ದಿಶಾ ರವಿ ಬಂಧನ ಪ್ರಕರಣ; ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಒಪ್ಪಿದ ನ್ಯಾಯಾಲಯ
Greta Thunberg Toolkit case: ಕಳೆದ ಶನಿವಾರ ದಿಶಾ ರವಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಮಂಗಳವಾರ ಅವರ ಜಾಮೀನಿಗೆ ಸಂಬಂಧಿಸಿ ತೀರ್ಪು ನೀಡುವ ಸಾಧ್ಯತೆಗಳಿವೆ.
ದೆಹಲಿ: ಗ್ರೇಟಾ ಥನ್ಬರ್ಗ್ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾದ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು 1 ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ದೆಹಲಿ ನ್ಯಾಯಾಲಯ ಒಪ್ಪಿಗೆ ನೀಡಿದೆ. ಈಗಾಗಲೇ ಅವರಿಗೆ ಮೂರು ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದ್ದ ನ್ಯಾಯಾಲಯ ಇಂದು 1 ದಿನದ ಪೊಲೀಸ್ ಕಸ್ಟಡಿ ವಾಸಕ್ಕೆ ಅನುಮತಿ ನೀಡಿದೆ. ದೆಹಲಿ ಪೊಲೀಸರು 5 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಕೋರ್ಟ್ 1 ದಿನದ ಮಟ್ಟಿಗೆ ಮಾತ್ರ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ಅನುಮತಿ ನೀಡಿದೆ.
ಇಂದು ನಡೆದ ವಿಚಾರಣೆಯಲ್ಲಿ ದೆಹಲಿ ಪೊಲೀಸರ ಪರ ವಾದ ಮಂಡಿಸಿದ ವಿಕಾಸ್ ಸಿಂಗ್, 5 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು. ಈ ಅವಧಿ ಶಿಕ್ಷೆಯಲ್ಲ, ವಿಚಾರಣೆಯನ್ನು ಮುಂದುವರೆಸಲು ದೆಹಲಿ ಪೊಲೀಸರಿಗೆ ನೀಡುವ ಕಾಲಾವಕಾಶ ಎಂದು ವಾದಿಸಿದ ವಿಕಾಸ್ ಸಿಂಗ್, ಈ ಕಾಲಾವಕಾಶವನ್ನು ನೀಡಿದಲ್ಲಿ ವಿಚಾರಣೆ ನಡೆಸಲು ಸಹಾಯ ಒದಗಿಸಿದಂತಾಗುತ್ತದೆ ಎಂದು ಮನವಿ ಮಾಡಿದರು.
ಆದರೆ ಈ ವಾದವನ್ನು ವಿರೋಧಿಸಿದ, ದಿಶಾ ರವಿ ಪರ ವಕೀಲ ಸಿದ್ಧಾರ್ಥ ಅಗರ್ವಾಲ್, ದೆಹಲಿ ಪೊಲೀಸರು ಈಗಾಗಲೇ ದಿಶಾ ರವಿ ಅವರನ್ನು ಪ್ರಶ್ನಿಸಿ ವಿಚಾರಣೆ ನಡೆಸಿದ್ದು, ಘಟನೆಗೆ ಸಂಬಂಧಿಸಿದ ಎಲ್ಲ ರೀತಿಯ ವಿಷಯಗಳನ್ನೂ ಪೊಲೀಸರಿಗೆ ಒದಗಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ ಮತ್ತೆ ಪೊಲೀಸರ ಕಸ್ಟಡಿಗೆ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲವೆಂದು ಅವರು ವಾದ ಮಂಡಿಸಿದರು.
ಕಳೆದ ಶನಿವಾರ ದಿಶಾ ರವಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಮಂಗಳವಾರ ಅವರ ಜಾಮೀನಿಗೆ ಸಂಬಂಧಿಸಿ ತೀರ್ಪು ನೀಡುವ ಸಾಧ್ಯತೆಗಳಿವೆ.
ಏನಿದು ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಪ್ರಕರಣ?
ದಿಶಾ ರವಿ ಅರೆಸ್ಟ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಈ ತನಿಖೆಯ ಬೆನ್ನು ಹತ್ತಿ ಹೊರಟಾಗ ಬೆಂಗಳೂರಿನ ದಿಶಾ ರವಿ ಹೆಸರು ಬೆಳಕಿಗೆ ಬಂದಿತ್ತು. ಇವರು ಟೂಲ್ ಕಿಟ್ ಪ್ರಸಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ. ಹೀಗಾಗಿ ಇವರ ವಿರುದ್ಧ ಐಪಿಸಿ ಸೆಕ್ಷನ್ 124ಎ (ದೇಶದ್ರೋಹ), 153ಎ (ಎರಡು ಗುಂಪಿನ ನಡುವೆ ವೈರತ್ವ ಬೆಳೆಸುವುದು) ಅಡಿ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿಗೆ ಬಂದ ದೆಹಲಿ ಪೊಲೀಸರು ಶನಿವಾರ ಸೋಲದೇವನಹಳ್ಳಿಯಲ್ಲಿರುವ ದಿಶಾ ರವಿ ಅವರ ಮನೆಗೆ ತೆರಳಿ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ದೆಹಲಿ ಪಟಿಯಾಲ ಕೋರ್ಟ್ ಮುಂದೆ ಅವರನ್ನು ಹಾಜರುಪಡಿಸಲಾಗಿದ್ದು, ಕೋರ್ಟ್ ಐದು ದಿನ ಪೊಲೀಸ್ ವಶಕ್ಕೆ ನೀಡಿದೆ.
ದಿಶಾ-ಗ್ರೇಟಾ ಥನ್ ಬರ್ಗ್ ಪರಿಚಯ ಹೇಗೆ? ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಕುರಿತು 2018ರಲ್ಲಿ ದೊಡ್ಡ ಹೋರಾಟವನ್ನು ಹುಟ್ಟು ಹಾಕಿತ್ತು ಫ್ರೈಡೇ ಫಾರ್ ಫ್ಯೂಚರ್ ಸಂಸ್ಥೆ. ದಿಶಾ ಈ ಸಂಸ್ಥೆಯ ಸಹ ಸಂಸ್ಥಾಪಕಿ. ಹವಾಮಾನ ವೈಪರಿತ್ಯದ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಅಂದು ಬೆಂಗಳೂರಲ್ಲಿ ಚಾಲನೆ ನೀಡಿದ್ದು ಇದೇ ಗ್ರೇಟಾ ಥನ್ಬರ್ಗ್. ಹೀಗಾಗಿ, ಇಬ್ಬರ ನಡುವೆ ನಿಕಟ ಸಂಪರ್ಕವಿದೆ. ಹೀಗಾಗಿ, ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ಅನ್ನು ದಿಶಾ ಎಲ್ಲರಿಗೂ ಪ್ರಸಾರ ಮಾಡಿದ್ದಾರೆ ಎನ್ನಲಾಗಿದೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿಬಿಎ ಪದವಿ ಪೂರೈಸಿದ್ದ ದಿಶಾ ರವಿ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಕಾರಣದಿಂದ ಮನೆಯಲ್ಲೇ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಬಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರ ತಂದೆ, ಅಥ್ಲೆಟಿಕ್ ಕೋಚ್ ಆಗಿದ್ದಾರೆ.
ಏನಿದು ಟೂಲ್ ಕಿಟ್? ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಟೂಲ್ಕಿಟ್ ಒಂದನ್ನು ಗ್ರೇಟಾ ಟ್ವಿಟ್ರ್ನಲ್ಲಿ ಹಂಚಿಕೊಂಡಿದ್ದರು. ಟೂಲ್ಕಿಟ್ ಎಂದರೆ, ಒಂದು ಪ್ರತಿಭಟನೆ ಅಥವಾ ಒಂದು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ. ಪ್ರತಿಭಟನೆ/ಕಾರ್ಯಕ್ರಮ ಹೇಗೆ ನಡೆಯಬೇಕು ಎನ್ನುವ ಮಾಹಿತಿ ಇದರಲ್ಲಿ ಇರುತ್ತದೆ. ಗ್ರೇಟಾ ಹಂಚಿಕೊಂಡಿದ್ದ ಟೂಲ್ಕಿಟ್ನಲ್ಲಿ , ಪ್ರತಿಭಟನೆಯಲ್ಲಿ ರೈತರು ಭಾಗವಹಿಸಬೇಕು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಸ್ಥಳೀಯ ಸರ್ಕಾರಿ ಕಚೇರಿ ಅಥವಾ ಅದಾನಿ-ಅಂಬಾನಿಯಂಥ ದೊಡ್ಡ ದೊಡ್ಡ ಉದ್ಯಮಿಗಳ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ಜಾಥಾದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎನ್ನುವುದಕ್ಕೆ ಸ್ಫೂರ್ತಿದಾಯಕವಾಗಿತ್ತು ಈ ಟೂಲ್ಕಿಟ್. ಆದರೆ, ಈ ಪ್ರತಿಭಟನೆ ಹಿಂಸಾಚಾರದೊಂದಿಗೆ ಅಂತ್ಯವಾಗಿತ್ತು. ಗ್ರೇಟಾ ಹಂಚಿಕೊಂಡ ಟೂಲ್ಕಿಟ್ ಅನ್ನು ದಿಶಾ ಪ್ರಸಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ದೆಹಲಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದರು.
Greta Thunberg Toolkit Case: ವಕೀಲೆ ನಿಕಿತಾ ಜೇಕಬ್ಗೆ ಬಾಂಬೆ ಹೈಕೋರ್ಟ್ ಜಾಮೀನು