ಬಿಜೆಪಿ ನಾಯಕತ್ವ ಬಗ್ಗೆ ಶ್ಲಾಘನೆ; ನಾನು ಹೆಮ್ಮೆಯ ಹಿಂದೂ ಎಂದ ಹಾರ್ದಿಕ್ ಪಟೇಲ್

ಬಿಜೆಪಿ ನಾಯಕತ್ವ ಬಗ್ಗೆ ಶ್ಲಾಘನೆ; ನಾನು ಹೆಮ್ಮೆಯ ಹಿಂದೂ ಎಂದ  ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್

ಫೋನ್ ಅಪ್‌ಡೇಟ್ ಆಗುತ್ತಿದ್ದಂತೆ ಬಿಜೆಪಿ ಕೂಡ ಅದೇ ರೀತಿ ಹೊಸ ಅಪ್‌ಡೇಟ್‌ಗಳನ್ನು ತರುತ್ತಿದೆ. ಇದು ವರ್ಷಗಳಿಂದ ನಡೆದುಕೊಂಡು ಬಂದಿದೆ, ಜನರೂ ಕಾಂಗ್ರೆಸ್ ಸೋಲುತ್ತಿದೆ, ಬಿಜೆಪಿ ಗೆಲ್ಲುತ್ತಿದೆ ಎನ್ನುತ್ತಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ.

TV9kannada Web Team

| Edited By: Rashmi Kallakatta

Apr 22, 2022 | 6:24 PM

ದೆಹಲಿ: ತನ್ನ ವಿರುದ್ಧ ಹಗೆತನ ಸಾಧಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷವನ್ನು (Congress) ಟೀಕಿಸಿದ ಕೆಲವೇ ದಿನಗಳಲ್ಲಿ, ಯುವ ಪಾಟಿದಾರ್ ನಾಯಕ ಮತ್ತು ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ (Hardik Patel) ಅವರು ತಮ್ಮ ಆಯ್ಕೆಗಳು “ಮುಕ್ತ”ವಾಗಿದೆ ಎಂದಿದ್ದಾರೆ. ಅದೇ ವೇಳೆ ಆಡಳಿತಾರೂಢ ಬಿಜೆಪಿ (BJP) “ಗಂಭೀರ ನಿರ್ಧಾರ ತೆಗೆದುಕೊಳ್ಳುವ” ನಾಯಕತ್ವ ಎಂದು ಹೊಗಳಿದ್ದಾರೆ. ಶುಕ್ರವಾರ ಪ್ರಾದೇಶಿಕ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಪಟೇಲ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ಮತ್ತು ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಿರ್ಧಾರಗಳ ಬಗ್ಗೆ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ ನಾನೊಬ್ಬ ಹೆಮ್ಮೆಯ ಹಿಂದೂ ಎಂದಿದ್ದಾರೆ. ಬಿಜೆಪಿಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುವ ನಾಯಕತ್ವವಿದೆ. ಕಾಂಗ್ರೆಸ್‌ನ ಅಸಮಾಧಾನದಿಂದ ಈ ಮಾತನ್ನು ಹೇಳುತ್ತಿಲ್ಲ. ಅವರು ತಮ್ಮ ಸಂಸ್ಥೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಾರೆ, ರೋಲ್-ಚಾರ್ಟ್​​ನಲ್ಲಿ ನಿಯಮಿತ ಬದಲಾವಣೆಗಳನ್ನು ಮಾಡುತ್ತಾರೆ. ಫೋನ್ ಅಪ್‌ಡೇಟ್ ಆಗುತ್ತಿದ್ದಂತೆ ಬಿಜೆಪಿ ಕೂಡ ಅದೇ ರೀತಿ ಹೊಸ ಅಪ್‌ಡೇಟ್‌ಗಳನ್ನು ತರುತ್ತಿದೆ. ಇದು ವರ್ಷಗಳಿಂದ ನಡೆದುಕೊಂಡು ಬಂದಿದೆ, ಜನರೂ ಕಾಂಗ್ರೆಸ್ ಸೋಲುತ್ತಿದೆ, ಬಿಜೆಪಿ ಗೆಲ್ಲುತ್ತಿದೆ ಎನ್ನುತ್ತಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ. ನೀವು ಬಿಜೆಪಿಗೆ ಪಕ್ಷಾಂತರ ಮಾಡುತ್ತೀರಾ ಎಂಬ ಪ್ರಶ್ನೆಗೆ ಪಟೇಲ್, “ಗುಜರಾತ್ ಅನ್ನು ಮುಂದಕ್ಕೆ ಕೊಂಡೊಯ್ಯಲು ನಾನು ಏನು ಮಾಡಬಹುದೋ ಅದನ್ನು ಮಾಡುತ್ತೇನೆ ಎಂಬ ನನ್ನ ನಿಲುವಿನ ಬಗ್ಗೆ ನನಗೆ ಸ್ಪಷ್ಟವಾಗಿದೆ. ಅನೇಕರು ನನ್ನನ್ನು ಕೇಜ್ರಿವಾಲ್ ಜೊತೆ ಜೋಡಿಸಿದ್ದಾರೆ. ಕಾಂಗ್ರೆಸ್, ಎಎಪಿ, ಬಿಜೆಪಿ – ನನಗೆ ಎಲ್ಲಾ ಆಯ್ಕೆಗಳಿವೆ ಎಂದಿದ್ದಾರೆ.

ನರ್ಮದಾ ಜಿಲ್ಲೆಯ ರಾಜ್‌ಪಿಪ್ಲಾದಲ್ಲಿ ಮೋಟಾರ್‌ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್, ಬಿಜೆಪಿ ಕುರಿತು ಹಾರ್ದಿಕ್ ಪಟೇಲ್ ಹೇಳಿಕೆಗೆ ಪ್ರತಿಕ್ರಿಯಿಸಿ, “ಇಡೀ ದೇಶವು ಬಿಜೆಪಿಯ ಸಿದ್ಧಾಂತದಿಂದ ಪ್ರಭಾವಿತವಾಗಿದೆ. ಬಿಜೆಪಿಯ ನಾಯಕತ್ವ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕಠಿಣ ಪರಿಶ್ರಮ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದೆ ಮತ್ತು ಜಗತ್ತು ಇದನ್ನು 2014 ರಿಂದ (ಲೋಕಸಭಾ ಚುನಾವಣೆ) ನೋಡಿದೆ. ಕಾಂಗ್ರೆಸ್‌ನ ಅನೇಕ ನಾಯಕರ ಮೇಲೆ ಪ್ರಭಾವವೂ ಸಹಜ.  ಆದರೆ ಇತರ ನಾಯಕರು ಅದನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಹಾರ್ದಿಕ್ ಅದನ್ನು ಸಾರ್ವಜನಿಕವಾಗಿ ಹೇಳುವ ಧೈರ್ಯವನ್ನು ಹೊಂದಿದ್ದಾರೆ. ಇಡೀ ದೇಶ ಮತ್ತು ಜಗತ್ತು ಬಿಜೆಪಿಯ ಸಿದ್ಧಾಂತದಿಂದ ಪ್ರಭಾವಿತವಾದಾಗ, ಯಾರೂ ಅದನ್ನು ಸ್ಪರ್ಶಿಸದೆ ಇರಲು ಸಾಧ್ಯವಿಲ್ಲ ಎಂದಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಪಟೇಲ್ ಅವರು ಗುಜರಾತ್ ಕಾಂಗ್ರೆಸ್‌ನಲ್ಲಿ ತಮ್ಮ ಸ್ಥಾನವನ್ನು “ಮದುವೆಯ ನಂತರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ವರ” ಎಂದು ಉಲ್ಲೇಖಿಸಿದ್ದರು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರನ್ನು ಸೇರಿಸದಿದ್ದಕ್ಕಾಗಿ ರಾಜ್ಯ ನಾಯಕತ್ವವನ್ನು ಟೀಕಿಸಿದ್ದರು. ಅವರ ಹೇಳಿಕೆಗಳ ನಂತರ, ಎಎಪಿ ಗುಜರಾತ್ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಪಟೇಲ್ ಅವರಿಗೆ ತಮ್ಮ ಪಕ್ಷಕ್ಕೆ ಸೇರಲು ಸಾರ್ವಜನಿಕ ಆಹ್ವಾನವನ್ನು ಕಳುಹಿಸಿದ್ದಾರೆ. ಆಗ ಪಟೇಲ್ ಅವರು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಪುನರುಚ್ಚರಿಸಿದರು.

2015 ರ ಪಾಟಿದಾರ್ ಆಂದೋಲನದ ಗಲಭೆ ಮತ್ತು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸ್ಥಳೀಯ ನ್ಯಾಯಾಲಯವು ಹಾರ್ದಿಕ್ ಪಟೇಲ್ ವಿರುದ್ಧ ದೋಷಾರೋಪಣೆಯ ಆದೇಶವನ್ನು ಸುಪ್ರೀಂಕೋರ್ಟ್ ತಡೆಹಿಡಿದಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಸಂಭವಿಸಿವೆ. ಈ ಬೆಳವಣಿಗೆಯು ಹಾರ್ದಿಕ್ ಅವರನ್ನು ಚುನಾವಣೆಗೆ ಸ್ಪರ್ಧಿಸಲು ಅರ್ಹವಾಗಿಸಿದೆ ಮತ್ತು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಅವರು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಅಹಮದಾಬಾದ್‌ನಲ್ಲಿ ಮಾಧ್ಯಮ ಸಂವಾದ ನಡೆಸಿದ ಪಟೇಲ್, ರಾಜ್ಯ ನಾಯಕತ್ವದೊಂದಿಗಿನ ತಮ್ಮ ಸಮಸ್ಯೆಗಳನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿಸಿರುವುದಾಗಿ ಹೇಳಿದ್ದಾರೆ. “ಹೈಕಮಾಂಡ್ ಅವರು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನನಗೆ ಹೇಳಿದ್ದಾರೆ. ಗುಜರಾತ್ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಇದು ಉತ್ತಮ ನಿರ್ಧಾರವಾಗಲಿದೆ ಎಂದು ನಾನು ಭಾವಿಸುತ್ತೇನೆ. ಗುಜರಾತ್ ಕಾಂಗ್ರೆಸ್‌ನಲ್ಲಿ ನನಗೆ ವೈಯಕ್ತಿಕವಾಗಿ ಯಾರೊಂದಿಗೂ ಅಸಮಾಧಾನವಿಲ್ಲ ಆದರೆ ರಾಜ್ಯ ನಾಯಕತ್ವದ ಬಗ್ಗೆ ನನಗೆ ಅಸಮಾಧಾನವಿದೆ. ಜನರ ಕಲ್ಯಾಣಕ್ಕಾಗಿ ತನ್ನ ಜವಾಬ್ದಾರಿಯನ್ನು ಪೂರೈಸುವ ಬದಲು, ರಾಜ್ಯ ನಾಯಕತ್ವವು ಸಂಘರ್ಷದಲ್ಲಿ ಸಿಲುಕಿರುವುದನ್ನು ನಾನು ನೋಡುತ್ತಿದ್ದೇನೆ ಎಂದು  ಹೇಳಿದರು.

“ಯಾರಾದರೂ ಪಕ್ಷದ ಹಿತಕ್ಕಾಗಿ ಮಾತನಾಡಿದರೆ, ಅವರು ಪಕ್ಷವನ್ನು ತೊರೆಯುವ ಉದ್ದೇಶವನ್ನು ಹೊಂದಿದ್ದಾರೆಯೇ ಎಂದು ಅವರು ಭವಿಷ್ಯ ನುಡಿಯಲು ಪ್ರಾರಂಭಿಸುತ್ತಾರೆ. ಅವರು ಆ ವ್ಯಕ್ತಿಯ ಜೊತೆ ಕುಳಿತು ಅವರ ಸಮಸ್ಯೆಗಳನ್ನು, ಅವರ ಚಿಂತನೆ ಮತ್ತು ಪಕ್ಷದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು, ”ಎಂದು ಅವರು ಹೇಳಿದರು.

“ನಾನು ರಘುವಂಶಿ ಕುಲದಿಂದ ಬಂದವನು, ನಾನು ಲುವ್-ಕುಶ ವಂಶದಿಂದ ಬಂದವನು. ನಾನು ರಾಮ, ಶಿವ ಮತ್ತು ಕುಲದೇವಿಯನ್ನು ನಂಬುತ್ತೇನೆ. ನಾನು ಹಿಂದೂ ಮತ್ತು ಅದರ ಆಚರಣೆಗಳನ್ನು ಅನುಸರಿಸಲು ನಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂಬುದು ಸ್ಪಷ್ಟವಾಗಿದೆ. ಮುಂಬರುವ ಏಪ್ರಿಲ್ 28 ರಂದು ನನ್ನ ತಂದೆಯ ಪುಣ್ಯತಿಥಿಯಂದು ನಾನು ಗೀತೆಯ 4,000 ಪ್ರತಿಗಳನ್ನು ವಿತರಿಸಲಿದ್ದೇನೆ. ನಾನು ಹಿಂದೂ ಎಂದು ಹೆಮ್ಮೆಪಡುತ್ತೇನೆ ಎಂದು ಪಟೇಲ್ ಹೇಳಿದ್ದಾರೆ.

ಪಟೇಲ್ ಬಿಜೆಪಿಯೊಂದಿಗೆ ಇತ್ತೀಚಿನ ಸಂವಹನವನ್ನು ನಿರಾಕರಿಸಿದರೆ, ಆಡಳಿತ ಪಕ್ಷದ ರಾಜಕೀಯ ತಂತ್ರಗಳು ಕಾಂಗ್ರೆಸ್‌ಗಿಂತ ಉತ್ತಮವಾಗಿವೆ ಎಂದು ಹೇಳಿದರು.

ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ಮತ್ತು ಅವರ ಬಗ್ಗೆ ಕಾಳಜಿ ವಹಿಸುವುದು ಪ್ರತಿಪಕ್ಷಗಳ ಕೆಲಸ. ಅವರು ತಮ್ಮ ಕೆಲಸವನ್ನು ಮಾಡಲು ವಿಫಲವಾದಾಗ ಜನರು ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ. ಶತ್ರುಗಳ ತಂತ್ರ ಉತ್ತಮವಾಗಿದ್ದರೆ ನಾವು ಅದಕ್ಕೆ ಹೊಂದಿಕೊಳ್ಳಬಹುದು ಎಂದು ನಾನು ನಂಬುತ್ತೇನೆ. ಇದನ್ನೇ ರಾಜಕೀಯ ನಮಗೆ ಕಲಿಸುತ್ತದೆ ಮತ್ತು ಬಿಜೆಪಿಯ ರಾಜಕೀಯ ತಂತ್ರಗಳು ತುಂಬಾ ಒಳ್ಳೆಯದು ಎಂದು ನಾನು ನಂಬುತ್ತೇನೆ. ನಾನು ಬಿಜೆಪಿಯೊಂದಿಗೆ ಯಾವುದೇ ಸಂವಹನ ನಡೆಸಿಲ್ಲ ಎಂದು ಪಟೇಲ್ ಹೇಳಿದ್ದಾರೆ.

ಪಟೇಲ್ ತಮ್ಮದೇ ಪಕ್ಷದ ವಿರುದ್ಧ ಮಾತನಾಡಿದ ನಂತರ, ಗುಜರಾತ್ ಉಸ್ತುವಾರಿ ಎಐಸಿಸಿ ನಾಯಕ ರಘು ಶರ್ಮಾ ಅವರು ಮಾಧ್ಯಮಗಳ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸದಂತೆ ಪಟೇಲ್ ಅವರನ್ನು ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ. ಗುಜರಾತ್ ಉಸ್ತುವಾರಿಯ ಆದೇಶವನ್ನು ಧಿಕ್ಕರಿಸುವುದು ಅವರಿಗೆ ರಾಜಕೀಯ ಪರಿಣಾಮಗಳನ್ನು ಉಂಟುಮಾಡುತ್ತದೆಯೇ ಎಂದು ಕೇಳಿದಾಗ, ಪಟೇಲ್ ಅವರು “ರಾಜಕೀಯ ನಷ್ಟವು ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವವರನ್ನು ಚಿಂತಿಸಬೇಕು. ನನ್ನ ಏಕೈಕ ಕಾಳಜಿ ಗುಜರಾತ್‌ನ ಜನರು ಮತ್ತು ಅವರ ಕಲ್ಯಾಣ. ನಾನು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ರಾಜ್ಯ ನಾಯಕತ್ವದೊಂದಿಗೆ ನನ್ನ ಸಮಸ್ಯೆಗಳ ಬಗ್ಗೆ ರಘು ಶರ್ಮಾ ಅವರೊಂದಿಗೆ ಚರ್ಚಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ನೀರವ್ ಮೋದಿ, ವಿಜಯ್ ಮಲ್ಯ ‌ಗಡೀಪಾರು ವಿಷಯ; ಬ್ರಿಟನ್ ಸರ್ಕಾರ ಹಸ್ತಾಂತರಕ್ಕೆ ಆದೇಶ ನೀಡಿದೆ: ಯುಕೆ ಪ್ರಧಾನಿ

Follow us on

Related Stories

Most Read Stories

Click on your DTH Provider to Add TV9 Kannada