ವರುಣ್ ಸಿಂಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದನ್ನು ಖಚಿತ ಪಡಿಸಿದ ತಂದೆ ಕೆ.ಪಿ.ಸಿಂಗ್; ಮಗನ ಪರಿಸ್ಥಿತಿ ಬಗ್ಗೆ ಮೌನ
ವರುಣ್ ಸಿಂಗ್ ಪರಿಸ್ಥಿತಿ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಲೈಫ್ ಸಪೋರ್ಟ್ ವ್ಯವಸ್ಥೆಯಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ಯೋಧ, ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್(Group Captain Varun Singh)ರನ್ನು ತಮಿಳುನಾಡಿನ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅವರ ತಂದೆ ಹೇಳಿದ್ದಾರೆ. ಇಂದು ಪಿಟಿಐ ಜತೆ ಫೋನ್ನಲ್ಲಿ ಮಾತನಾಡಿದ ವರುಣ್ ಸಿಂಗ್ ತಂದೆ, ನಿವೃತ್ತ ಕರ್ನಲ್ ಕೆ.ಪಿ.ಸಿಂಗ್, ನಾನೀಗ ವೆಲ್ಲಿಂಗ್ಟನ್ಗೆ ತಲುಪಿದ್ದೇನೆ. ವರುಣ್ ಸಿಂಗ್ರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ. ಹೇಗಿದ್ದಾರೆ ನಿಮ್ಮ ಮಗ ಎಂದು ಕೇಳಿದ ಪ್ರಶ್ನೆಗೆ, ಆ ಬಗ್ಗೆ ಈಗಲೇ ಏನೂ ಹೇಳಲಾರೆ. ಯಾವುದೂ ಖಚಿತವಿಲ್ಲ ಎನ್ನುತ್ತ ಮೌನವಾಗಿದ್ದಾರೆ.
ಇನ್ನು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆ.ಪಿ.ಸಿಂಗ್ ಅವರ ಪಕ್ಕದ ಮನೆಯಲ್ಲೇ ವಾಸವಾಗಿರುವ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಇಶಾನ್, ಘಟನೆ ನಡೆದಾಗ ವರುಣ್ ಸಿಂಗ್ ತಂದೆ ಕೆ.ಪಿ.ಸಿಂಗ್ ಮತ್ತು ಅವರ ಪತ್ನಿ ಇಬ್ಬರೂ ಮುಂಬೈನಲ್ಲಿ, ತಮ್ಮ ಕಿರಿಯ ಮಗ ತನುಜ್ ಮನೆಯಲ್ಲಿ ಇದ್ದರು. ತನುಜ್ ಕೂಡ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದಾರೆ. ನಾನು ಫೋನ್ ಮಾಡಿ ಕೆ.ಪಿ.ಸಿಂಗ್ ಬಳಿ ಮಾತನಾಡಿದ್ದೇನೆ ಎಂದಿದ್ದಾರೆ. ಹಾಗೇ, ಕೆ.ಪಿ.ಸಿಂಗ್ ಅವರಿಗೆ ತಮ್ಮ ಪುತ್ರ ವರುಣ್ ಸಿಂಗ್ ಬಗ್ಗೆ ಹೆಮ್ಮೆಯಿದೆ. ಆತ ಫೈಟರ್ ಮತ್ತು ಈ ಜೀವನ್ಮರಣದ ಹೋರಾಟದಲ್ಲೂ ಗೆದ್ದು ಬರುತ್ತಾನೆ ಎಂಬ ನಂಬಿಕೆಯಿದೆ ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ತೇಜಸ್ ಏರ್ಕ್ರಾಫ್ಟ್ ಟೆಸ್ಟ್ ಹಾರಾಟ ನಡೆಸುತ್ತಿದ್ದ ವೇಳೆ ಕೂಡ ವರುಣ್ ಸಿಂಗ್ ಜೀವಕ್ಕೆ ಅಪಾಯ ಎದುರಾಗಿತ್ತು. ಅಂದು ಬದುಕಿ ಬಂದಿದ್ದ ಅವರ ಶೌರ್ಯಕ್ಕೆ ತಕ್ಕನಾಗಿ ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗಿದೆ.
ಶೇ.45ರಷ್ಟು ಸುಟ್ಟಗಾಯ ನಿನ್ನೆ ತಮಿಳುನಾಡಿನ ಕೂನೂರು ಬಳಿ ನಡೆದ ದುರ್ಘಟನೆಯಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಸೇನಾಧಿಕಾರಿಗಳು ದುರ್ಮರಣ ಹೊಂದಿದ್ದಾರೆ. ಅದರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಈ ವರುಣ್ ಸಿಂಗ್. ಅವರು ಶೇ.45ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಲಾಗಿದೆ. ಇನ್ನು ವರುಣ್ ಸಿಂಗ್ ಪರಿಸ್ಥಿತಿ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಲೈಫ್ ಸಪೋರ್ಟ್ ವ್ಯವಸ್ಥೆಯಲ್ಲಿ ಇದ್ದಾರೆ. ಅವರ ಜೀವ ಕಾಪಾಡಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
Group Captain Varun Singh is on life support in Military Hospital, Wellington. All efforts are being made to save his life: Defence Minister Rajnath Singh in his statement in Lok Sabha on the military chopper crash in Tamil Nadu pic.twitter.com/GLU8owBIBk
— ANI (@ANI) December 9, 2021
Published On - 1:36 pm, Thu, 9 December 21