ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಕಾಳಿ ಬಗ್ಗೆ(Kaali Row) ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಈ ನಡುವೆ ಕಾಮಾಖ್ಯ ದೇವಾಲಯದಲ್ಲಿ ದೇವರಿಗೆ ಏನು ಅರ್ಪಿಸಲಾಗುತ್ತದೆ ಎಂಬುದರ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಲಿಖಿತ ರೂಪದಲ್ಲಿ ವಿವರಿಸಬಹುದೇ ಎಂದು ಮೊಯಿತ್ರಾ ಕೇಳಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾ ಕಾಳಿಗೆ ಏನು ಅರ್ಪಿಸಲಾಗುತ್ತದೆ ಎಂಬುದರ ಬಗ್ಗೆ ಇತರ ಮುಖ್ಯಮಂತ್ರಿಗಳೂ ಹೇಳಲಿ. ಈ ದೇವಾಲಯಗಳಲ್ಲಿ ಮದ್ಯ ಅರ್ಪಿಸಲಾಗುತ್ತಿಲ್ಲವೇ? ಬಿಜೆಪಿ (BJP) ಉದ್ದೇಶಪೂರ್ವಕವಾಗಿ ನನ್ನ ಮೇಲೆ ದಾಳಿ ಮಾಡಲು ಬಯಸುತ್ತಿದೆ. ಅವರ ಈ ಕಾರ್ಯತಂತ್ರ ಕೆಲಸ ಮಾಡುವುದಿಲ್ಲ ಎಂದು ಬಂಗಾಳಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮೊಯಿತ್ರಾ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ನನ್ನ ವಿರುದ್ಧ ಎಫ್ಐಆರ್ ದಾಖಲಾಗಿರುವ ರಾಜ್ಯಗಳಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಾನು ಸವಾಲು ಹಾಕುತ್ತಿದ್ದೇನೆ. ಅಲ್ಲಿನ ರಾಜ್ಯಗಳಲ್ಲಿ ಮಾ ಕಾಳಿಗೆ ಏನು ಅರ್ಪಿಸಲಾಗುತ್ತಿದೆ ಎಂಬುದನ್ನು ನ್ಯಾಯಾಲಯಕ್ಕೆ ಅಫಿಡವಿಟ್ ಮೂಲಕ ಸಲ್ಲಿಸಿ ಎಂದಿದ್ದಾರೆ ಮೊಯಿತ್ರಾ.
ತಾನು ಪ್ರಬುದ್ಧ ರಾಜಕಾರಣಿಯಂತೆ ವರ್ತಿಸಿದ್ದೇನೆ. ಬಿಜೆಪಿ ಹಿಂದೂ ದೇವರ ವಾರೀಸುದಾರರಲ್ಲ. ಬಂಗಾಳಿಗಳಿಗೆ ಮಾ ಕಾಳಿಯನ್ನು ಹೇಗೆ ಪೂಜಿಸಬೇಕೆಂದು ಅವರು ಹೇಳಿಕೊಡಬೇಕಿಲ್ಲ. ರಾಮ ಅಥವಾ ಹನುಮಾನ್ ಬಿಜೆಪಿಗೆ ಮಾತ್ರ ಸೇರಿದ್ದಲ್ಲ. ಬಿಜೆಪಿ ಹಿಂದೂ ಧರ್ಮವನ್ನು ಗುತ್ತಿಗೆ ಪಡೆದುಕೊಂಡಿದೆಯೇ ಎಂದು ಮಹುವಾ ಪ್ರಶ್ನಿಸಿದ್ದಾರೆ.
ಇಂಡಿಯಾ ಟುಡೇ ಮೀಡಿಯಾ ಕಾನ್ಕ್ಲೇವ್ನಲ್ಲಿ ಮಾತನಾಡಿದ್ದ ಮೊಯಿತ್ರಾ, ಕಾಳಿ ಮಾಂಸಾಹಾರ, ಮದ್ಯ ಇಷ್ಟ ಪಡುವ ದೇವರು ಎಂದು ಹೇಳಿದ್ದರು. ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದ್ದು, ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಮಹುವಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಹುವಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸಿದ್ದು ಈ ವಿವಾದ ರಾಜಕೀಯ ತಿರುವು ಪಡೆದುಕೊಂಡಿತು. ಇತ್ತ ತೃಣಮೂಲ ಕಾಂಗ್ರೆಸ್ ಮಹುವಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು ಸಾರ್ವಜನಿಕವಾಗಿ ಹೇಳಿಕೆ ಖಂಡಿಸಿತ್ತು. ಆದಾಗ್ಯೂ, ತಮ್ಮ ಹೇಳಿಕೆಯನ್ನು ಮಹುವಾ ವಾಪಸ್ ಪಡೆದುಕೊಂಡಿಲ್ಲ. ಆದರೆ ಪಶ್ಚಿಮ ಬಂಗಾಳಗ ತಾರಾಪೀಠದಲ್ಲಿ ಮಾ ಕಾಳಿಯನ್ನು ಹೇಗೆ ಪೂಜಿಸಲಾಗುತ್ತಿದೆ ಎಂದು ನಾನು ಹೇಳಿದ್ದೆ ಅಂದಿದ್ದರು.