ಈಗಾಗಲೇ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳು ಭಯಂಕರ ಮಳೆಗೆ ತತ್ತರಿಸಿವೆ. ಆದರೆ ಮಳೆ ನಿಲ್ಲುವ ಲಕ್ಷಣಗಳಂತೂ ಕಾಣುತ್ತಿಲ್ಲ. ಗುಜರಾತ್ನಲ್ಲಿ ಡಿ.1 ಮತ್ತು 2ರಂದು ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (IMD) ತಿಳಿಸಿದೆ. ಹಾಗೇ, ಗುಜರಾತ್ನ ಆನಂದ್, ಬರೂಚ್, ನವ್ಸರಿ, ವಲ್ಸೇದ್, ಅಮ್ರೇಲಿ ಮತ್ತು ಭವನಗರ ಜಿಲ್ಲೆಗಳಲ್ಲಿ ಡಿಸೆಂಬರ್ 1ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಡಿಸೆಂಬರ್ 2ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಸಕ್ರಿಯ ಪಾಶ್ಚಿಮಾತ್ಯ ಅಡಚಣೆಯಿಂದಾಗಿ ಗುಜರಾತ್ನಲ್ಲಿ ನವೆಂಬರ್ 30ರಿಂದ ಮಳೆ ಪ್ರಾರಂಭವಾಗಲಿದೆ. ನವೆಂಬರ್ 30ರ ಮಧ್ಯರಾತ್ರಿಯಿಂದಲೇ ವಾಯುವ್ಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಮಧ್ಯ ಭಾರತದೆಲ್ಲೆಡೆ ಮಳೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಗುಜರಾತ್ನ ಉತ್ತರ ಮತ್ತು ದಕ್ಷಿಣ ಕರಾವಳಿ ತೀರದಲ್ಲಿ ನವೆಂಬರ್ 30ರಿಂದ ಡಿಸೆಂಬರ್ 2ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಈ ಅಕಾಲಿಕ ಮಳೆಯಿಂದ ರೈತರ ಬೆಳೆಗಳಿಗೆ ತೊಂದರೆಯಾಗಲಿದೆ ಮತ್ತು ಕಟಾವು ಮಾಡಲೂ ಕಷ್ಟವಾಗಲಿದೆ ಎಂದು ಹೇಳಲಾಗಿದೆ.
ನವೆಂಬರ್ 30ರಂದು ಅಹ್ಮದಾಬಾದ್, ಆನಂದ್, ಖೇಡಾ, ಪಂಚಮಹಲ್, ರಾಜ್ಕೋಟ್ ಸೇರಿ ದಕ್ಷಿಣ ಗುಜರಾತ್ನ ಎಲ್ಲ ಜಿಲ್ಲೆಗಳಲ್ಲೂ ಗುಡುಗು-ಮಿಂಚು ಸಹಿತ ಮಧ್ಯಮ ಪ್ರಮಾಣದ ಮಳೆಯಾಗುವುದು. ಈ ವೇಳೆ ಗಂಟೆಗೆ 40-60 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಐಎಂಡಿ ಹೇಳಿದೆ. ಇನ್ನು ಡಿಸೆಂಬರ್ 1ರಂದು ಆನಂದ್, ಬರೂಚ್, ನವ್ಸರಿ, ವಲ್ಸಾದ್ ಸೂರತ್, ಡಂಗ್ಸ್, ಅಮ್ರೇಲಿ, ಜುನಾಗಢ್, ಗಿರ್, ಸೋಮ್ನಾಥ್, ಬೋಟಾಡ್ ಮತ್ತು ಭವನಗರ, ಡಾಹೋಡ್, ಛೋಟಾಉದೇಪುರ್, ಪಂಚಮಹಲ್ಗಳಲ್ಲಿ ಭರ್ಜರಿ ಮಳೆಯಾಗಲಿದೆ. ಹಾಗೇ, ಡಿಸೆಂಬರ್ 2ರಂದು ಬನಸ್ಕಾಂತ, ಸಬರಕಾಂತ, ಅರಾವಳಿ, ಮಹಿಸಾಗರ, ಡಾಂಗ್ಸ್ ಮತ್ತು ತಾಪಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಪತ್ತೆಯಾಗಿದೆಯಾ ಒಮಿಕ್ರಾನ್ ಸೋಂಕು?- ಸದ್ಯ ಎರಡು ರಾಜ್ಯಗಳ ಮೇಲೆ ಹೆಚ್ಚಿನ ನಿಗಾ !
Published On - 4:02 pm, Mon, 29 November 21