Rajkot Airport: ಭಾರೀ ಮಳೆಗೆ ರಾಜ್‌ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊರಭಾಗದ ಮೇಲ್ಛಾವಣಿ ಕುಸಿತ

|

Updated on: Jun 29, 2024 | 2:28 PM

ಶನಿವಾರ ಸುರಿದ ಭಾರೀ ಮಳೆಗೆ ರಾಜ್‌ಕೋಟ್‌ ವಿಮಾನ ನಿಲ್ದಾಣದ ಪ್ರಯಾಣಿಕರ ಪಿಕಪ್‌ ಮತ್ತು ಡ್ರಾಪ್‌ ಪ್ರದೇಶದ ಮೇಲ್ಛಾವಣಿ ಕುಸಿದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾರಿಗೂ ಗಾಯ ಅಥವಾ ಸಾವುನೋವುಗಳ ವರದಿಯಾಗಿಲ್ಲ. ನೈಋತ್ಯ ಮಾನ್ಸೂನ್ ಕಾಲಿಡುತ್ತಿದ್ದಂತೆ ಗುಜರಾತ್‌ನಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ನಿಯೋಜಿಸಲಾಗಿದೆ.

Rajkot Airport: ಭಾರೀ ಮಳೆಗೆ ರಾಜ್‌ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊರಭಾಗದ ಮೇಲ್ಛಾವಣಿ ಕುಸಿತ
ರಾಜ್ ಕೋಟ್
Follow us on

ರಾಜ್​​ಕೋಟ್ ಜೂನ್29:  ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ( Indira Gandhi International Airport )ಟರ್ಮಿನಲ್-1 ಮೇಲ್ಛಾವಣಿ ಕುಸಿದ ಘಟನೆಯ ಒಂದು ದಿನದ ನಂತರ ಶನಿವಾರ ಭಾರೀ ಮಳೆಯ ನಡುವೆ ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದ (Rajkot Airport) ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ  ಮೇಲ್ಛಾವಣಿ ಕುಸಿದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾರಿಗೂ ಗಾಯ ಅಥವಾ ಸಾವುನೋವುಗಳ ವರದಿಯಾಗಿಲ್ಲ.

ಏತನ್ಮಧ್ಯೆ, ನೈಋತ್ಯ ಮಾನ್ಸೂನ್ ಕಾಲಿಡುತ್ತಿದ್ದಂತೆ ಗುಜರಾತ್‌ನಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯ ನಡುವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಏಳು ತಂಡಗಳನ್ನು ಕಚ್, ರಾಜ್‌ಕೋಟ್, ದೇವಭೂಮಿ ದ್ವಾರಕಾ, ಗಿರ್ ಸೋಮನಾಥ್, ಭಾವನಗರ, ನರ್ಮದಾ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

ಶುಕ್ರವಾರ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಛಾವಣಿಯ ಒಂದು ಭಾಗವು ಕುಸಿದು 45 ವರ್ಷದ ಕ್ಯಾಬ್ ಚಾಲಕನ ಸಾವಿಗೀಡಾಗಿದ್ದರು. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡರು.

ಈ ಘಟನೆಯ ನಂತರ ದಿನಕ್ಕೆ ಸುಮಾರು 200 ವಿಮಾನಗಳನ್ನು ನಿರ್ವಹಿಸುವ ಟರ್ಮಿನಲ್ 1 ರಿಂದ ಕಾರ್ಯಾಚರಣೆಯನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿತು. ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (DIAL) ನಿರ್ವಹಿಸುತ್ತಿರುವ ದೆಹಲಿ ವಿಮಾನ ನಿಲ್ದಾಣವು ಟರ್ಮಿನಲ್ 1 ರ ಹಳೆಯ ನಿರ್ಗಮನ ಫೋರ್ಕೋರ್ಟ್‌ನಲ್ಲಿ ಶುಕ್ರವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಭಾಗಶಃ ಕುಸಿದಿದೆ ಎಂದು ತಿಳಿಸಿದೆ. ಕುಸಿತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಭಾರೀ ಮಳೆ ಮತ್ತು ಗಾಳಿಯಿಂದಾಗಿ ಇದು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ಮೃತರ ಕುಟುಂಬಕ್ಕೆ ₹ 20 ಲಕ್ಷ ಮತ್ತು  ಗಾಯಗೊಂಡವರಿಗೆ ತಲಾ ₹ 3 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ರಚನಾತ್ಮಕ ಪ್ರಾಥಮಿಕ ತಪಾಸಣೆಯನ್ನು ಕೈಗೊಳ್ಳಲು ಸಚಿವಾಲಯ ಆದೇಶಿಸಿದೆ.

ಏತನ್ಮಧ್ಯೆ, ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304A (ನಿರ್ಲಕ್ಷ್ಯದಿಂದ ಸಾವು) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯಿದೆಯಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ಮೇಲ್ಛಾವಣಿ ಕುಸಿತದ ತನಿಖೆಗೆ ಸಮಿತಿ ರಚನೆ

ಇದೇ ರೀತಿಯ ಘಟನೆ ಮಧ್ಯಪ್ರದೇಶದ ಜಬಲ್‌ಪುರ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದ್ದು, ಭಾರೀ ಮಳೆಯ ನಡುವೆ ನೀರು ಶೇಖರಣೆಯಾಗಿ ಬಟ್ಟೆಯ ಮೇಲಾವರಣದ ಒಂದು ಭಾಗ ಕುಸಿದು ಕೆಳಗೆ ನಿಂತಿದ್ದ ಕಾರಿಗೆ ಹಾನಿಯಾಗಿದೆ. ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 10 ರಂದು ದುಮ್ನಾ ವಿಮಾನ ನಿಲ್ದಾಣದ ₹ 450 ಕೋಟಿ ವೆಚ್ಚದ ಹೊಸ ಟರ್ಮಿನಲ್ ಕಟ್ಟಡವನ್ನು ವಾಸ್ತವಿಕವಾಗಿ ಉದ್ಘಾಟಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:07 pm, Sat, 29 June 24