Gurugram Rains: ಭಾರೀ ಮಳೆಯಿಂದ ನದಿಗಳಾದ ಗುರುಗ್ರಾಮದ ರಸ್ತೆಗಳು; ನೀರಿನಲ್ಲಿ ತೇಲಿಬಂದ ಕಾರುಗಳ ವಿಡಿಯೋ ವೈರಲ್

Weather Today: 2-3 ದಿನ ಗುರುಗ್ರಾಮದಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

Gurugram Rains: ಭಾರೀ ಮಳೆಯಿಂದ ನದಿಗಳಾದ ಗುರುಗ್ರಾಮದ ರಸ್ತೆಗಳು; ನೀರಿನಲ್ಲಿ ತೇಲಿಬಂದ ಕಾರುಗಳ ವಿಡಿಯೋ ವೈರಲ್
ಗುರುಗ್ರಾಮ ಮಳೆ
TV9kannada Web Team

| Edited By: Sushma Chakre

Jul 19, 2021 | 4:20 PM

ಗುರುಗ್ರಾಮ: ಮುಂಬೈ, ಗುಜರಾತ್, ಉತ್ತರಾಖಂಡ, ಹಿಮಾಚಲಪ್ರದೇಶ ಮುಂತಾದೆಡೆ ಭಾರೀ ಮಳೆಯಾಗುತ್ತಿದೆ. ಅದೇ ರೀತಿ ಹರಿಯಾಣದ ಗುರುಗ್ರಾಮದಲ್ಲೂ ಮಳೆಯಿಂದ ಜನಜೀವನ ಅಲ್ಲೋಲಕಲ್ಲೋಲವಾಗಿದೆ. ಗುರುಗ್ರಾಮದ ರಸ್ತೆಗಳಲ್ಲಿ ಮಳೆಯಿಂದ ನೀರು ತುಂಬಿ, ಕೆರೆಗಳಾಗಿವೆ. ಗುರುಗ್ರಾಮದ ಮುಖ್ಯ ರಸ್ತೆಗಳಲ್ಲಿ ಸೊಂಟದ ಮಟ್ಟಕ್ಕೆ ನೀರು ತುಂಬಿದ್ದು, ಕಾರು, ಬೈಕ್​ಗಳು ತೇಲಿಕೊಂಡು ಬರುತ್ತಿವೆ. ಫೈನಾನ್ಷಿಯಲ್ ಮತ್ತು ಟೆಕ್ನಾಲಜಿ ಹಬ್ ಆಗಿರುವ ಗುರುಗ್ರಾಮ ಸಂಪೂರ್ಣ ನೀರಿನಿಂದ ಆವೃತವಾಗಿದೆ.

ಇಲ್ಲಿನ ಪಲಾಮ್ ವಿಹಾರ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು ನೀರಿನಿಂದ ಮುಳುಗಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿವೆ. ರಸ್ತೆಗಳಲ್ಲಿ ಕಾರುಗಳು ತೇಲಿಬರುತ್ತಿದ್ದು, ಚರಂಡಿಗಳ ಕೊಳಕು ನೀರು ಕೂಡ ರಸ್ತೆಗಳಲ್ಲಿ ತುಂಬಿ ಇಡೀ ಗುರುಗ್ರಾಮದ ನಗರವೇ ಗಬ್ಬೆದ್ದುಹೋಗಿದೆ. ಪಾರ್ಕಿಂಗ್ ಏರಿಯಾಗಳಲ್ಲಿ ನಿಲ್ಲಿಸಲಾದ ಕಾರು, ಜೀಪು, ಬೈಕುಗಳು ನೀರಿನೊಂದಿಗೆ ತೇಲಿಬರುತ್ತಿವೆ.

ಇನ್ನೂ 2-3 ದಿನ ಗುರುಗ್ರಾಮದಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂದು ಮತ್ತು ನಾಳೆ ಸಿಡಿಲು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರದ ಮುಂಬೈ, ರಾಷ್ಟ್ರ ರಾಜಧಾನಿ ದೆಹಲಿ, ಗುಜರಾತ್, ಕೇರಳ, ಕರ್ನಾಟಕ, ಉತ್ತರಾಖಂಡ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದ ಮುಂಬೈನಲ್ಲಿ 33 ಜನರು ಸಾವನ್ನಪ್ಪಿದ್ದು, ಉತ್ತರಾಖಂಡದಲ್ಲಿ 3 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯಲ್ಲೂ ಇಂದು ಮಳೆ ಮುಂದುವರೆದಿದ್ದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲೂ ಇನ್ನು ಮೂರು ದಿನ ಮಳೆ ಹೆಚ್ಚಾಗಲಿದೆ. ಜುಲೈ 21ರವರೆಗೆ ಮಲೆನಾಡು, ಕರಾವಳಿ, ಕೊಡಗು ಸೇರಿದಂತೆ ಬಹುತೇಕ ಕಡೆ ಮಳೆಯಾಗಲಿದೆ.

ಮುಂಬೈನಲ್ಲಿ ನಾಲ್ಕೈದು ದಿನಗಳಿಂದ ಬಿಡದೆ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಕೆರೆಯಂತಾಗಿವೆ. ರೈಲು, ಬಸ್​ ಸಂಚಾರಕ್ಕೆ ತೊಂದರೆಯಾಗಿದ್ದು, ಮಾರ್ಗವನ್ನು ಬದಲಿಸಲಾಗಿದೆ. ಭಾನುವಾರ ಸುರಿದ ಸಿಡಿಲು ಸಹಿತ ಮಳೆಗೆ ಮುಂಬೈನಲ್ಲಿ 33 ಜನರು ಬಲಿಯಾಗಿದ್ದಾರೆ. ಮುಂಬೈ ಸುತ್ತಮುತ್ತ ಭಾರೀ ಭೂಕುಸಿತವಾಗುತ್ತಿದೆ. ಇನ್ನೂ 24 ಗಂಟೆಗಳ ಕಾಲ ಮುಂಬೈ ಸುತ್ತಮುತ್ತಲ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮಾಂಡೋ ಎಂಬ ಗ್ರಾಮದಲ್ಲಿ ಮೇಘಸ್ಫೋಟದಿಂದ ಮೂರು ಜನರು ಸಾವನ್ನಪ್ಪಿದ್ದಾರೆ. ಗುಡ್ಡ ಕುಸಿದ ಪರಿಣಾಮ ನಾಲ್ಕು ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಕೊಂಕಣ, ಬಿಹಾರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ.

ಇದನ್ನೂ ಓದಿ: Mumbai Rains: ಮಳೆಯ ಆರ್ಭಟದಿಂದ ಮುಂಬೈನಲ್ಲಿ 33 ಜನ ಸಾವು; ಉತ್ತರಾಖಂಡದಲ್ಲಿ ಭಾರೀ ಭೂಕುಸಿತ

(Gurugram Goes the Mumbai Way After Heavy Rains Cars Float Video Goes Viral Monsoon 2021 )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada