Landslide: ಹಿಮಾಚಲ ಪ್ರದೇಶದ ಭೂಕುಸಿತದ ಶಾಕಿಂಗ್ ವಿಡಿಯೋ ವೈರಲ್; ಉದಯ್​ಪುರದಲ್ಲಿ ಸಿಲುಕಿದ 175 ಪ್ರಯಾಣಿಕರು

| Updated By: ಸುಷ್ಮಾ ಚಕ್ರೆ

Updated on: Jul 30, 2021 | 2:06 PM

Himachal Pradesh Landslide: ಹಿಮಾಚಲ ಪ್ರದೇಶದ ಸಿರ್​ಮೌರ್ ಜಿಲ್ಲೆಯ ಶಿಲಾಯ್​ ಪ್ರದೇಶದ ಕಲಿ ಖಾನ್ ಏರಿಯಾದಲ್ಲಿ ಇಂದು ಬೆಳಗ್ಗೆ ಭಾರೀ ಭೂಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Landslide: ಹಿಮಾಚಲ ಪ್ರದೇಶದ ಭೂಕುಸಿತದ ಶಾಕಿಂಗ್ ವಿಡಿಯೋ ವೈರಲ್; ಉದಯ್​ಪುರದಲ್ಲಿ ಸಿಲುಕಿದ 175 ಪ್ರಯಾಣಿಕರು
ಹಿಮಾಚಲ ಪ್ರದೇಶದಲ್ಲಿ ಭೂಕುಸಿತ
Follow us on

ಹಿಮಾಚಲ ಪ್ರದೇಶ: ಭಾರತದ ಪ್ರಮುಖ ಪ್ರವಾಸಿ ಸ್ಥಳಗಳಿರುವ ಹಿಮಾಚಲ ಪ್ರದೇಶದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇಂದು ಕೂಡ ಮಳೆ ಮುಂದುವರೆದಿದ್ದು, ಹಲವೆಡೆ ಭಾರೀ ಭೂಕುಸಿತ ಸಂಭವಿಸಿದೆ. ಸಿರ್​ಮೌರ್ ಜಿಲ್ಲೆಯ ಶಿಲಾಯ್​ ಪ್ರದೇಶದ ಕಲಿ ಖಾನ್ ಏರಿಯಾದಲ್ಲಿ ಇಂದು ಬೆಳಗ್ಗೆ ಭಾರೀ ಭೂಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಉದಯ್​ಪುರದಲ್ಲೂ ಭೂಕುಸಿತವಾಗಿದ್ದು, ಲಾಹೂಲಾಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ಪ್ರವಾಸಕ್ಕೆ ಬಂದಿದ್ದ 175 ಪ್ರವಾಸಿಗರು ಉದಯ್​ಪುರದಲ್ಲಿ ಸಿಲುಕಿಕೊಂಡಿದ್ದಾರೆ.

ಭಾರೀ ಪ್ರವಾಹ ಮತ್ತು ಭೂಕುಸಿತದಿಂದ ಉದಯ್​ಪುರದಲ್ಲಿ ಸಿಲುಕಿರುವ 175 ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲು ಪ್ರಯತ್ನಿಸಲಾಯಿತು. ಆದರೆ, ಪ್ರತಿಕೂಲ ಹವಾಮಾನದಿಂದ ಈ ಕಾರ್ಯಾಚರಣೆಯೂ ಸಾಧ್ಯವಾಗಿಲ್ಲ. ಕಳೆದ ಮಂಗಳವಾರ ರಾತ್ರಿ ಇದೇ ಪ್ರದೇಶದ ತೋಜಿಂಗ್ ನುಲ್ಲಾಹ್​ನಲ್ಲಿ ಉಂಟಾದ ಭಾರೀ ಪ್ರವಾಹದಲ್ಲಿ 12 ಜನರು ಕೊಚ್ಚಿ ಹೋಗಿದ್ದರು. ಅವರಲ್ಲಿ ಇಬ್ಬರನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗಿತ್ತು. ಉಳಿದ 7 ಜನರ ಶವಗಳನ್ನು ಮಾರನೇ ದಿನ ಹೊರಗೆ ತೆಗೆಯಲಾಗಿತ್ತು. ಇನ್ನೂ ಮೂವರ ಶವಗಳು ಕೂಡ ಸಿಕ್ಕಿಲ್ಲ.

ಪವೋಂಟಾ- ಸಾಹಿಬ್ ಶಿಲ್ಲೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 70ರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಭೂಕುಸಿತದಿಂದ ಹೈವೇಯಲ್ಲಿ 100 ಮೀಟರ್ ಅಗಲದ ಕಂದಕ ಉಂಟಾಗಿದೆ. ಹೀಗಾಗಿ, ಎರಡೂ ಭಾಗದವರು ಮುಂದೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿಗೆ ಪರ್ಯಾಯ ಮಾರ್ಗವೂ ಇಲ್ಲದ ಕಾರಣ ವಾಹನ ಸವಾರರು, ಪ್ರವಾಸಿಗರು ಪರದಾಡುವಂತಾಗಿದೆ.

ಇದಷ್ಟೇ ಅಲ್ಲದೆ, ಚಂಡೀಗಢ- ಮನಾಲಿ ಹೆದ್ದಾರಿಯೂ ಬಂದ್ ಆಗಿದೆ. ಇಲ್ಲಿನ ಪಂಡೋಹ್ ಬಳಿ 7 ಮೀಟರ್ ಉದ್ದಕ್ಕೂ ಭೂಕುಸಿತ ಉಂಟಾಗಿದೆ. ಹೀಗಾಗಿ, ತುರ್ತು ವಾಹನಗಳಿಗೆ ಮಾತ್ರ ಸಿಂಗಲ್ ಲೇನ್​ನಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ, ಹಿಮಾಚಲ ಪ್ರದೇಶದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಭೂಕುಸಿತ ಮತ್ತು ಪ್ರವಾಹದಿಂದ ಸಂಚಾರ ಅಸ್ತವ್ಯಸ್ತವಾಗಿದೆ.

ಆಗಸ್ಟ್​ 4ರವರೆಗೂ ಹಿಮಾಚಲ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶಿಮ್ಲಾಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Delhi Rains: ದೆಹಲಿಯಲ್ಲಿ ಹೆಚ್ಚಿದ ಮಳೆಯ ಆರ್ಭಟ; ನೀರು ತುಂಬಿದ ಬಸ್​ನಲ್ಲೇ ಜನರ ಸಂಚಾರ

Landslide in Himachal Pradesh ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ, ಮುರಿದು ಬಿತ್ತು ಸೇತುವೆ: 9 ಪ್ರವಾಸಿಗರು ಸಾವು

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರವಾಹ; 16 ಮಂದಿ ಸಾವು, 40ಕ್ಕೂ ಹೆಚ್ಚು ಜನ ನಾಪತ್ತೆ

(Himachal Pradesh landslides in Sirmaur District NH 707 Closed 175 tourists stranded in Lahaul-Spiti Udaipur)

Published On - 2:01 pm, Fri, 30 July 21