ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ: ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಚಿರತೆಯೊಂದು ಕಳೆದ ಒಂದು ತಿಂಗಳಿಂದ ಐದನೇ ಬಾರಿ ಕಾಣಿಸಿಕೊಂಡಿದೆ. ಮುಂಜಾನೆ 3:27ರ ಸುಮಾರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿರತೆ ಓಡಾಟದಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಅರಣ್ಯ ಇಲಾಖೆಯ ನಿಷ್ಕ್ರಿಯತೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜುಲೈ 29: ಬ್ಯಾಡರಹಳ್ಳಿ ಪ್ರದೇಶದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಕಳೆದ ಒಂದು ತಿಂಗಳಿಂದ ಇದು ಐದನೇ ಬಾರಿ ಪ್ರತ್ಯಕ್ಷವಾಗಿದೆ. ಮುಂಜಾನೆ 3:27ರ ಸುಮಾರಿಗೆ ಭಾರತ್ ನಗರದಲ್ಲಿ ಚಿರತೆಯ ಓಡಾಟವು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವವರು, ವಾಕಿಂಗ್ ಹೋಗುವವರು ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕೆಲವರು ಮೊದಲು ಚಿರತೆಯನ್ನು ನಾಯಿ ಎಂದು ತಪ್ಪಾಗಿ ಭಾವಿಸಿದ್ದು, ಈಗ ನಾಯಿಗಳನ್ನು ಕಂಡರೂ ಭಯಪಡುವಂತಹ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯುವ ಬದಲು ಕೇವಲ ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೋನ್ ಇಟ್ಟರೂ ನಾಯಿಗಳು ಬೋನಿಗೆ ಬೀಳುತ್ತಿವೆ ಹೊರತು ಚಿರತೆ ಸಿಕ್ಕಿಬೀಳುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

