Delhi Chalo | ಅನ್ನದಾತನ ಮನವೊಲಿಸಲು ವಿಫಲವಾಯ್ತಾ ಕೇಂದ್ರ ಸರ್ಕಾರ?
ರಾಷ್ಟ್ರ ರಾಜಧಾನಿಯಲ್ಲಿ ಇಂದು ಮಧ್ಯಾಹ್ನ ನಡೆದ ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆಯಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಲು ವಿಶೇಷ ಸಮಿತಿಯೊಂದನ್ನು ರಚಿಸುವುದಾಗಿ ಸರ್ಕಾರ ಹೇಳಿದರೂ ರೈತರು ಸಹಮತ ನೀಡಿಲ್ಲ.
ದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರನ್ನು ಸಮಾಧಾನಿಸಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ಪ್ರಯತ್ನ ಮೇಲ್ನೋಟಕ್ಕೆ ವಿಫಲವಾದಂತಿದೆ.
ರಾಷ್ಟ್ರ ರಾಜಧಾನಿಯಲ್ಲಿ ಇಂದು ಮಧ್ಯಾಹ್ನ ನಡೆದ ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆಯಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಲು ವಿಶೇಷ ಸಮಿತಿಯೊಂದನ್ನು ರಚಿಸುವುದಾಗಿ ಸರ್ಕಾರ ಹೇಳಿದರೂ ರೈತರು ಸಹಮತ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ರೈತರ ಅಹವಾಲುಗಳನ್ನು ಆಲಿಸಲು ಕೇಂದ್ರ ಸರ್ಕಾರ ವಿಶೇಷ ಸಭೆಯನ್ನು ಇಂದು ಆಯೋಜಿಸಿತ್ತು. ಸಭೆಯಲ್ಲಿ ದೇಶದ ವಿವಿಧ ಭಾಗದ 35 ರೈತ ಮುಖಂಡರು ಭಾಗವಹಿಸಿದ್ದರು.
ರೈತರು ಮತ್ತು ಸಚಿವರ ಸಭೆಯು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಕೇಂದ್ರದ ಮೂರು ಕಾಯ್ದೆಗಳು ರೈತ ವಿರೋಧಿಯಾಗಿವೆ, ಹೊಸ ಕಾಯ್ದೆಯು ರೈತರಿಗೆ ಸಿಗುವ ಕನಿಷ್ಠ ಬೆಂಬಲ ಬೆಲೆಯನ್ನು ಕಿತ್ತುಹಾಕಲಿದೆ ಎಂಬ ಬಗ್ಗೆ ರೈತ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಲು ವಿಶೇಷ ತಂಡವನ್ನು ರಚಿಸುತ್ತೇವೆ ಎಂದು ಸರ್ಕಾರ ಪಟ್ಟು ಹಿಡಿದು ಕುಳಿತಿದ್ದು ರೈತರು ಅದಕ್ಕೆ ಸಮ್ಮತಿಸಿಲ್ಲ ಎಂದು ತಿಳಿದುಬಂದಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮಾತುಕತೆಯಲ್ಲಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೇ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತಿತರರು ಉಪಸ್ಥಿತರಿದ್ದರು. ಈ ಸಭೆಗೂ ಮುನ್ನ ಕೇಂದ್ರ ಸಚಿವ ರಾಜನಾಥ್ ಸಿಂಗ್, ಅಮಿತ್ ಶಾ, ನರೇಂದ್ರ ಸಿಂಗ್ ತೋಮರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ರೈತರ ಪ್ರತಿಭಟನೆಯ ಕುರಿತಂತೆ ಮಾತುಕತೆ ನಡೆಸಿದ್ದರು.
ಸದ್ಯದ ಈ ಬೆಳವಣಿಗೆಗಳನ್ನು ನೋಡಿದರೆ ರೈತರು ಮತ್ತು ಸರ್ಕಾರದ ನಡುವಿನ ಸಮರ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯೂ ಮುಕ್ತಾಯವಾಗುವ ಸಾಧ್ಯತೆ ಕಡಿಮೆ ಇದೆ.
ಇದನ್ನೂ ಓದಿ: ಪಂಜಾಬ್ ರೈತರಿಂದ ದೆಹಲಿ ಚಲೊ: ಇಲ್ಲಿವೆ ಕುಗ್ಗದ-ಜಗ್ಗದ ರೈತನ ದಾರುಣ ಚಿತ್ರಣಗಳು
Published On - 7:35 pm, Tue, 1 December 20