ದೆಹಲಿ: ಕನಿಷ್ಠ 15 ಕಿ.ಮೀ ಉದ್ದದ ಟ್ರಾಫಿಕ್ ಜಾಮ್ (Traffic Jam), ಹೋಟೆಲ್ ಕೊಠಡಿಗಳೂ ಲಭ್ಯವಿಲ್ಲ. ಇನ್ನೆಷ್ಟು ಹೊತ್ತು ಎಂದು ಕಾಯುತ್ತಿರುವವರಲ್ಲಿ ಸುಮಾರು 200 ಜನರಲ್ಲಿ ಹೆಚ್ಚಿನವರು ಪ್ರವಾಸಿಗರು. ಹಿಮಾಚಲ ಪ್ರದೇಶದ ಮಂಡಿ ಮತ್ತು ಕುಲು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಲಾಕ್ ನಲ್ಲಿ ಸಿಲುಕಿಕೊಂಡವರಿವರು. ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದ (Himachal Landslide)ನಂತರ ನಿನ್ನೆ (ಭಾನುವಾರ) ಸಂಜೆಯಿಂದ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಅಧಿಕಾರಿಗಳ ಪ್ರಕಾರ, ರಸ್ತೆಯನ್ನು ತಡೆಯುವ ಭಾರೀ ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಸುಮಾರು ಏಳು-ಎಂಟು ಗಂಟೆಗಳ ನಂತರ ಮಾತ್ರ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಹೆದ್ದಾರಿ ಬ್ಲಾಕ್ ಆದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ.
ಬೃಹತ್ ರಸ್ತೆ ತಡೆಯಿಂದಾಗಿ ಸಿಲುಕಿರುವ ಪ್ರವಾಸಿಗರಾದ ಸೊಹೈಲ್ ಯೂಸುಫ್ ಮತ್ತು ಅಜಾಜ್ ಹಸನ್ ತಾವು ದೆಹಲಿಯಿಂದ ಬಂದಿದ್ದು, ಭುಂತರ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಬ್ಲಾಕ್ ನಲ್ಲಿ ಸಿಲುಕಿದ್ದೇನವೆ. ಮಂಡಿ ಮತ್ತು ಸುಂದರನಗರದ ನಡುವೆ ಹಲವಾರು ಭೂಕುಸಿತಗಳು ಸಂಭವಿಸಿವೆ. ರಾತ್ರಿ 10 ಗಂಟೆಗೆ ಪೊಲೀಸರು ನಮ್ಮನ್ನು ತಡೆದು ಹಿಂತಿರುಗುವಂತೆ ಹೇಳಿದರು. ಇಲ್ಲಿ ಟ್ರಾಫಿಕ್ ಜಾಮ್ ಕನಿಷ್ಠ 15-ಕಿಮೀ ಉದ್ದವಿದೆ ಎಂದು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ದಿಢೀರನೆ ಎದುರಾದ ಈ ಸಂದರ್ಭದಿಂದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರಿಯರು, ಮಕ್ಕಳು ಇಲ್ಲಿದ್ದಾರೆ. ಕೆಲವರು ಬಸ್ ನಲ್ಲಿದ್ದಾರೆ ಕೆಲವರು ಢಾಬಾಗಳಲ್ಲಿ ಕಾಯುತ್ತಿದ್ದಾರೆ, ಯಾರಿಗೂ ಹೋಟೆಲ್ ಕೋಣೆ ಸಿಗಲಿಲ್ಲ.ಅವರೆಲ್ಲರಿಗೂ ಮಕ್ಕಳದ್ದೇ ಚಿಂತೆ ಎಂದಿದ್ದಾರೆ ಹಸನ್.
#WATCH | Himachal Pradesh: Operation underway to clear landslide debris on Chandigarh-Manali highway near 7 Mile in Mandi. https://t.co/OcuKQCVhcD pic.twitter.com/1m92KxiSOh
— ANI (@ANI) June 26, 2023
ಈ ಪ್ರದೇಶಗಳಲ್ಲಿ ಪ್ರವಾಸಿ ರೆಸಾರ್ಟ್‌ಗಳಿವೆ, ಆದರೆ ಅವುಗಳನ್ನು ಸಂಪರ್ಕಿಸಲು ಪರ್ಯಾಯ ರಸ್ತೆ ಇಲ್ಲ.ನಿನ್ನೆ ಸಂಜೆ 5 ಗಂಟೆಯಿಂದ ಹೆದ್ದಾರಿಯನ್ನು ಮುಚ್ಚಲಾಗಿದೆ, ಆದರೆ ಇನ್ನೂ ರಸ್ತೆಯನ್ನು ತೆರವುಗೊಳಿಸಲಾಗಿಲ್ಲ. ಟ್ರಾಫಿಕ್ ಯಾವಾಗ ತೆರವು ಆಗುತ್ತದೆ ಎಂಬುದೂ ಗೊತ್ತಿಲ್ಲ. ಮುಂದೆ ಹೋಗಬೇಕೇ ಅಥವಾ ಹಿಂತಿರುಗಬೇಕೇ ಎಂದು ನಮಗೆ ತಿಳಿದಿಲ್ಲ. ಈ ಪರಿಸ್ಥಿತಿಯ ಬಗ್ಗೆ ಪೊಲೀಸರಿಂದ ನಮಗೆ ಯಾವುದೇ ಪೂರ್ವ ಮಾಹಿತಿ ಬಂದಿಲ್ಲ.
ಈ ರೀತಿ ಬ್ಲಾಕ್ ಮಾಡುವ ಮುನ್ನ ಜನರಿಗೆ ತಿಳಿಸುವ ವ್ಯವಸ್ಥೆ ಇರಬೇಕಿತ್ತು ಎಂದು ಹಸನ್ ಹೇಳಿದ್ದಾರೆ. ನಾವು ನಿನ್ನೆ ಮಧ್ಯಾಹ್ನ ಹೊರಟು ರಾತ್ರಿ 10 ಗಂಟೆಯ ಸುಮಾರಿಗೆ ಇಲ್ಲಿಗೆ ತಲುಪಿದೆವು. ಹಾಗಾಗಿ ನಾವು ಭೂಕುಸಿತದ ನಂತರ ಸುಮಾರು 5 ಗಂಟೆಗಳ ಸಂಚರಿಸಿದ್ದೇವೆ ಈ ರಸ್ತೆ ತಡೆ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ನಮ್ಮನ್ನು ಇಲ್ಲಿ ನಿಲ್ಲಿಸಲಾಗಿದೆ. ಆಗಲೇ 6 ಕಿ.ಮೀ ಟ್ರಾಫಿಕ್ ಜಾಮ್ ಆಗಿದೆ ಎಂದಿದ್ದಾರೆ ಅವರು.
ಹಿಮಾಚಲ ಪ್ರದೇಶದಲ್ಲಿ ಸಿಕ್ಕಿಬಿದ್ದ ಮತ್ತೊಬ್ಬ ಪ್ರವಾಸಿ ಆದೇಶ್ ಕಾತ್ಯಾಯನ್ ಕುಲುಗೆ ತೆರಳುತ್ತಿದ್ದಾಗ ಭೂಕುಸಿತ ಸಂಭವಿಸಿ ರಸ್ತೆ ತಡೆಯಾಗಿದೆ ಎಂದಿದ್ದಾರೆ. ನಾವು ಮಂಡಿಗೆ ಹಿಂತಿರುಗಬೇಕಾಗಿತ್ತು, ನಾವು ರಾತ್ರಿಯನ್ನು ಅಲ್ಲಿಯೇ ಕಳೆದೆವು. ಈಗ ನಾವು ಮತ್ತೆ ಕುಲು ದಾರಿಯಲ್ಲಿದ್ದೇವೆ ಎಂದು ಅವರು ಹೇಳಿದರು. ಅವರು ಸಾಗಿದ ಮಾರ್ಗದಲ್ಲಿ ಕನಿಷ್ಠ 500 ಕಾರುಗಳು ಸಿಲುಕಿಕೊಂಡಿವೆ. ಬಹಳಷ್ಟು ಜನರು ರಸ್ತೆಯಲ್ಲೇ ರಾತ್ರಿ ಕಳೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಬಿಹಾರ: ಸಿಗರೇಟ್ ಸೇದಿದ್ದಕ್ಕೆ ಬೆಲ್ಟ್ನಿಂದ ಹೊಡೆದ ಶಾಲಾ ಶಿಕ್ಷಕ, 10ನೇ ತರಗತಿ ವಿದ್ಯಾರ್ಥಿ ಸಾವು
ಮುಂದಿನ ಎರಡು ದಿನಗಳಲ್ಲಿ ಹಿಮಾಚಲದಲ್ಲಿ ಹೆಚ್ಚಿನ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಬಗ್ಗೆ ಸ್ಥಳೀಯ ಹವಾಮಾನ ಕಚೇರಿ ಎಚ್ಚರಿಕೆ ನೀಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Mon, 26 June 23