ದೆಹಲಿ: ನವೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ಸುಂಕದ (Goods and Services Tax – GST) ವರಮಾನವು ₹ 1.04 ಲಕ್ಷ ಕೋಟಿ ಮುಟ್ಟಿದೆ. ಹಿಂದಿನ ತಿಂಗಳು, ಅಂದರೆ ಅಕ್ಟೋಬರ್ ತಿಂಗಳಲ್ಲಿ ಜಿಎಸ್ಟಿ ವರಮಾನವು ₹ 1.05 ಲಕ್ಷ ಕೋಟಿ ಸಂಗ್ರಹವಾಗಿತ್ತು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಳೆದ ಎರಡು ತಿಂಗಳಿನಿಂದ ಜಿಎಸ್ಟಿ ವರಮಾನ ಸತತವಾಗಿ ₹ 1 ಲಕ್ಷ ಕೋಟಿ ದಾಟುತ್ತಿದೆ. ಕಳೆದ ವರ್ಷದ (2019) ನವೆಂಬರ್ ತಿಂಗಳಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಇದು ಶೇ 1.4ರಷ್ಟು ಹೆಚ್ಚು.
ಈ ತಿಂಗಳಲ್ಲಿ ಸರಕುಗಳ ಆಮದಿನಿಂದ ಸಂಗ್ರಹಿಸಲಾದ ಸುಂಕವು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ 4.9ರಷ್ಟು ಮತ್ತು ದೇಶೀಯ ವಹಿವಾಟಿನಿಂದ ಸಂಗ್ರಹಿಸಿದ ಸುಂಕವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 0.5ರಷ್ಟು ಜಾಸ್ತಿಯಿದೆ ಎಂದು ಹಣಕಾಸು ಸಚಿವಾಲಯವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಆರ್ಥಿಕ ವರ್ಷದ 12 ತಿಂಗಳಲ್ಲಿ 8 ತಿಂಗಳು ಜಿಎಸ್ಟಿ ಸಂಗ್ರಹ ₹ 1 ಲಕ್ಷ ಕೋಟಿಗೂ ಹೆಚ್ಚಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಲಾಕ್ಡೌನ್ ಮತ್ತು ಆರ್ಥಿಕ ಹಿಂಜರಿತದ ಕಾರಣ ತೆರಿಗೆ ಸಂಗ್ರಹ ಕುಸಿದಿತ್ತು.
ಜಿಎಸ್ಟಿ ಸಂಗ್ರಹ ವಿವರ: ಏಪ್ರಿಲ್: ₹ 32,172 ಕೋಟಿ, ಮೇ ₹ 62,151 ಕೋಟಿ, ಜೂನ್ ₹ 90,917 ಕೋಟಿ, ಜುಲೈ ₹ 87,422 ಕೋಟಿ, ಆಗಸ್ಟ್ ₹ 86,449 ಕೋಟಿ, ಸೆಪ್ಟೆಂಬರ್ ₹95,480 ಕೋಟಿ, ಅಕ್ಟೋಬರ್ ₹ 1,05,155 ಕೋಟಿ ಮತ್ತು ನವೆಂಬರ್ ₹1,04,963 ಕೋಟಿ.
Published On - 4:43 pm, Tue, 1 December 20