ದಕ್ಷಿಣ ಆಫ್ರಿಕಾ: ವಂಚನೆ ಆರೋಪದ ಸುಳಿಗೆ ಸಿಲುಕಿರುವ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಉದ್ಯಮಿಯೊಬ್ಬರಿಗೆ 6.2 ಮಿಲಿಯನ್ ರಾಂಡ್ (ದಕ್ಷಿಣ ಆಫ್ರಿಕಾ ಕರೆನ್ಸಿ; 1 ರಾಂಡ್ = 5.38 ರೂಪಾಯಿ) ವಂಚಿಸಿರುವ ಆರೋಪ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳು ಆಶೀಶ್ ಲತಾ ರಾಮ್ಗೋಬಿನ್ ಅವರ ಮೇಲಿದ್ದು, ಸೋಮವಾರ ಈ ಬಗ್ಗೆ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಕಾರಾಗೃಹ ಶಿಕ್ಷೆಗೆ ಅವರನ್ನು ಗುರಿಯಾಗಿಸಿದೆ.
ಇಳಾ ಗಾಂಧಿ ಹಾಗೂ ಮೆವಾ ರಾಮ್ಗೋವಿಂದ್ ಅವರ ಮಗಳಾದ ಆಶೀಶ್ ಲತಾ ವಿರುದ್ಧ ವಂಚನೆ ಪ್ರಕರಣ 2015ರಲ್ಲಿ ದಾಖಲಾಗಿದ್ದು, ಉದ್ಯಮಿ ಎಸ್ ಆರ್ ಮಹಾರಾಜ್ ಎನ್ನುವವರಿಂದ 6.2 ಮಿಲಿಯನ್ ರಾಂಡ್ ಪಡೆದಿದ್ದು ನಂತರ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ, ಅವರು ಹಣ ಯಾವ ಕಾರಣಕ್ಕೆ ಅವಶ್ಯಕವಿದೆ ಎಂದು ಹೇಳಿದ್ದರೋ ಅದು ಕೂಡಾ ಸುಳ್ಳು ಎಂದು ಸಾಬೀತಾಗಿದ್ದು ಆಶೀಶ್ ಲತಾ ತೋರಿಸಿದ್ದ ದಾಖಲೆಗಳೆಲ್ಲವೂ ನಕಲಿ ಎನ್ನುವುದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾದ ನೆಟ್ಕೇರ್ ಎಂಬ ಸಂಸ್ಥೆಯೊಂದಿಗೆ ಕೆಲ ವ್ಯವಹಾರಗಳಿವೆ. ಆ ಸಂಸ್ಥೆಗಾಗಿ 3 ಕಂಟೈನರ್ ಲೆನಿನ್ ತರಿಸಿದ್ದೇನೆ. ಆದರೆ, ಆರ್ಥಿಕವಾಗಿ ಕೆಲ ಕಷ್ಟಗಳು ಎದುರಾಗಿರುವುದರಿಂದ ವಸ್ತುಗಳನ್ನು ಇಳಿಸಿಕೊಳ್ಳಲು ಹಣದ ಸಹಾಯ ಬೇಕು. ತುರ್ತಾಗಿ 6.2ಮಿಲಿಯನ್ ರಾಂಡ್ ಬೇಕಿದ್ದು, ನಿಮಗೆ ಸೂಕ್ತ ಮೊತ್ತದೊಂದಿಗೆ ಅದನ್ನು ಹಿಂತಿರುಗಿಸಲಾಗುವುದು ಎಂದು ಉದ್ಯಮಿ ಎಸ್ ಆರ್ ಮಹಾರಾಜ್ ಬಳಿ ಭರವಸೆ ವ್ಯಕ್ತಪಡಿಸಿ ನೆಟ್ಕೇರ್ ಸಂಸ್ಥೆಯ ದಾಖಲೆಗಳನ್ನು ತೋರಿಸಿದ್ದರು.
ಆಶೀಶ್ ಲತಾ ಅವರ ಕೌಟುಂಬಿಕ ಹಿನ್ನೆಲೆ ಹಾಗೂ ನೆಟ್ಕೇರ್ ದಾಖಲೆಗಳನ್ನು ಗಮನಿಸಿದ ಉದ್ಯಮಿ ಎಸ್ ಆರ್ ಮಹಾರಾಜ್ ಸಹಾಯಕ್ಕೆ ಒಪ್ಪಿ, ಲಿಖಿತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿ ಸಾಲ ನೀಡಿದ್ದರು. ಆದರೆ, ನಂತರದಲ್ಲಿ ಆಶೀಶ್ ಲತಾ ಅವರಿಗೂ ನೆಟ್ಕೇರ್ ಸಂಸ್ಥೆಗೂ ಯಾವುದೇ ವ್ಯವಹಾರಗಳಿಲ್ಲ. ಅವರು ತೋರಿಸಿದ ದಾಖಲೆಗಳು ನಕಲಿ ಎನ್ನುವ ವಿಚಾರ ಬಹಿರಂಗವಾಗಿತ್ತು. ಅದಾದ ಬೆನ್ನಲ್ಲೇ ಎಸ್ ಆರ್ ಮಹಾರಾಜ್ ಕಾನೂನಿನ ಮೊರೆ ಹೋಗಿ ಆಶೀಶ್ ಲತಾ ವಿರುದ್ಧ ದೂರು ದಾಖಲಿಸಿದ್ದರು.
ವಿಚಾರಣೆ ವೇಳೆ ಮಹಾತ್ಮಾ ಗಾಂಧೀಜಿ ಅವರ ಮರಿಮೊಮ್ಮಗಳು ತಪ್ಪಿತಸ್ಥೆ ಎನ್ನುವುದು ಕಂಡು ಬಂದ ಕಾರಣ ಇದೀಗ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕುಟುಂಬದ ಹಿರಿತನ, ನಂಬಿಕೆಗಳನ್ನೇ ಬಂಡವಾಳವಾಗಿಸಿಕೊಂಡು ಮೋಸವೆಸಗಿದ ಆಶೀಶ್ ಲತಾ ಅವರು ಕಾನೂನಿನ ಅಡಿಯಲ್ಲಿ ಅಪರಾಧಿ ಎನ್ನುವುದು ಸಾಬೀತಾದಂತಾಗಿದೆ.
ಇದನ್ನೂ ಓದಿ:
ಮಹಾತ್ಮಾ ಗಾಂಧೀಜಿ ಮರಿ ಮೊಮ್ಮಗ ಕೊರೊನಾಕ್ಕೆ ಬಲಿ
Jawaharlal Nehru Death Anniversary 2021: ಜವಾಹರ ಲಾಲ್ ನೆಹರೂ ಕುರಿತಾದ 10 ಆಸಕ್ತಿಕರ ಸಂಗತಿಗಳು
Published On - 8:12 am, Tue, 8 June 21