ಹರಿಯಾಣ ಶಾಲೆಗಳಲ್ಲಿ ಆಗಸ್ಟ್ 15ರಿಂದ ‘ಗುಡ್ ಮಾರ್ನಿಂಗ್’ ಬದಲಿಗೆ ‘ಜೈ ಹಿಂದ್’ ಬಳಕೆ

|

Updated on: Aug 09, 2024 | 6:39 PM

ಹರಿಯಾಣದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಆಗಸ್ಟ್ 15ರಿಂದ ಗುಡ್ ಮಾರ್ನಿಂಗ್ ಎಂದು ಬೆಳಗ್ಗೆ ಶುಭ ಕೋರುವ ಬದಲು ಜೈ ಹಿಂದ್ ಎಂದು ಹೇಳಲು ಸೂಚಿಸಲಾಗಿದೆ. ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಮತ್ತು ಪೊಲೀಸ್ ಪಡೆಗಳ ಸೇವೆಗಳನ್ನು ಶಿಸ್ತುಬದ್ಧವೆಂದು ಗುರುತಿಸುವ ಮೂಲಕ ಜೈ ಹಿಂದ್ ಅನ್ನು ಶುಭಾಶಯವಾಗಿ ಜಾರಿಗೊಳಿಸಲಾಗಿದೆ. ಇದು ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಸಂಪ್ರದಾಯಗಳಿಗೆ ಗೌರವವನ್ನು ಉತ್ತೇಜಿಸುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹರಿಯಾಣ ಶಾಲೆಗಳಲ್ಲಿ ಆಗಸ್ಟ್ 15ರಿಂದ ಗುಡ್ ಮಾರ್ನಿಂಗ್ ಬದಲಿಗೆ ಜೈ ಹಿಂದ್ ಬಳಕೆ
ಸಾಂದರ್ಭಿಕ ಚಿತ್ರ
Follow us on

ಹರಿಯಾಣ: ಹರಿಯಾಣ ಸರ್ಕಾರದ ಸುತ್ತೋಲೆಯ ಪ್ರಕಾರ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಿಂದಲೇ ಹರಿಯಾಣದ ಎಲ್ಲಾ ಶಾಲೆಗಳಲ್ಲಿ ‘ಶುಭೋದಯ’ (ಗುಡ್ ಮಾರ್ನಿಂಗ್) ಬದಲಿಗೆ ‘ಜೈ ಹಿಂದ್’ ಎಂದು ಹೇಳಲು ನಿರ್ಧರಿಸಲಾಗಿದೆ. ಹರಿಯಾಣ ಸರ್ಕಾರವು ಆರಂಭಿಸಿರುವ ಈ ಕ್ರಮವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಭಾವನೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಶಾಲಾ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆಯಲ್ಲಿ ತಿಳಿಸಿದೆ.

‘ಜೈ ಹಿಂದ್’ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸುಭಾಸ್ ಚಂದ್ರ ಬೋಸ್ ಅವರು ರಚಿಸಿದರು. ಸ್ವಾತಂತ್ರ್ಯದ ನಂತರ ಸಶಸ್ತ್ರ ಪಡೆಗಳಿಂದ ಸೆಲ್ಯೂಟ್ ಆಗಿ ಈ ಘೋಷಣೆಯನ್ನು ಅಳವಡಿಸಲಾಯಿತು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಶಾಲಾ ಶಿಕ್ಷಣ ನಿರ್ದೇಶನಾಲಯವು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಜಿಲ್ಲಾ ಬ್ಲಾಕ್ ಶಿಕ್ಷಣಾಧಿಕಾರಿಗಳು, ಬ್ಲಾಕ್ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರಿಗೆ ಸುತ್ತೋಲೆಯನ್ನು ಕಳುಹಿಸಿದೆ.

ಇದನ್ನೂ ಓದಿ: ಒಡಿಶಾದ ಬಾಲಸೋರ್‌ ಶಾಲೆಯ ಮಧ್ಯಾಹ್ನದ ಊಟದಲ್ಲಿ ಸತ್ತ ಹಲ್ಲಿ ಪತ್ತೆ; 100 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಸುತ್ತೋಲೆಯ ಪ್ರಕಾರ, ಶಾಲೆಗಳಲ್ಲಿ ಶುಭೋದಯದ ಬದಲು ‘ಜೈ ಹಿಂದ್’ ಹೇಳಲು ಸೂಚಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ರಾಷ್ಟ್ರೀಯ ಏಕತೆಯ ಉತ್ಸಾಹದಿಂದ ಪ್ರತಿದಿನ ಪ್ರೇರಿತರಾಗಬಹುದು ಮತ್ತು ದೇಶದ ಶ್ರೀಮಂತ ಇತಿಹಾಸಕ್ಕೆ ಗೌರವ ನೀಡಬಹುದು. ‘ಜೈ ಹಿಂದ್’ ಎಂಬ ಘೋಷಣೆ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳನ್ನು ಶ್ಲಾಘಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತದೆ ಎಂದು ಅದು ಹೇಳಿದೆ.

‘ಜೈ ಹಿಂದ್’ ನಂತಹ ಶುಭಾಶಯಗಳನ್ನು ನಿಯಮಿತವಾಗಿ ಬಳಸುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಏಕರೂಪತೆಯ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ