ಹೈದರಾಬಾದ್​​ನಲ್ಲಿ ಭಾರೀ ಮಳೆಗೆ ರಸ್ತೆಗಳು ಜಲಾವೃತ; ರಬ್ಬರ್ ಬೋಟ್ ಬಳಸಿ ಓಡಾಡಿದ ಜನರು

| Updated By: ರಶ್ಮಿ ಕಲ್ಲಕಟ್ಟ

Updated on: May 04, 2022 | 5:28 PM

ಅಂಬರ್‌ಪೇಟ್, ಕುಕಟ್‌ಪಲ್ಲಿ, ಮಲ್ಕಾಜ್‌ಗಿರಿ ಮತ್ತು ಮುಶೀರಾಬಾದ್ ಮತ್ತು ಹಳೆಯ ನಗರ ಸೇರಿದಂತೆ ಹೈದರಾಬಾದ್‌ನ ಹಲವಾರು ಪ್ರದೇಶಗಳಲ್ಲಿ ಜಲಾವೃತವಾಗಿರುವುದು ಕಂಡು ಬಂದಿದೆ.

ಹೈದರಾಬಾದ್​​ನಲ್ಲಿ ಭಾರೀ ಮಳೆಗೆ ರಸ್ತೆಗಳು ಜಲಾವೃತ; ರಬ್ಬರ್ ಬೋಟ್ ಬಳಸಿ ಓಡಾಡಿದ ಜನರು
ರಬ್ಬರ್ ಬೋಟ್​ನಲ್ಲಿ ನಾಗರಿಕರು
Follow us on

ಹೈದರಾಬಾದ್: ಬುಧವಾರ ಮುಂಜಾನೆ ಹೈದರಾಬಾದ್ (Hyderabad) ಮತ್ತು ತೆಲಂಗಾಣದ (Telangana ) ಇತರ ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತವಾಗಿವೆ. ಭಾರೀ ಮಳೆಯ ನಂತರ ರಾಜ್ಯ ರಾಜಧಾನಿಯ ಹಲವಾರು ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ಹೈದರಾಬಾದ್ ಸ್ಥಳೀಯರು ಗಾಳಿ ತುಂಬಿಸುವ ರಬ್ಬರ್ ಬೋಟ್​​ಗಳನ್ನು ಸಂಚಾರಕ್ಕೆ ಬಳಸಿಕೊಂಡಿದ್ದಾರೆ.  ಅಂಬರ್‌ಪೇಟ್, ಕುಕಟ್‌ಪಲ್ಲಿ, ಮಲ್ಕಾಜ್‌ಗಿರಿ ಮತ್ತು ಮುಶೀರಾಬಾದ್ ಮತ್ತು ಹಳೆಯ ನಗರ ಸೇರಿದಂತೆ ಹೈದರಾಬಾದ್‌ನ ಹಲವಾರು ಪ್ರದೇಶಗಳಲ್ಲಿ ಜಲಾವೃತವಾಗಿರುವುದು ಕಂಡು ಬಂದಿದೆ ಎಂದು ಪಿಟಿಐ ವರದಿ ತಿಳಿಸಿದೆ. ಕೆಲವೆಡೆ ಮರಗಳು ಉರುಳಿ ಬಿದ್ದಿವೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಯ ವಿಪತ್ತು ಪ್ರತಿಕ್ರಿಯೆ ಪಡೆ (DRF) ಸಿಬ್ಬಂದಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೂಡ ಮಳೆಯಿಂದ ಜಲಾವೃತವಾಗಿರುವ ಪ್ರದೇಶಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. “ಈ ಪ್ರದೇಶಗಳು ಜಲಾವೃತವಾಗಿರುವುದರಿಂದ ಯಾತ್ರಾಬ್ ನಗರ (ಧೋಬಿ ಘಾಟ್), ಓವೈಸಿ ಶಾಲೆ ಮತ್ತು ಮೆಕ್ಕಾ ಕಾಲೋನಿ ಕಲಾಪಥರ್ ಹಿಂಭಾಗದ ತಾಲಾಬ್ ಕಟ್ಟಾ ಪ್ರದೇಶಕ್ಕೆ ತುರ್ತು ತಂಡಗಳನ್ನು ಕಳುಹಿಸಲು ನಾನು ಅಧಿಕಾರಿಗಳ ಜತೆ ಮಾತನಾಡಿದ್ದೇನೆ ಎಂದು ಎಐಎಂಐಎಂ ಅಧ್ಯಕ್ಷರು ಟ್ವಿಟರ್‌ನಲ್ಲಿ ಬರೆದಿದ್ದಾರೆ.


ಮಂಚೇರಿಯಲ್, ಜಗ್ತಿಯಾಲ್, ಯಾದಾದ್ರಿ-ಭೋಂಗಿರ್, ಮೇಡ್ಚಲ್-ಮಲ್ಕಾಜ್‌ಗಿರಿ ಮತ್ತು ಇತರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ನಿರಂತರ ಮಳೆಯಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಮಂಚೇರಿಯಲ್ ಜಿಲ್ಲೆಯ ಲುಕ್ಸೆಟ್ಟಿಪೇಟೆಯಲ್ಲಿ ಒಂಬತ್ತು ಸೆಂ.ಮೀ ಮಳೆಯಾಗಿದ್ದು, ಜಗ್ತಿಯಾಲ್ ಜಿಲ್ಲೆಯ ಧರ್ಮಪುರಿಯಲ್ಲಿ ಎಂಟು ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಬೇಸಿಗೆಯಲ್ಲಿ ತೆಲಂಗಾಣದಲ್ಲಿ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲಿರುತ್ತದೆ.


ಜಗ್ತಿಯಾಲ್, ನಲ್ಗೊಂಡ, ಸಿದ್ದಿಪೇಟೆ ಮತ್ತು ಇತರ ಜಿಲ್ಲೆಗಳಲ್ಲಿ ಕೊಯ್ಲು ಸಿದ್ಧವಾದ ಭತ್ತ ನೀರಿನಲ್ಲಿ ಮುಳುಗಿದ್ದು ರೈತರಿಗೆ ನಷ್ಟವುಂಟು ಮಾಡಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ