ನೊಯ್ಡಾ: ಇಂದು (ಡಿಸೆಂಬರ್ 6) ಬಾಬ್ರಿ ಮಸೀದಿ (Babri Masjid) ಧ್ವಂಸವಾಗಿ 30 ವರ್ಷ ಪೂರೈಸುತ್ತದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಅಯೋಧ್ಯೆ ಮಾತ್ರವಲ್ಲದೆ ಮಥುರಾದಲ್ಲೂ (Mathura) ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದರ ನಡುವೆ ಭಗವಾನ್ ಕೃಷ್ಣನ ನಿಜವಾದ ಜನ್ಮಸ್ಥಳ ಎಂದು ಕರೆಯಲಾಗುವ ಮಥುರಾದಲ್ಲಿ ಹನುಮಾನ್ ಚಾಲೀಸಾವನ್ನು (Hanuman Chalisa) ಪಠಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ (ABHM) ನೀಡಿದೆ. ಹೀಗಾಗಿ, ಮಥುರಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಥುರಾದಲ್ಲಿ ಬಿಗಿ ಭದ್ರತೆಯ ನಡುವೆ ಡ್ರೋನ್‌ಗಳ ಮೂಲಕ ಕಣ್ಗಾವಲು ನಡೆಸಲಾಗುತ್ತಿದೆ. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿ ಯಾವುದೇ ರೀತಿಯ ಕಾರ್ಯಕ್ರಮ ಆಯೋಜಿಸಲು ಆಡಳಿತ ಯಾರಿಗೂ ಅನುಮತಿ ನೀಡಿಲ್ಲ. ಹೊರಗಿನಿಂದ ಬರುವ ವಾಹನಗಳು ಹಾಗೂ ಜನರನ್ನೂ ತಪಾಸಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮಥುರಾದಲ್ಲಿ ಸೂಟ್ಕೇಸ್ನಲ್ಲಿ ಯುವತಿಯ ಶವ ಪತ್ತೆ ಪ್ರಕರಣಕ್ಕೆ ಹೊಸ ತಿರುವು; ಅಪ್ಪನೇ ಕೊಲೆಗಾರ!
ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್ ಅವರು ಇಡೀ ಮಥುರಾದಲ್ಲಿ ಭದ್ರತೆಯ ಬಗ್ಗೆ ಪ್ರತಿ ಕ್ಷಣದ ಮೇಲೆ ನಿಗಾ ಇಡುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದಾರೆ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಇಂದು 30ನೇ ವರ್ಷದ ‘ಸನಾತನ ಸಮರ್ಪಣ ದಿವಸ್’ ಆಚರಿಸಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ.
ಇಂದು ಅಖಿಲ ಭಾರತ ಹಿಂದೂ ಮಹಾಸಭಾ ಪ್ರಸ್ತಾಪಿಸಿದ ಸ್ಥಳದಲ್ಲಿ ‘ಹನುಮಾನ್ ಚಾಲೀಸಾ’ ಪಠಣ ಸೇರಿದಂತೆ ಯಾವುದೇ ಕಾರ್ಯಕ್ರಮವನ್ನು ನಡೆಸಲು ಯಾವುದೇ ಅನುಮತಿ ಕೇಳಿಲ್ಲ. ಅನುಮತಿಯಿಲ್ಲದೆ ಕಾರ್ಯಕ್ರಮ ನಡೆಸಿ, ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶೈಲೇಶ್ ಪಾಂಡೆ ಹೇಳಿದ್ದಾರೆ. ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣ ಮತ್ತು ಶಾಹಿ ಈದ್ಗಾ ಮಸೀದಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಾಕಷ್ಟು ರಕ್ಷಣೆ ನೀಡಿದೆ.