ದೆಹಲಿ ಜುಲೈ 01: ಚಲಿಸುವ ರೈಲಿನಲ್ಲಿ ಆರ್‌ಪಿಎಫ್ ಕಾನ್‌ಸ್ಟೆಬಲ್ ನಡೆಸಿದ ಗುಂಡಿನ ದಾಳಿ ಮತ್ತು ಹರ್ಯಾಣದಲ್ಲಿನ (Haryana) ಕೋಮು ಸಂಘರ್ಷ ನಂತರ ಕಾಂಗ್ರೆಸ್ (Congress) ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರೀತಿಯಿಂದ ಮಾತ್ರ ಈ ಬೆಂಕಿಯನ್ನು ನಂದಿಸಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಬಿಜೆಪಿ, ಮಾಧ್ಯಮಗಳು ಮತ್ತು ಅವರೊಂದಿಗೆ ನಿಂತಿರುವ ಶಕ್ತಿಗಳು ದೇಶದಾದ್ಯಂತ ದ್ವೇಷದ ಸೀಮೆಎಣ್ಣೆಯನ್ನು ಹರಡಿವೆ. ಪ್ರೀತಿಯಿಂದ ಮಾತ್ರ ದೇಶದಲ್ಲಿ ಈ ಬೆಂಕಿಯನ್ನು ನಂದಿಸಲು ಸಾಧ್ಯ ಎಂದಿದ್ದಾರೆ.
ಪೊಲೀಸರ ಪ್ರಕಾರ ಮುಸ್ಲಿಂ ಪ್ರಾಬಲ್ಯದ ನುಹ್ ಜಿಲ್ಲೆಯಲ್ಲಿ ಮೊದಲು ಕೋಮುಗಲಭೆ ಭುಗಿಲೆದ್ದಿದ್ದು, ಜನರ ಗುಂಪು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು, ಕಲ್ಲು ತೂರಾಟ ಮಾಡಿತ್ತು. ಇದಾದ ನಂತರ ಕಾರುಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿತು. ಮಂಗಳವಾರ ಅಧಿಕಾರಿಗಳು ನುಹ್‌ನಲ್ಲಿ ಕರ್ಫ್ಯೂ ವಿಧಿಸಿದ್ದು, ಸೋಮವಾರ ಇಬ್ಬರು ಹೋಮ್ ಗಾರ್ಡ್ ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ.
भाजपा, मीडिया और उनके साथ खड़ी ताक़तों ने पूरे देश में नफ़रत का केरोसिन फैला दिया है।
सिर्फ़ मोहब्बत ही देश में लगी इस आग को बुझा सकती है।
— Rahul Gandhi (@RahulGandhi) August 1, 2023
ಇದಾದ ನಂತರ ಗುಂಪು ಮಸೀದಿಯೊಂದರ ಮೇಲೆ ದಾಳಿ ಮಾಡಿ ಇಮಾಮ್ ಹತ್ಯೆ ನಡೆಸಿದ್ದು, ಹಿಂಸಾಚಾರವು ಗುರುಗ್ರಾಮ್‌ಗೆ ಹರಡಿತು. ನುಹ್ ಜಿಲ್ಲೆಯಲ್ಲಿ ವಿಎಚ್‌ಪಿ ಮೆರವಣಿಗೆಯನ್ನು ನಿಲ್ಲಿಸುವ ಪ್ರಯತ್ನದ ಮೇಲೆ ಭುಗಿಲೆದ್ದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಐವರು ಸಾವಿಗೀಡಾಗಿದ್ದಾರೆ.
ಗುರುಗ್ರಾಮ್‌ನಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಆಡಳಿತ ಹೇಳುತ್ತಿರುವಾಗಲೇ, ಕೋಮುಗಲಭೆಯ ಹೊಸ ಪ್ರಕರಣದಲ್ಲಿ ಮಂಗಳವಾರ ಮಧ್ಯಾಹ್ನ ಬಾದ್ ಶಾಹ್ ಪುರದಲ್ಲಿ ಗುಂಪೊಂದು ಉಪಾಹಾರ ಗೃಹಕ್ಕೆ ಬೆಂಕಿ ಹಚ್ಚಿದ್ದು, ಪಕ್ಕದ ಅಂಗಡಿಗಳನ್ನು ಧ್ವಂಸಗೊಳಿಸಿತು.
ಸೋಮವಾರ ಬೆಳಿಗ್ಗೆ, ಮುಂಬೈಗೆ ಹೋಗುವ ರೈಲಿನಲ್ಲಿ ಆರ್‌ಪಿಎಫ್ ಕಾನ್‌ಸ್ಟೆಬಲ್ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರ ಹತ್ಯೆಯಾಗಿದೆ. ಮುಂಬೈನ ಹೊರವಲಯದಲ್ಲಿರುವ ಪಾಲ್ಘರ್ ನಿಲ್ದಾಣದ ಬಳಿ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ತನ್ನ ಹಿರಿಯ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾರೆ. ಮೂವರು ಪ್ರಯಾಣಿಕರು ಗಡ್ಡಧಾರಿ ಮುಸ್ಲಿಮರಾಗಿದ್ದರು.
ಇದನ್ನೂ ಓದಿ:ಗುರುಗ್ರಾಮ್‌ನ ಬಾದ್‌ಶಾಹ್‌ಪುರದಲ್ಲಿ ಭುಗಿಲೆದ್ದ ಹಿಂಸಾಚಾರ; 14 ಅಂಗಡಿಗಳು ಧ್ವಂಸ; ಏಳು ಅಂಗಡಿಗಳಿಗೆ ಬೆಂಕಿ
ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋಮವಾರ ನಡೆದ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲು ರೈಲ್ವೆ ಮಂಡಳಿಯು ಐವರು ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ