ದೆಹಲಿ: ಜೂನ್ 1, 2021ರಿಂದ ಚಿನ್ನದ ಆಭರಣಗಳಿಗೆ ಮತ್ತು ಕಲಾಕೃತಿಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯಗೊಳಿಸುವುದಾಗಿ ಸರ್ಕಾರ ಮಂಗಳವಾರ ತಿಳಿಸಿದೆ. ಚಿನ್ನದ ಗುಣಮಟ್ಟ ಕಾಪಾಡುವ ಸಲುವಾಗಿ ಹಾಲ್‌ಮಾರ್ಕಿಂಗ್ ಅನುಸರಿಸುವುದು ಅದರ ಪರಿಶುದ್ಧತೆಯ ದೃಷ್ಟಿಯಿಂದ ಅತ್ಯುತ್ತಮ ನಿರ್ಧಾರ ಹಾಗೂ ಬೆಲೆ ಬಾಳುವ ಲೋಹವಾದ್ದರಿಂದ ಗುಣಮಟ್ಟ ಕಾಪಾಡಲು ಇದು ಅತ್ಯವಶ್ಯಕವೂ ಹೌದು.
2021 ರ ಜನವರಿ 15 ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರವು 2019 ರ ನವೆಂಬರ್‌ನಲ್ಲಿ ಘೋಷಣೆ ಮಾಡಿತ್ತು. ಬ್ಯುರೋ ಆಫ್ ಇಂಡಿಯನ್ ಸ್ಯಾಂಡರ್ಡ್ನಲ್ಲಿ (ಬಿಐಎಸ್) ಹಾಲ್ ಮಾರ್ಕಿಂಗ್ ಅಳವಡಿಸಿಕೊಳ್ಳಲು ನೋಂದಾಯಿಸಲು ಒಂದು ವರ್ಷ ಕಾಲಾವಕಾಶವನ್ನು ವ್ಯಾಪಾರಿಗಳಿಗೆ ನೀಡಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆಭರಣಕಾರರು ಹೆಚ್ಚಿನ ಸಮಯವನ್ನು ಕೇಳಿದ್ದರಿಂದ ಜೂನ್ 1 ರವರೆಗೆ ಅಂದರೆ ನಾಲ್ಕು ತಿಂಗಳು ಗಡುವನ್ನು ವಿಸ್ತರಿಸಲಾಯಿತು.
ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಅವರು, ಜೂನ್ 1ರಿಂದ ನಾವು ಚಿನ್ನಕ್ಕೆ ಹಾಲ್ ಮಾರ್ಕಿಂಗ್ ಅಳವಡಿಕೆ ಕಡ್ಡಾಯಗೊಳಿಸಲು ಸಿದ್ಧರಿದ್ದೇವೆ. ಹಾಗೂ 34,647 ಆಭರಣಗಳನ್ನು ಬಿಐಎಸ್ ಜೊತೆ ನೋಂದಣಿ ಮಾಡಿದ್ದೇವೆ ಎಂದರು. ಬರುವ 2 ತಿಂಗಳಲ್ಲಿ 2 ಲಕ್ಷದವರೆಗೆ ಆಭರಣವನ್ನು ನೋಂದಣಿಗೆ ಒಳಪಡಿಸಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.
ಜೂನ್ ತಿಂಗಳಿನಿಂದ 14, 18, 22 ಕ್ಯಾರೆಟ್ ಚಿನ್ನದ ಮೇಲೆ ಹಾಲ್‌ಮಾರ್ಕಿಂಗ್ ಮಾಡಲಾಗುವುದು. ಬ್ರ್ಯಾಂಡೆಡ್ ಚಿನ್ನಾಭರಣ ಅಂಗಡಿಗಳಲ್ಲಿ ಈಗಾಗಲೇ ಹಾಲ್ಮಾರ್ಕ್ ಸಾಮಾನ್ಯವಾಗಿದೆ. ಸರ್ಕಾರ ಒಟ್ಟು 861 ಹಾಲ್‌ಮಾರ್ಕಿಂಗ್ ಕೇಂದ್ರಗಳನ್ನು ತೆರೆಯಲಿದ್ದು, ಮೊದಲಿಗೆ ಮೆಟ್ರೋ ನಗರಗಳಲ್ಲಿ ಚಿನ್ನದ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಿದೆ. ನಂತರದಲ್ಲಿ ಉಳಿದ ಕಡೆ ಕಡ್ಡಾಯವಾಗಲಿದೆ.
ಬಿಐಎಸ್ ಈಗಾಗಲೇ ಹಾಲ್ ಮಾರ್ಕಿಂಗ್ ಸ್ಕೀಮನ್ನು ಆರಂಭಿಸಿದ್ದು ಪ್ರಸ್ತುತ ಶೇ.40ರಷ್ಟು ಚಿನ್ನವನ್ನು ಹಾಲ್‌ಮಾರ್ಕಿಂಗ್ ಮಾಡಲಾಗಿದೆ. ಬಿಐಎಸ್ನ ಪ್ರಕಾರ ಹಾಲ್ಮಾರ್ಕ್ನಿಂದಾಗಿ ಕೆಳಮಟ್ಟದ ಚಿನ್ನ ನೀಡಿ ಜನರನ್ನು ಮೋಸಗೊಳಿಸುವುದನ್ನು ತಡೆಯಬಹುದು. ಜೊತೆಗೆ ಗ್ರಾಹಕರಿಗೆ ಪರಿಶುದ್ಧತೆಯ ಚಿನ್ನವನ್ನು ಪಡೆಯಲು ಸಹಾಯಕವಾಗುತ್ತದೆ.
ಭಾರತವು ಅತಿ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶವಾಗಿದ್ದು, ವಾರ್ಷಿಕವಾಗಿ 700-800 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಚಿನ್ನದಲ್ಲಿ ಹಾಲ್‌ಮಾರ್ಕಿಂಗ್ ಇದ್ದರೆ ಗ್ರಾಹಕರು ಮರು ಮಾರಾಟ ಮಾಡಲು ಹೊರಟಾಗ ಮಾರುಕಟ್ಟೆ ದರವನ್ನೇ ಪಡೆಯಬಹುದು. ಹೀಗಾಗಿ ಚಿನ್ನದಲ್ಲಿ ಪರಿಶುದ್ಧತೆಯ ಜತೆಗೆ ಗುಣಮಟ್ಟವನ್ನು ದೃಢಪಡಿಸಿಕೊಳ್ಳಲು ಹಾಲ್ಮಾರ್ಕ್ ಅತ್ಯವಶ್ಯಕ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ
22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,400 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯ ನಂತರ 150 ರೂಪಾಯಿಯಷ್ಟು ದರ ಇಳಿಕೆ ಕಂಡಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನ 160 ರೂಪಾಯಿ ಇಳಿಕೆಯ ನಂತರ 47,350 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿಯೂ ಕೊಂಚ ಇಳಿಕೆ ಕಂಡು ಬಂದಿದ್ದು, 1 ಕೆಜಿ ಬೆಳ್ಳಿ 900 ರೂಪಾಯಿ ಇಳಿಕೆ ಕಂಡಿದೆ. ಇದೀಗ ದರ 66,300 ರೂಪಾಯಿ ಆಗಿದೆ.
ಇದನ್ನೂ ಓದಿ: Gold Rate Today: ಯುಗಾದಿ ಹಬ್ಬದ ಶುಭ ದಿನದಂದು ಚಿನ್ನ ಕೊಳ್ಳುವುದಾದರೆ ದರ ಹೀಗಿದೆ!
Gold Rate Today: ಯುಗಾದಿ ಹಬ್ಬಕ್ಕೆ ಚಿನ್ನದ ಉಡುಗೊರೆ; ಖರೀದಿಸುವ ಆಸೆ ಇದ್ದರೆ ದರ ವಿವರ ಇಲ್ಲಿದೆ!
Published On - 8:20 am, Wed, 14 April 21