ಪ್ರಧಾನಿ ಮೋದಿಯವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಒಡಿಶಾದ ಪಟ್ಟಚಿತ್ರ ತೋರಿಸಿದ ಡೆನ್ಮಾರ್ಕ್​ ಪ್ರಧಾನಿ

ಭಾರತ-ಡೆನ್ಮಾರ್ಕ್​ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಮೆಟ್ಟೆ ಅವರು ಹಲವು ವಿಚಾರಗಳ ಬಗ್ಗೆ ಆಳವಾದ ಚರ್ಚೆ ನಡೆಸಿದ್ದಾರೆ. ಮಾತುಕತೆಯ ಬಳಿಕ ಎರಡೂ ದೇಶಗಳು ದಿಗ್ಗಜರು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 

ಪ್ರಧಾನಿ ಮೋದಿಯವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಒಡಿಶಾದ ಪಟ್ಟಚಿತ್ರ ತೋರಿಸಿದ ಡೆನ್ಮಾರ್ಕ್​ ಪ್ರಧಾನಿ
ನರೇಂದ್ರ ಮೋದಿಯವರನ್ನು ತಮ್ಮ ಮನೆಗೆ ಕರೆದುಕೊಂಡು ಹೋದ ಡ್ಯಾನಿಶ್ ಪ್ರಧಾನಿ
Follow us
| Updated By: Lakshmi Hegde

Updated on: May 04, 2022 | 4:01 PM

ಕೋಪನ್​​ಹ್ಯಾಗನ್​: ಸದ್ಯ ಡೆನ್ಮಾರ್ಕ್​​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ವತಃ ಮೆಟ್ಟೆ ಫ್ರೆಡೆರಿಕ್ಸೆನ್​ ಅವರೇ ಪ್ರಧಾನಿಯವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರ ಮನೆಯ ಗೋಡೆಯ ಮೇಲೆ ಇದ್ದ ಒಡಿಶಾದ ಸಾಂಪ್ರದಾಯಿಕ ವರ್ಣಚಿತ್ರವಾದ ಪಟ್ಟಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ತೋರಿಸಿದ್ದಾರೆ. ಅಂದಹಾಗೇ, ಈ ಪಟ್ಟಚಿತ್ರವನ್ನು ಹಿಂದೊಮ್ಮೆ ಮೆಟ್ಟೆ ಫ್ರೆಡೆರಿಕ್ಸೆನ್ ಭಾರತಕ್ಕೆ ಬಂದಿದ್ದಾಗ ಪ್ರಧಾನಿ ಮೋದಿಯವರೇ ಉಡುಗೊರೆಯಾಗಿ ಕೊಟ್ಟಿದ್ದರು.  ಈ ಬಗ್ಗೆ ಕೇಂದ್ರ ಶಿಕ್ಷಣ ಇಲಾಖೆ ಸಚಿವ ಧರ್ಮೇಂದ್ರ ಪ್ರಧಾನ್,  ಟ್ವೀಟ್ ಮಾಡಿ ಕೆಲವು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.  ಪ್ರಧಾನಿಯವರು ನೀಡಿದ್ದ ಉಡುಗೊರೆಯನ್ನು ಜತನದಿಂದ ಕಾಪಾಡಿಕೊಂಡು, ಈಗ ಅವರನ್ನು ಮನೆಗೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಇದೊಂದು ತುಂಬ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.

ನರೇಂದ್ರ ಮೋದಿಯವರು ಮೂರು ದಿನಗಳ ಯುರೋಪ್ ದೇಶಗಳ ಪ್ರವಾಸದಲ್ಲಿದ್ದಾರೆ. ಮೊದಲು ಜರ್ಮನಿಗೆ ಭೇಟಿ ಕೊಟ್ಟಿದ್ದ ಅವರು ಅಲ್ಲಿಂದ ಡೆನ್ಮಾರ್ಕ್​ಗೆ ಬಂದಿದ್ದಾರೆ. ಭಾರತ-ಡೆನ್ಮಾರ್ಕ್​ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಮೆಟ್ಟೆ ಅವರು ಹಲವು ವಿಚಾರಗಳ ಬಗ್ಗೆ ಆಳವಾದ ಚರ್ಚೆ ನಡೆಸಿದ್ದಾರೆ. ಮಾತುಕತೆಯ ಬಳಿಕ ಎರಡೂ ದೇಶಗಳು ದಿಗ್ಗಜರು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.  ಡೆನ್ಮಾರ್ಕ್​​ಗೆ ಬಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ಸಿಕ್ಕಿತು.

ಹಾಗೇ, ಭಾರತೀಯ ಮೂಲದವರೂ ನರೇಂದ್ರ ಮೋದಿಯವರನ್ನು ಡೋಲು, ಡ್ರಮ್​ ವಾದನಗಳ ಮೂಲಕ ಸ್ವಾಗತಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮೋದಿ, ನೀವೆಲ್ಲ ಡೆನ್ಮಾರ್ಕ್​​ನಲ್ಲಿರುವ ನಿಮ್ಮ ಸ್ನೇಹಿತರಿಗೆ ಭಾರತಕ್ಕೆ ಭೇಟಿ ಕೊಡುವಂತೆ ಹೇಳಬೇಕು ಎಂದು ಹೇಳಿದ್ದಾರೆ. ನಾವೆಲ್ಲರೂ ಒಟ್ಟಾಗಿ ಈ ಭೂಮಿಯ ಮೇಲಿನ ಸಮಸ್ಯೆಗಳಿಗೆ  ಪರಿಹಾರ ಕಂಡುಕೊಳ್ಳಬೇಕು. ಪರಿಸರಕ್ಕೆ ಪೂರಕವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಬಳಕೆ ಮಾಡಿ-ಹಾಗೇ ಬಿಸಾಡುವ ನಮ್ಮ ಕ್ರಮ ಈ ಭೂಮಿಗೆ ಮಾರಕವಾಗುತ್ತದೆ. ಎಷ್ಟು ಅಗತ್ಯವಿದೆಯೋ ಅಷ್ಟನ್ನೇ ಬಳಸುವ ಕ್ರಮವನ್ನು ರೂಢಿಸಿಕೊಳ್ಳಬೇಕು. ಜೇಬು ದೊಡ್ಡದಿದೆ ಎಂದು ಅನಗತ್ಯವಾಗಿ ತುಂಬಿಸಿಕೊಳ್ಳಬಾರದು ಎಂದು ಹೇಳಿದರು. ಈ ಮೂಲಕ ಏನನ್ನೂ ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ