
ಅಹ್ಮದಾಬಾದ್: ದೇಶಾದ್ಯಂತ ಕೊರೊನಾ ವೈರಸ್ ಸಿಕ್ಕಾಪಟೆ ಹೆಚ್ಚುತ್ತಿದೆ. ಹಲವು ರಾಜ್ಯಗಳಲ್ಲಿ ದಿನದಿನವೂ ಸೋಂಕಿತರ ಸಂಖ್ಯೆ ಏರುತ್ತಿದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣವೂ ಅಧಿಕವಾಗುತ್ತಿದೆ. ಈ ಮಧ್ಯೆ ಗುಜರಾತ್ನ ಕಾಂಗ್ರೆಸ್ ಸಂಸದ ಶಕ್ತಿ ಸಿನ್ಹ ಗೋಹಿಲ್ ಅವರು ಶೇರ್ ಮಾಡಿಕೊಂಡಿರುವ ವಿಡಿಯೋವೊಂದು ಆತಂಕವನ್ನು ಹುಟ್ಟಿಸಿದೆ. ಇದು ಗುಜರಾತ್ನ ಭಾವನಗರ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ್ದು ಎಂದು ಸಂಸದರು ಹೇಳಿಕೊಂಡಿದ್ದಾರೆ.
ಒಂದು ನಿಮಿಷ 31 ಸೆಕೆಂಡ್ಗಳ ವಿಡಿಯೋ ಇದಾಗಿದ್ದು, ಇದರಲ್ಲಿ ರೋಗಿಗಳು ಆಸ್ಪತ್ರೆಯಲ್ಲಿ ನೆಲದ ಮೇಲೆ, ಸ್ಟ್ರೆಚರ್ಗಳ ಮೇಲೆಯೇ ಮಲಗಿರುವುದನ್ನು ನೋಡಬಹುದು. ಕೊವಿಡ್ 19 ಮಿತಿಮೀರುತ್ತಿರುವ ಕಾರಣದಿಂದ ಆಸ್ಪತ್ರೆಯಲ್ಲಿ ಬೆಡ್ಗಳ ಕೊರತೆ ಉಂಟಾಗಿದೆ. ಹಾಗಾಗಿ ರೋಗಿಗಳು ನೆಲದ ಮೇಲೆ ಮಲಗುವ ಪರಿಸ್ಥಿತಿ ಉಂಟಾಗಿದೆ ಎಂದು ಸಂಸದ ಗೋಹಿಲ್ ಹೇಳಿದ್ದಾರೆ. ಕಣ್ಣಮುಂದೆಯೇ ಅವ್ಯವಸ್ಥೆ ಕಾಣಿಸುತ್ತಿದ್ದರೂ ಗುಜರಾತ್ ಸರ್ಕಾರ ಮಾತ್ರ, ಎಲ್ಲವೂ ಸರಿಯಾಗಿದೆ ಎಂದೇ ಹೇಳಿಕೊಳ್ಳುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಸಂಸದ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಮುಖ್ಯಮಂತ್ರಿ ಕಚೇರಿ ಮತ್ತು ಡೆಪ್ಯೂಟಿ ಸಿಎಂ ನಿತಿನ್ ಪಟೇಲ್ರನ್ನು ಅವರನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ರನ್ನು ಟ್ಯಾಗ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರ್ಷವರ್ಧನ್ ಅವರೇ, ಗುಜರಾತ್ಗೆ ಕೇಂದ್ರದಿಂದ ತಂಡವನ್ನು ಕಳಿಸುವ ಅಗತ್ಯ ನಿಮಗೆ ಕಾಣುತ್ತಿಲ್ಲವೇ? ನಿಮ್ಮ ರಾಜಕೀಯಕ್ಕಾಗಿ ಗುಜರಾತ್ನಲ್ಲಿ ಎಲ್ಲವೂ ಸರಿ ಇದೆ ಎಂಬ ಇಮೇಜ್ನ್ನು ಸೃಷ್ಟಿಸಲು ಹೊರಟಿದ್ದೀರಿ. ಇದಕ್ಕಾಗಿ ಗುಜರಾತ್ ಜನ ತ್ಯಾಗ ಮಾಡಬೇಕಾಗಿ ಬಂದಿದೆ ಎಂದು ಕಿಡಿಕಾರಿದ್ದಾರೆ.
ಗುಜರಾತ್ನಲ್ಲಿ ಕೊವಿಡ್-19 ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 3,575 ಕೊವಿಡ್ ಕೇಸ್ಗಳು ದಾಖಲಾಗಿದ್ದವು. ಆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,28,453ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,620ಕ್ಕೆ ತಲುಪಿದೆ. ಗುಜರಾತ್ನ 20 ಪ್ರಮುಖ ನಗರಗಳಲ್ಲಿ ಸಂಜೆ 8ಗಂಟೆಯಿಂದ ಬೆಳಗ್ಗೆ 6ರವರೆಗೆ ನೈಟ್ಕರ್ಫ್ಯೂ ಹೇರಲಾಗಿದ್ದು, ಏಪ್ರಿಲ್ 30ರವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಅಲ್ಲದೆ, ಏಪ್ರಿಲ್ 30ರವರೆಗೆ ಸಾರ್ವಜನಿಕವಾಗಿ ಗುಂಪುಗೂಡುವಂತಿಲ್ಲ ಎಂದು ಹೇಳಿದೆ. ಹಾಗೇ, ಮದುವೆ ಸಮಾರಂಭದಲ್ಲಿ ಕೇವಲ 100-200ಜನರಷ್ಟೇ ಸೇರಬಹುದು. ಉಳಿದ ಕಾರ್ಯಕ್ರಮದಲ್ಲಿ ಗರಿಷ್ಠ 50 ಮಂದಿಗೆ ಮಾತ್ರ ಅವಕಾಶ.
ಇದನ್ನೂ ಓದಿ: Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪೊಲೀಸರ ಭದ್ರತೆಯೊಂದಿಗೆ ಕೆಲ ಬಸ್ ಸಂಚಾರ
ವಿರೋಧ ಪಕ್ಷದಲ್ಲಿದ್ದಾಗ ಯಡಿಯೂರಪ್ಪ ಏನು ಹೇಳಿದ್ದರು ನೆನಪು ಮಾಡ್ಕೊಳಿ: ಸಂಸದ ಪ್ರತಾಪ್ಗೆ ಸಾರಿಗೆ ನೌಕರರಿಂದ ಟಕ್ಕರ್