್ಕಿಂತ ಭಿನ್ನವಾಗಿ ಶರಾವತಿ ರೈಲಿನ ಕೊನೇ ಬೋಗಿಯಲ್ಲಿ ಕಾಡುವ ಸಿನಿಮಾ. ಒಂದೊಂದರಲ್ಲಿ ಒಂದೊಂದು ಥರ. ಅಷ್ಟೆಲ್ಲದರ ನಡುವೆಯೂ ನನಗೆ  ಸದಾ ಕಾಡುವ ಪಾತ್ರ ಒಂದಿದೆ, ಅದೇ ಆ ಕೆಂಜುಗೂದಲಿನ ವಾರಸುದಾರರದು.

ಮೊನ್ನೆ, ಮೊನ್ನೆ ರೈಲು ಹತ್ತುವ ಮೊದಲು ಸುಡುಸುಡು ಬಿಸಿಲಿಗೆ ತೀರ ಬಳಲಿ ಹಿಂದಿಂದೆ, ಹಿಂದಿಂದೆ ನಾನು ಅಡಗಿ ಕೂತಿರುವಾಗ   ಗಂಟು ಗಂಟು ಕೆಂಜುಗೂದಲಿನ ಎಂಟೊಂಭತ್ತು ವರ್ಷದ ನಾನು ಆವರೆಗೂ ನೋಡಿರದ ಹೊಸಹುಡುಗಿ, ವರ್ಷ ತುಂಬಿರದ ಗುಂಡು ಗುಂಡು ಗಂಡು ಮಗುವೊಂದನ್ನು ಎತ್ತಿಕೊಂಡು ಓಡಾಡುತವಾಗ ಈ ಬಿಸಿಲುಕೋಲು ಅವಳ ಮುಖದ ಮೇಲೆ ಯಾವ ದಾಳಿಯೂ ಮಾಡುತ್ತಿಲ್ಲವಲ್ಲಾ ಅನಿಸಿತು. ಆ ಎಳೇ ಕೂಸಿನದೂ ಕೆಂಜುಗೂದಲೇ.  ಕೆಂಜುಗೂದಲು ಅನ್ನುವುದನ್ನು ನಾನಿಲ್ಲಿ ಸಫೋಸ್ಟಿಕೇಟೆಡ್‌ ಅಲ್ಲದ, ಕಂಫರ್ಟ್‌ ಅನ್ನುವುದರ ಕುರಿತು ಯಾವುದೇ ಐಡಿಯಾ ಇಲ್ಲದೆಯೂ ಸಿಕ್ಕಾಪಟ್ಟೆ ಕಂಫರ್ಟ್‌ ಝೋನಿನಲ್ಲಿರುವ, ಬಿಸಿಲು-ಮಳೆ-ಗಾಳಿಯನ್ನೂ ಎದುರಿಸಿಕೊಂಡವರಂತೆ, ಧೂಳು-ವೈರಸ್ಸು-ಬ್ಯಾಕ್ಟೀರಿಯಾಗಳಿಗೆಲ್ಲಾ ಎದೆಯಲ್ಲಿ ಕರ್ಣಕುಂಡಲ ಧರಿಸಿದವರಂತೆ, ಅದೆಲ್ಲಕ್ಕೂ ಮಿಗಿಲಾಗಿ ಅವರವರ ಜಗತ್ತಿನಲ್ಲಿ ಮಂದಹಾಸದ ಕೊರತೆಯೇ ಇಲ್ಲದಂತೆ ಬದುಕುವ ಅದೊಂದು ವರ್ಗದ ಜನರಿಗೆ; ಎಣ್ಣೆ-ಸೀಗೆ-ಆರೈಕೆ ಯಾವುದನ್ನು ಕಾಣದೆಯೂ ಜೊಂಪೆಜೊಂಪೆಯಾಗಿಯೇ ಗಂಟುಬಿದ್ದಿರುವ ಅವರ ಕೆಂಜುಗೂದಲೇ ಬೆಸ್ಟ್‌ ಮೆಟಾಫರ್‌ ಅನ್ನಿಸಿ ಅವರನ್ನು ಕೆಂಜುಗೂದಲ ವಾರಸುದಾರರು ಅಂತ ಗುರುತಿಟ್ಟುಕೊಂಟಿದ್ದೇನೆ.

ನೋಡಿ ಮತ್ತೆ ನಿಮಗೆ ವಿವರಣೆ ಕೊಡುತ್ತಾ, ಆ ಪುಟ್ಟ ಹುಡುಗಿ ಮತ್ತು ಎಳೇ ಕೂಸನ್ನು ಮರೆತೇ ಬಿಟ್ಟೆ. ಅವತ್ತು ನನ್ನೊಂದಿಗೆ ಶರಾವತಿಯ ಟ್ರೈನು ಹತ್ತಿ ಡಿ೧ ಬೋಗಿಯ ಕಿಟಕಿ ಸೀಟಿನಲ್ಲಿ ಆ ಮಗುವನ್ನು ಎಳ, ಎಳಕೊಳ್ಳುತ್ತಲೇ ತೊಡೆ ಮೇಲೆ ಕೂರಿಸಿಕೊಂಡು ಕೂತಿದ್ದಳಲ್ಲಾ ಆ ಹುಡುಗಿ,  ಅವಳ ಬಲಕ್ಕೆ, ಅವಳ ಎದುರಿನ ಸೀಟಿನ ಮೂಲೆಯ ಕಿಟಕಿ ಬಳಿ ನಾನು ಕೂತಿದ್ದೆ. ಅವರಿಬ್ಬರ ನಿಲ್ಲದ ನಗು, ಖುಷಿ ನನ್ನ ಹೊಟ್ಟೆಯೊಳಗೆ ಏನೋ ಕಲಸಿದಂತೆ ಮಾಡುತ್ತಿತ್ತು. ಇದನ್ನು ನೀವು ಹೊಟ್ಟೆಕಿಚ್ಚು ಅನ್ನುವುದಾದರೆ ನಾನದನ್ನು ಸಾರಾಸಗಟಾಗಿ ನಿರಾಕರಿಸಿಬಿಡುತ್ತೇನೆ, ಆದರೆ ನನಗಾದದ್ದನ್ನು ವಿವರಿಸಲು ನನಗೆ ಬೇರೆ ಪದಗಳೇ ಇಲ್ಲದಿರುವುದರಿಂದ ನನ್ನ ‘ದೃಷ್ಟಿಕೋನದ ಹೊಟ್ಟೆಕಿಚ್ಚುʼ ಅಂತ ನಿಮಗೆ ಹೇಳಿಬಿಡುತ್ತೇನೆ. ಆ ಪುಟ್ಟ ಹುಡುಗಿ ಓಡುವ ಟ್ರೈನಿನ ಹೊರಗೆ ಕಾಣಿಸುವ ಚಿತ್ರಗಳನ್ನು ತೋರಿಸಿ ಮಗುವನ್ನು ನಗಿಸುತ್ತಿದ್ದಳು, ಹೊರಗೆ ಅರ್ಧ ಕೈಹಾಕಿ ಅದೇನನ್ನೋ ಕಿತ್ತುಕೊಡುವವಳಂತೆ ತಂದು ಅವನ ಕೈಗಿಟ್ಟರೆ ಕೂತಲ್ಲೇ ಜಿಗಿ-ಜಿಗಿದು ನಗುತ್ತಿದ್ದ ಆ ಮಗು. ಒಂದೆರಡು ಚಿತ್ರ ಕ್ಲಿಕ್ಕಿಸಿ ಅವರನ್ನು ಅವರಿರುವಂಥದ್ದೇ ಫ್ರೇಮಿನೊಳಗೆ ತರಲು ಸೋತು ಸುಮ್ಮನೆ ನೋಡುತ್ತಾ ಕೂತೆ.  “ಅಯ್ಯೋ! ಈ ಎರಡೇ ಕೂಸುಗಳು ಹೀಗೇ ರೈಲಿನಲ್ಲಿ ಎಲ್ಲಿಗೆ ಹೋಗುತ್ತಿವೆ” ಅನ್ನುವುದನ್ನು ಕಲ್ಪಿಸಿಕೊಂಡು ಸಂಕಟವಾದರೂ, ಮಗನನ್ನು ಆಚೆ ರೋಡಿಗೆ ಶ್ಯಾಂಪೂ ತರಿಸಲು ಕಳಿಸಿ ಹೆದರಿ ಗೇಟಿನಲ್ಲೇ ಕಾದು ನಿಲ್ಲುವಾಗಿನ ನನ್ನ ಅಮ್ಮತನ ನೆನಪಿಸಿಕೊಂಡು ಮತ್ತೊಂದು ತರದ ಸಂಕಟವಾಯಿತು.

ಇದನ್ನೂ ಓದಿ : Poetry : ಅವಿತಕವಿತೆ ; ‘ಮದುವೆಗೆ ಪುರಾವೆ ಸಿಕ್ಕ ಹಾಗೆ ಸುಖಕ್ಕೆ ಖಾತ್ರಿ ಸಿಗಬಹುದಾ?’

ನಾನು ಯೋಚಿಸುತ್ತಲೇ ಆ ಕೆಲಸದಿಂದ ಶಿಫ್ಟ್‌ ಆಗುವಂತೆ ಅರಿವಿಲ್ಲದೆ ನಿದ್ದೆಹೋದೆ. ಚಿತ್ರ ಹಾಗೆಯೇ ಕನಸಿನಲ್ಲೂ ಮುಂದುವರೆದಂತೆ ಕನವರಿಸಿ ಕಣ್ಬಿಟ್ಟಾಗ ರೈಲು ಮೊದಲ ಸ್ಟಾಪ್‌ ಕೊಟ್ಟಿತ್ತು. ಕಣ್ಬಿಟ್ಟಾಗ ಆ ಮಕ್ಕಳು ಅಲ್ಲಿರಲಿಲ್ಲ. ರೈಲಿನಿಂದ ಇಳಿದು ಹೋದರೋ, ಅಥವಾ ಇನ್ನೊಂದು ಬೋಗಿ ಹತ್ತಿದರೋ ಗೊತ್ತಾಗಲಿಲ್ಲ. ಮುಂದಿನ ಪ್ರಯಾಣದುದ್ದಕ್ಕೂ ಅವರು ನಕ್ಕಿದ್ದು ಪ್ರತಿಧ್ವನಿಸುವಾಗ ನಾನು ತುಂಬು ಭಾವನೆಗಳಿದ್ದಾಗ್ಯೂ ಭಾವಶೂನ್ಯ. ಖುಷಿಯಾಗಿರುವುದು ಅವರಿಗೆ ಬಹುಶಃ ಅನಿವಾರ್ಯವೇ ಇರಬೇಕು, ಅಥವಾ ಹಾಗಿರುವುದು ಇನ್‌ಬಿಲ್ಟ್‌ ನೇಚರ್ರೇ ಆಗಿರುವ ಒಂದು ಜಾತಿಯ ಮನುಷ್ಯರಲ್ಲಿ ಅವರು ಕಾಣಿಸಿಕೊಂಡು; ನೋವನ್ನು ನೋವೂ ಅಂತ ತೋರಿಸಿಕೊಳ್ಳಲೂ ಹಿಂಜರಿಯುವ ಮತ್ತೊಂದು ಜಾತಿಯ ಮನುಷ್ಯರಲ್ಲಿ ನಾನೂ ಸೇರಿದಂತೆ ಇಲ್ಲಿ ಕೂತಿರುವ ಇನ್ಯಾರ್ಯಾರು ಪರಿಗಣಿಸಲ್ಪಡುತ್ತಾರೋ ಅಂತ ಒಂದು ಸಲ ಕಣ್ಣಾಯಿಸಿದೆ. ಎಲ್ಲಾ ಧ್ಯಾನದಲ್ಲಿದ್ದರು.

ನಾನು  ಮತ್ತೆ ಆ ಮಕ್ಕಳನ್ನೇ ಹುಡುಕಿದೆ, ಸಿಗಲಿಲ್ಲ. ಸಿಕ್ಕ-ಸಿಕ್ಕಲ್ಲೆಲ್ಲಾ ಹತ್ತಿ, ಸಿಕ್ಕಲ್ಲಿ ಇಳಿಯುವ ಅವರ ದರ್ದುಗಳ, ಅದನ್ನು ‘ದರ್ದ್‌ʼ ಅಂತಲಾದರೂ ಅಂದುಕೊಳ್ಳುತ್ತಾರ ಅನ್ನುವ ಕುತೂಹಲ, ಅನುಮಾನದ ಜೊತೆಗೇ ನಾನವರನ್ನು ಈಗಲೂ ಮತ್ತೆ ಮತ್ತೆ ಹುಡುಕುತ್ತಿರುತ್ತೇನೆ. ಪರ್ಟಿಕ್ಯುಲರ್ಲಿ ಅವರನ್ನೇ ಅಂತಲ್ಲ, ಈ ಕೆಂಜುಗೂದಲಿನ ಯಾವುದೇ ವಾರಸುದಾರರನ್ನು ಕಂಡಾಗಲೂ ಕಾದಂಬರಿಯ ಪಾತ್ರಗಳಂತೆ ಓದಿಕೊಳ್ಳುತ್ತಾ ಕೂರುವ ನಾನು ಅವರು ಕನಸಿರುವವರೋ, ಇಲ್ಲದವರೋ, ಕನಸನ್ನು ಕಣ್ಮುಂದೆ ಇಟ್ಟುಕೊಂಡವರೋ, ಬೆನ್ನಿಗಂಟಿಸಿಕೊಂಡವರೋ ಅನ್ನುವ ನನ್ನ ಲಾಜಿಕಲ್‌ ಮಾತುಗಳನ್ನು ಮರೆತುಹೋಗಿ ಅವರು ಖುದ್ದು ಕನಸಾಗಿ ಅಂಡಲೆಯುತ್ತಿದ್ದಾರೆನೋ ಅಂದುಕೊಳ್ಳುತ್ತೇನೆ. ಆಗೆಲ್ಲಾ ನಾವುಗಳು ಭೃಂಗದ ಬೆನ್ನೇರಿ ಬಂದ  ಕಲ್ಪನಾ ವಿಲಾಸಿ ಅನಿಸಿ  ಮೌನವಾಗಿ ಕೂತು ರೈಲ್ವೇ ಸ್ಟೇಷನ್ನಿನ, ರೈಲು ಭೋಗಿಯ ಅನಂತ ಸದ್ದಿನಲ್ಲೂ ಧ್ಯಾನಸ್ಥಳಾಗುತ್ತೇನೆ.  ಎರಡೆರಡು ಹಳಿಗಳ ಮೇಲೆ ಸಮ ಸಮ ಓಡುವ ರೈಲಿನಲ್ಲಿ… ಎರಡು ಹಳಿಗಳ ಮೇಲೆ ಸಮಾ ಸಮಾ ಓಡಬೇಕಿರುವ ನಾನೆಂಬೋ ರೈಲು ಕಾಯುತ್ತಾ ಕೂರುವಂತೆ !

(ಮುಂದಿನ ಬಿಲ್ಲೆ : 19.4.2022)

ಹಿಂದಿನ ಬಿಲ್ಲೆ : Children: ಅಮಾರೈಟ್; ಮಕ್ಕಳು ಅನುಕರಿಸುವುದಾದರೆ ಶ್ರೇಷ್ಠವಾದದ್ದನ್ನೇ ಅನುಕರಿಸಲಿ ಬಿಡಿ

ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/amaright