ಸುಕ್ಮಾ ಮಾ,29: ಛತ್ತೀಸ್ಗಢದ (Chhattisgarh) ಸುಕ್ಮಾ ಜಿಲ್ಲೆಯಲ್ಲಿ ಇಂದು (ಮಾ.29) ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಎನ್ಕೌಂಟರ್ ನಡೆದಿದೆ. ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ 16 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಬಸ್ತಾರ್ ಐಜಿ ಸುಂದರರಾಜ್ ಪಿ ತಿಳಿಸಿದ್ದಾರೆ. ಕೆರ್ಲಾಪಾಲ್ ಪೊಲೀಸ್ ಠಾಣೆ ಪ್ರದೇಶದ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅಲ್ಲಿ ನಕ್ಸಲ ವಿರೋಧಿ ಕಾರ್ಯಾಚರಣೆಗೆ ಭದ್ರತಾ ಪಡೆಗಳ ಜಂಟಿ ತಂಡ ಹೊರಟಿತ್ತು . ಈ ವೇಳೆ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆರ್ಲಾಪಾಲ್ ಪ್ರದೇಶದಲ್ಲಿ ಮಾವೋವಾದಿಗಳು ಬಿಡುಬಿಟ್ಟಿದ್ದರು ಎಂದು ಹೇಳಲಾಗಿದೆ. ಮಾಹಿತಿಯ ಆಧಾರದ ಮೇಲೆ ಶುಕ್ರವಾರ (ಮಾರ್ಚ್ 28) ರಾತ್ರಿ ಭದ್ರತಾ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಭಾಗಿಯಾಗಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ ಇದುವರೆಗೆ 16 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಸುಕ್ಮಾ ಪೊಲೀಸ್ ಠಾಣೆ ವ್ಯಾಪ್ತಿಯ ಕೆರ್ಲಪಾಲ್ ಪ್ರದೇಶದಲ್ಲಿ ನಕ್ಸಲರ ಇರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಜಂಟಿ ತಂಡವು ಮಾರ್ಚ್ 28 ರಂದು ಶೋಧ ಕಾರ್ಯಾಚರಣೆಗೆ ತೆರಳಿದ್ದು, ಇಂದು (ಮಾರ್ಚ್ 29) ಬೆಳಗಿನ ಜಾವದಿಂದ ನಿರಂತರ ಗುಂಡಿನ ದಾಳಿ ಮುಂದುವರೆದಿದೆ.
#UPDATE | 16 Naxal bodies have been recovered. 2 jawans sustained minor injuries: Bastar IG, Sundarraj P https://t.co/j6Ay79NqyD
— ANI (@ANI) March 29, 2025
ಭದ್ರತಾ ಪಡೆಗಳು ಪ್ರಸ್ತುತ ಎನ್ಕೌಂಟರ್ ಸ್ಥಳ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸುತ್ತಿವೆ. ನಡೆಯುತ್ತಿರುವ ಕಾರ್ಯಾಚರಣೆ ಪೂರ್ಣಗೊಂಡ ನಂತರ ವಿವರವಾದ ಹೇಳಿಕೆಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಸುಕ್ಮಾ ಅತ್ಯಂತ ಹೆಚ್ಚು ನಕ್ಸ್ಲ್ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿದೆ.ಈ ಹಿಂದೆ ಹಲವಾರು ನಕ್ಸಲ್ ದಾಳಿಗಳನ್ನು ಈ ಪ್ರದೇಶದಲ್ಲಿ ಕಂಡಿದ್ದೇವೆ. ಇನ್ನು ಶುಕ್ರವಾರ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡ ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಭಾರತ ಉತ್ತಮ ಪ್ರಧಾನಿಯನ್ನು ಪಡೆದಿದೆ, ಮೋದಿ ತುಂಬಾ ಬುದ್ಧಿವಂತ ವ್ಯಕ್ತಿ, ಮತ್ತೊಮ್ಮೆ ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್
ಇನ್ನು ಇದೇ ವೇಳೆ ಛತ್ತೀಸ್‌ಗಢದ ಬೆಡ್ಮಕೋಟಿಯ ಬಳಿ ಇಟ್ಟಿದ ಮತ್ತೊಂದು ಐಇಡಿ ಸ್ಫೋಟಗೊಂಡು ಮತ್ತೊಂಬ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕನಿಗೆ ನಾರಾಯಣಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಬಸ್ತಾರ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ತಿಳಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ, ಗಾಯಗೊಂಡ ಸೈನಿಕನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ