ಮಹಾರಾಷ್ಟ್ರದಲ್ಲಿ ಮಹಾಮಳೆ ಸುರಿಯುತ್ತಿದೆ. ಎಲ್ಲೆಡೆ ರಸ್ತೆಗಳು ಜಲಾವೃತಗೊಂಡಿವೆ. ಕೊಲ್ಹಾಪುರ, ಲೋನಾವಾಲಾ, ಪುಣೆ ಅಕ್ಷರಶಃ ನೀರಿನಲ್ಲಿ ಮುಳುಗಿವೆ. ಕೊಲ್ಹಾಪುರ, ಲೋನಾವಾಲಾ, ಪುಣೆಗೆ ರೆಡ್ ಅಲರ್ಟ್ ನೀಡಲಾಗಿದ್ದು, ಥಾಣೆ, ರಾಯಗಢ, ಪಾಲ್ಗಢಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಂಬೈನಲ್ಲಿ ಗುರುವಾರ ಹಾಗೂ ಶುಕ್ರವಾರ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಮಧ್ಯ ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಮುಂಬೈನ ಹೊರವಲಯಗಳಾದ ಥಾಣೆ, ಕಲ್ಯಾಣ್ ಮತ್ತು ಪಾಲ್ಘಢನಲ್ಲಿ ಭಾರೀ ಮಳೆಯಾಗಿದೆ. ಕಲ್ಯಾಣ್, ಥಾಣೆ ಮತ್ತು ಮುಲುಂಡ್‌ನ ಹಲವಾರು ಭಾಗಗಳು ಜಲಾವೃತವಾಗಿವೆ.
ಭಾರೀ ಮಳೆಯಿಂದಾಗಿ ಮುಂಬೈಗೆ ಹೋಗುವ ಮತ್ತು ಹೊರಡುವ ವಿಮಾನಗಳ ಮೇಲೆ ಪರಿಣಾಮ ಬೀರಬಹುದು. ನಿಧಾನಗತಿಯ ದಟ್ಟಣೆ ಮತ್ತು ಜಲಾವೃತದ ದೃಷ್ಟಿಯಿಂದ, ವಿಮಾನ ನಿಲ್ದಾಣಗಳನ್ನು ತಲುಪಲು ಸ್ವಲ್ಪ ಮುಂಚಿತವಾಗಿ ಹೊರಡುವುದು ಸೂಕ್ತವಾಗಿದೆ.
ಮಳೆಯಿಂದಾಗಿ ಪುಣೆ ಗ್ರಾಮಾಂತರದ ಅಧರವಾಡಿ ಗ್ರಾಮದಲ್ಲಿ ಕಲ್ಲುಬಂಡೆ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ವೇಳೆ ಅಪಘಾತದಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ. ಈ ನಡುವೆ ಗುರುವಾರ ಮುಂಜಾನೆ ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿದ್ದಾರೆ. ಭಾರೀ ಮಳೆಗೆ ಮುಳುಗಿದ್ದ ತಮ್ಮ ಗಾಡಿಯನ್ನು ತೆಗೆಯಲು ಯತ್ನಿಸುತ್ತಿದ್ದರು.
ಮತ್ತಷ್ಟು ಓದಿ: ಚಿಕ್ಕಮಗಳೂರು ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರಗಳು ಬಿದ್ದು ಸಂಚಾರ ಸ್ಥಗಿತ
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕುಂಡಲಿಕಾ, ಅಂಬಾ, ಸಾವಿತ್ರಿ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದೈನಂದಿನ ಜೀವನದಲ್ಲಿ ಅಸ್ತವ್ಯಸ್ಥಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮತ್ತು ನಾಳೆ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರದವರೆಗೆ ಮಹಾರಾಷ್ಟ್ರದಲ್ಲಿ ಮಳೆಯಾದರೆ, ಗುಜರಾತ್ನಲ್ಲಿ ಮುಂದಿನ ಮೂರು ದಿನ ವರುಣನ ಅರ್ಭಟ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಗುಜರಾತ್ನಲ್ಲೂ ಗುರುವಾರ ಸುರಿದ ಭಾರೀ ಮಳೆಗೆ 8 ಮಂದಿ ಸಾವನ್ನಪ್ಪಿದ್ದು, ಇದುವರೆಗೆ ಮಳೆ ಸಂಬಂಧಿ ಘಟನೆಯಲ್ಲಿ ಸಾವನ್ನಪ್ಪಿದರ ಸಂಖ್ಯೆ 61 ಆಗಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರ ರಕ್ಷಣಾ ಕಾರ್ಯದಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಮುಂದಾಗಿದೆ.
ಮಳೆಯಿಂದಾಗಿ ನೀರಿನ ಮಟ್ಟ ಇನ್ನಷ್ಟು ಹೆಚ್ಚಳವಾಗುತ್ತಿರುವ ಕಾರಣ ನದಿಗೆ ಬಿಡುವ ನೀರಿನ ಪ್ರಮಾಣ 45,000 ಕ್ಯೂಸೆಕ್‌ಗೆ ಹೆಚ್ಚಲಿದೆ. ಇದರಿಂದಾಗಿ ಇನ್ನಷ್ಟು ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದ್ದು, ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುಣೆ ಮಹಾನಗರ ಪಾಲಿಕೆ ಹೇಳಿದೆ.
ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನದಲ್ಲಿ ಜುಲೈ 28ರ ವರೆಗೆ ಭಾರೀ ಮಳೆ ನಿರೀಕ್ಷಿಸಲಾಗಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಉತ್ತಮ ಮಳೆಯಾಗಲಿದ್ದು, ಪಂಜಾಬ್ ಮತ್ತು ಹರಿಯಾಣದಲ್ಲಿ ಜುಲೈ 25ರ ವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ.
ಆಂಧ್ರಪ್ರದೇಶದಲ್ಲಿ ಜುಲೈ 26ರ ವರೆಗೆ ಮಳೆ ಪರಿಸ್ಥಿತಿ ಮುಂದುವರೆದರೆ ಕೇರಳದಲ್ಲಿ ಜುಲೈ 27ರ ವರೆಗೆ ಭಾರೀ ಮಳೆಯಾಗಲಿದೆ. ಇಡಿಶಾದಲ್ಲೂ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಅರುಣಾಚಲ ಪ್ರದೇಶ, ಅಸ್ಸೋಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕೀಂನಲ್ಲೂ ಜುಲೈ 27 ಮತ್ತು 28ರಂದು ಮಳೆ ಸಾಧ್ಯತೆ ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Thu, 25 July 24