ದೆಹಲಿ: ಕಳೆದೆರಡು ತಿಂಗಳ ಅವಧಿಯಲ್ಲಿ, ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳ 180 ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕ ಪರಿಶೋಧಕರನ್ನು ಬಂಧಿಸಲಾಗಿದೆ. GST ತೆರಿಗೆ ವಂಚನೆ ಗಂಭೀರ ಆರ್ಥಿಕ ಅಪರಾಧವಾಗಿರುವ ಕಾರಣ ಬಂಧಿತರಿಗೆ ಜಾಮೀನು ಪಡೆಯಲು ಕೂಡ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಡಾ. ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಹಣಕಾಸು, ತೆರಿಗೆ ಸಂಗ್ರಹ ಪ್ರಕ್ರಿಯೆ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ನಾವು ತಂದಿದ್ದೇವೆ. ದೇಶದ ಆರ್ಥಿಕತೆ ಸರಿಯಾದ ಹಾದಿಯಲ್ಲಿದೆ. ತೆರಿಗೆಯ ವಿಚಾರದಲ್ಲಿ ಅಕ್ರಮ ಮತ್ತು ಅಸಮರ್ಪಕ ರೀತಿಯಲ್ಲಿ ವ್ಯವಹರಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ. ಆದ್ದರಿಂದ, ಡಿಸೆಂಬರ್ ತಿಂಗಳಲ್ಲಿ ದಾಖಲೆಯ ಮೊತ್ತದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ. 1.15 ಲಕ್ಷ ರೂಪಾಯಿ ಅತಿ ಹೆಚ್ಚು ತೆರಿಗೆ ವಸೂಲಿಯಾಗಿದೆ ಎಂದು ಡಾ. ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಪ್ರಸ್ತುತ ತೆರಿಗೆ ವಂಚನೆ, ಅವ್ಯವಹಾರಗಳಲ್ಲಿ ತೊಡಗಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ಸಾಫ್ಟ್ವೇರ್ ಟೂಲ್ ಬಳಸಲಾಗುತ್ತಿದೆ. ಆ ಮೂಲಕವೇ 2017ರಿಂದ ತೆರಿಗೆ ವಂಚನೆಯಲ್ಲಿ ಭಾಗಿಯಾದ 180 ಮಂದಿಯನ್ನು ಬಂಧಿಸಿದ್ದೇವೆ. ಮೊದಲು ದೂರಿನ ಆಧಾರದಲ್ಲಿ ಹಣಕಾಸು ವಂಚನೆ ಪ್ರಕರಣಗಳನ್ನು ಗುರುತಿಸಲಾಗುತ್ತಿತ್ತು. ಆದರೆ ಈಗ, ತೆರಿಗೆ ವಂಚನೆಯ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಕೃತಕ ಬುದ್ಧಿಮತ್ತೆ (Artificial Intelligence-AI) ಮೂಲಕ ಅವುಗಳನ್ನು ವಿಶ್ಲೇಷಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಅವರು ವಿವರಿಸಿದ್ದಾರೆ.
ತೆರಿಗೆ ವಂಚನೆಯಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುವಾಗ, ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ತೊಂದರೆಯಾಗಬಾರದು. ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಮಾತ್ರ ಕಾನೂನು ಕ್ರಮ ಜರುಗಬೇಕು. ಹಾಗಾಗಿ, ಡಾಟಾ ವಿಶ್ಲೇಷಣೆಯ ಮೂಲಕ ವ್ಯವಸ್ಥಿತ ರೂಪದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಡಿಸೆಂಬರ್ನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಲು ಇದೂ ಕೂಡ ಕಾರಣವಾಗಿದೆ. ಸಮರ್ಪಕ ತೆರಿಗೆ ಪಾವತಿ ಅಥವಾ ತೆರಿಗೆ ಸಂಗ್ರಹವು ಮುಂದಿನ ತಿಂಗಳುಗಳಲ್ಲೂ ಮುಂದುವರಿಯಬೇಕು ಎಂದು ಡಾ. ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
GST ಸಂಗ್ರಹದಲ್ಲಿ ಗಣನೀಯ ಹೆಚ್ಚಳ: ಡಿಸೆಂಬರ್ನಲ್ಲೇ ಹೆಚ್ಚು ತೆರಿಗೆ ಕಲೆಕ್ಟ್ ಆಗಿರೋದು!
Published On - 11:43 am, Mon, 4 January 21