Gurgaon Rains: ಗುರುಗ್ರಾಮದಲ್ಲಿ ಭಾರೀ ಮಳೆ, ರಸ್ತೆ ಮೇಲೆ ಪ್ರವಾಹ; ವರ್ಕ್ ಫ್ರಂ ಹೋಮ್ ಮಾಡಿ ಎಂದ ಅಧಿಕಾರಿಗಳು
ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಮಾಡುವಂತೆ ನಗರ ಆಡಳಿತ ಸಲಹೆ ಮಾಡಿದೆ. ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದೆಹಲಿ: ಉತ್ತರ ಭಾರತದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ದೆಹಲಿ ಗಡಿಯಲ್ಲಿರುವ ಹರಿಯಾಣದ ಗುರುಗ್ರಾಮದಲ್ಲಿ (Gurgaon Rain) ರಸ್ತೆಗಳ ಮೇಲೆ ನೀರು ಹರಿಯುವಷ್ಟು ಜೋರಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ಸಂಚಾರ ಸ್ಥಗಿತಗೊಂಡಿದ್ದು, ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಮಾಡುವಂತೆ ನಗರ ಆಡಳಿತ ಸಲಹೆ ಮಾಡಿದೆ. ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಗುರುಗ್ರಾಮದಲ್ಲಿ ಇಂದೂ ಸಹ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುಗ್ರಾಮ ಪ್ರದೇಶಕ್ಕೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ರಸ್ತೆಗಳು ಮತ್ತೊಮ್ಮೆ ಜಲಾವೃತವಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
‘ಮತ್ತೊಮ್ಮೆ ಭಾರೀ ಮಳೆ ಸುರಿದರೆ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ನಗರ ಮತ್ತು ಜಿಲ್ಲೆಯ ಎಲ್ಲ ಕಾರ್ಪೊರೇಟ್ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಲು ಕೋರಿದ್ದೇವೆ. ಉದ್ಯೋಗಿಗಳ ಸುರಕ್ಷೆ ಮತ್ತು ರಸ್ತೆಯ ಮೇಲಿನ ಸಂಚಾರ ದಟ್ಟಣೆ ತಪ್ಪಿಸಲು ಇದು ಅತ್ಯಗತ್ಯ’ ಎಂದು ಗುರುಗ್ರಾಮ ವಿಪತ್ತು ನಿರ್ವಹಣಾ ಪ್ರಾಧಿಕಾರವು ತನ್ನ ಸಲಹೆಯಲ್ಲಿ ತಿಳಿಸಿದೆ.
#WATCH | Haryana: Massive traffic jam on Delhi-Gurugram expressway amid severe waterlogging due to incessant rainfall in Gurugram pic.twitter.com/UbaDSflLBv
— ANI (@ANI) September 22, 2022
ಗೋಡೆ ಕುಸಿದು 7 ಮಕ್ಕಳು ಸಾವು
ಭಾರೀ ಮಳೆಯಿಂದಾಗಿ ಉತ್ತರ ಪ್ರದೇಶದ ಚಂದ್ರಪುರ ಮತ್ತು ಘಾಟಿಯಾ ಅಜ್ಮತ್ ಅಲಿ ಪ್ರದೇಶಗಳಲ್ಲಿ ಮನೆಗಳ ಗೋಡೆಗಳು ಕುಸಿದು ಏಳು ಮಕ್ಕಳು ಮೃತಪಟ್ಟಿದ್ದಾರೆ. ಮಳೆಯ ಅನಾಹುತದಿಂದ ಇಟಾವಾ ಜಿಲ್ಲೆಯಾದ್ಯಂತ ಇದುವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಮೊದಲ ಘಟನೆಯಲ್ಲಿ ಬುಧವಾರ ತಡರಾತ್ರಿ ಚಂದ್ರಾಪುರ ಗ್ರಾಮದಲ್ಲಿ ನಾಲ್ವರು ಮಕ್ಕಳು ನಿದ್ರೆಯಲ್ಲಿರುವಾಗ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಸಿಂಕು (10), ಅಭಿ (8), ಸೋನು (7), ಆರತಿ (5) ಎಂದು ಗುರುತಿಸಲಾಗಿದೆ ಎಂದು ಇಟಾವಾ ಜಿಲ್ಲಾಧಿಕಾರಿ ಅವಿನಾಶ್ ರೈ ಹೇಳಿದ್ದಾರೆ.
Published On - 7:17 am, Fri, 23 September 22