AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಲಾಮಗಿರಿಯನ್ನು ಮೆಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ; ಸೇವಾ ತೀರ್ಥದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ

ಪ್ರಧಾನಿ ಮೋದಿ ಇಂದು ಪ್ರಧಾನಮಂತ್ರಿಗಳ ಹೊಸ ಕಟ್ಟಡವಾದ ಸೇವಾ ತೀರ್ಥದ ಕಚೇರಿಯನ್ನು ಉದ್ಘಾಟಿಸಿದರು. ಈ ನೂತನ ಕಟ್ಟಡದಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಪ್ರಧಾನಿ ಮೋದಿ, ನಾವು ಗುಲಾಮಗಿರಿ ಮನಸ್ಥಿತಿಯನ್ನು ತೊಡೆದುಹಾಕಿದ್ದೇವೆ. ವಿಕಸಿತ ಭಾರತದ ಗುರಿಯೊಂದಿಗೆ ಹೊಸ ಇತಿಹಾಸ ನಿರ್ಮಾಣಕ್ಕೆ ಸಜ್ಜಾಗಿದ್ದೇವೆ. ಇದು 140 ಭಾರತೀಯರ ಆಕಾಂಕ್ಷೆ, ಅಭಿವೃದ್ಧಿಯನ್ನು ಕೇಂದ್ರೀಕರಿಸಿಕೊಂಡಿರುತ್ತದೆ ಎಂದು ಹೇಳಿದ್ದಾರೆ.

ಗುಲಾಮಗಿರಿಯನ್ನು ಮೆಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ; ಸೇವಾ ತೀರ್ಥದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ
Pm Modi Image Credit source: PTI
ಸುಷ್ಮಾ ಚಕ್ರೆ
|

Updated on: Feb 13, 2026 | 7:54 PM

Share

ನವದೆಹಲಿ, ಫೆಬ್ರವರಿ 13: ಇಂದು ಹೊಸದಾಗಿ ಉದ್ಘಾಟನೆಗೊಂಡ ‘ಸೇವಾ ತೀರ್ಥ’ ಕಟ್ಟಡದಲ್ಲಿ ತಮ್ಮ ಮೊದಲ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಭಾರತ ದೇಶ ಹೊಸ ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. “ನಾವೆಲ್ಲರೂ ಹೊಸ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವ ಮೂಲಕ ಹೊಸ ಹಾದಿಯತ್ತ ಹೆಜ್ಜೆ ಹಾಕುತ್ತಿದ್ದೇವೆ. ಇಂದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಹೊಸ ಆರಂಭಕ್ಕೆ ಸಾಕ್ಷಿಯಾಗಿದೆ. ನಾವೆಲ್ಲರೂ ‘ವಿಕಸಿತ ಭಾರತ’ ಸಾಧಿಸುವ ಸಂಕಲ್ಪದೊಂದಿಗೆ ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಪ್ರವೇಶಿಸುತ್ತಿದ್ದೇವೆ” ಎಂದು ಪ್ರಧಾನಿ ಹೇಳಿದ್ದಾರೆ.

ರಾಷ್ಟ್ರಪತಿ ಭವನದ ಬಳಿಯ ರೈಸಿನಾ ಬೆಟ್ಟದಲ್ಲಿರುವ ವಸಾಹತುಶಾಹಿ ಯುಗದ ಸೌತ್ ಬ್ಲಾಕ್ ಅನ್ನು ತೊರೆದ ಪ್ರಧಾನಿ ಮೋದಿ ಸೇವಾ ತೀರ್ಥದಲ್ಲಿರುವ ತಮ್ಮ ಹೊಸ ಕಚೇರಿಯಿಂದ ಕಾರ್ಯಾರಂಭ ಮಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ಇಂದು ಸೇವಾ ತೀರ್ಥ ಮತ್ತು ಕರ್ತವ್ಯ ಭವನ 1 ಮತ್ತು 2 ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ “ಹೊಸ ಕಟ್ಟಡಗಳು ನಾಗರಿಕ ಕೇಂದ್ರಿತ ಆಡಳಿತ ಮತ್ತು ರಾಷ್ಟ್ರೀಯ ಪ್ರಗತಿಗೆ ದೇಶದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದರು.

“ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಂತಹ ಕಟ್ಟಡಗಳನ್ನು ಬ್ರಿಟಿಷ್ ಸರ್ಕಾರದ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ನಿರ್ಮಿಸಲಾಗಿತ್ತು. ಸೇವಾ ತೀರ್ಥ ಮತ್ತು ಕರ್ತವ್ಯ ಭವನದಂತಹ ಹೊಸ ಸಂಕೀರ್ಣಗಳನ್ನು ಭಾರತದ ಜನರ ಆಕಾಂಕ್ಷೆಗಳನ್ನು ಪೂರೈಸಲು ನಿರ್ಮಿಸಲಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಆಧರಿಸಿರುತ್ತವೆಯೇ ಹೊರತು ಮಹಾರಾಜರ ದೃಷ್ಟಿಕೋನವನ್ನು ಆಧರಿಸಿರುವುದಿಲ್ಲ” ಎಂದು ಪ್ರಧಾನ ಮಂತ್ರಿ ಸೇವಾ ತೀರ್ಥದ ಸಭೆಯನ್ನುದ್ದೇಶಿಸಿ ಹೇಳಿದರು.

ಇದನ್ನೂ ಓದಿ: ಮಹಿಳೆಯರು, ರೈತರು, ಯುವಕರಿಗೆ ಗುಡ್ ನ್ಯೂಸ್; ಸೇವಾ ತೀರ್ಥ ಕಚೇರಿಯಲ್ಲಿ ಪ್ರಧಾನಿ ಮೋದಿ ಮೊದಲ ನಿರ್ಧಾರ

ಸೇವಾ ತೀರ್ಥವು ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಕ್ಯಾಬಿನೆಟ್ ಸಚಿವಾಲಯವನ್ನು ಹೊಂದಿದೆ. ಇವೆಲ್ಲವೂ ಈ ಮೊದಲು ವಿವಿಧ ಸ್ಥಳಗಳಲ್ಲಿ ನೆಲೆಗೊಂಡಿದ್ದವು. ಇದರಿಂದ ಇಲಾಖೆಗಳಲ್ಲಿ ಸಮನ್ವಯತೆಗೆ ಸವಾಲಾಗಿತ್ತು. ಕರ್ತವ್ಯ ಭವನ 1 ಮತ್ತು 2 ಕಟ್ಟಡ ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳನ್ನು ಒಳಗೊಂಡಿದೆ.

“ಸ್ವಾತಂತ್ರ್ಯದ ನಂತರ ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಂತಹ ಕಟ್ಟಡಗಳು ದೇಶಕ್ಕೆ ಅನೇಕ ಪ್ರಮುಖ ನಿರ್ಧಾರಗಳು ಮತ್ತು ನೀತಿಗಳಿಗೆ ವೇಗವರ್ಧಕಗಳಾಗಿದ್ದವು. ಆದರೆ ಈ ಕಟ್ಟಡಗಳನ್ನು ಬ್ರಿಟಿಷ್ ಸಾಮ್ರಾಜ್ಯದ ಸಂಕೇತಗಳಾಗಿ ನಿರ್ಮಿಸಲಾಗಿದೆ ಎಂಬುದು ಸತ್ಯ. ಭಾರತವನ್ನು ಶತಮಾನಗಳ ಕಾಲ ಗುಲಾಮಗಿರಿಯ ಸಂಕೋಲೆಯಲ್ಲಿ ಬಂಧಿಸುವುದು ಅವರ ಉದ್ದೇಶವಾಗಿತ್ತು” ಎಂದು ಅವರು ಹೇಳಿದರು.

ಇದನ್ನೂ ಓದಿ: ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಪ್ರಧಾನಿ ಮೋದಿ

“ಈ 100 ವರ್ಷಗಳಷ್ಟು ಹಳೆಯದಾದ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥ ಮತ್ತು ಕರ್ತವ್ಯ ಭವನಗಳನ್ನು ಭಾರತದ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾಗಿದೆ ಎಂಬ ಅಂಶದ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸುವುದು ಅತ್ಯಗತ್ಯ” ಎಂದು ಪ್ರಧಾನಿ ಒತ್ತಿ ಹೇಳಿದರು.

ಸ್ವತಂತ್ರ ಭಾರತದ ಪ್ರಮುಖ ರಸ್ತೆಗಳು ಮತ್ತು ಹೆಗ್ಗುರುತುಗಳು ದಶಕಗಳಿಂದ ವಸಾಹತುಶಾಹಿ ಯುಗದ ಹೆಸರುಗಳನ್ನು ಹೊಂದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು. “ಪ್ರಧಾನಿ ನಿವಾಸದ ಉದ್ದಕ್ಕೂ ಇರುವ ರಸ್ತೆಯನ್ನು ರೇಸ್ ಕೋರ್ಸ್ ರಸ್ತೆ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರಪತಿ ಭವನಕ್ಕೆ ಹೋಗುವ ರಸ್ತೆಯನ್ನು ರಾಜಪಥ್ ಎಂದು ಕರೆಯಲಾಗುತ್ತಿತ್ತು. ಅದೆಲ್ಲವನ್ನೂ ಈಗ ಬದಲಾಯಿಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us