ಹಿಮಾಚಲ ಪ್ರದೇಶ(Himachal Pradesh)ದ ಸಚಿವ ಸ್ಥಾನದಿಂದ ಕೆಳಗಿಳಿದು ಪಕ್ಷದೊಳಗಿನ ಅಸಮಾಧಾನದ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್(Vikramaditya Singh), ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಿ ಅನರ್ಹಗೊಂಡ ಆರು ಬಂಡಾಯ ಶಾಸಕರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರ ಸೋಲಿಗೆ ಅಡ್ಡ ಮತದಾನ ಮಾಡಿದ ಬಂಡಾಯ ಶಾಸಕರನ್ನು ಗುರುವಾರ ಅನರ್ಹಗೊಳಿಸಲಾಗಿದೆ. ಇದೀಗ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ವಿಕ್ರಮಾದಿತ್ಯ ಸಿಂಗ್ ಅವರ ತಾಯಿ ಪ್ರತಿಭಾ ಸಿಂಗ್ ಅವರು ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬೇಗ ಬಿಕ್ಕಟ್ಟು ಮುಗಿಯಲಿದೆ ಎಂದಿದ್ದಾರೆ.
ಕಾಂಗ್ರೆಸ್‌ನ ಕೇಂದ್ರ ವೀಕ್ಷಕರಾದ ಡಿಕೆ ಶಿವಕುಮಾರ್, ಭೂಪಿಂದರ್ ಸಿಂಗ್ ಹೂಡಾ ಮತ್ತು ಭೂಪೇಶ್ ಬಾಘೇಲ್ ಅವರು ಪಕ್ಷದ ಶಾಸಕರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ನಂತರ ಎಲ್ಲಾ ಭಿನ್ನಾಭಿಪ್ರಾಯಗಳನ್ನು ನಿವಾರಿಸಲಾಗಿದೆ ಮತ್ತು ಸುಖವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಪರ ಅಡ್ಡ ಮತದಾನ ಮಾಡಿದ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಇವರಲ್ಲಿ ಇಂದರ್ ದತ್ ಲಖನ್‌ಪಾಲ್, ರವಿ ಠಾಕೂರ್, ಚೆತನ್ಯ ಶರ್ಮಾ, ದೇವಿಂದರ್ ಕುಮಾರ್ ಭೂಟೂ, ರಾಜಿಂದರ್ ರಾಣಾ ಮತ್ತು ಸುಧೀರ್ ಶರ್ಮಾ ಸೇರಿದ್ದಾರೆ. ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಅವರನ್ನು ಅನರ್ಹಗೊಳಿಸಿದ್ದಾರೆ.
ಮತ್ತಷ್ಟು ಓದಿ: ‘ಕೆಲವು ವೈಫಲ್ಯ’ವನ್ನು ಸಿಎಂ ಸುಖು ಒಪ್ಪಿಕೊಂಡಿದ್ದಾರೆ, ಹಿಮಾಚಲ ಕಾಂಗ್ರೆಸ್ ಬಿಕ್ಕಟ್ಟು ಮುಗಿದಿದೆ: ಡಿಕೆ ಶಿವಕುಮಾರ್
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಕೇಂದ್ರ ವೀಕ್ಷಕ ಮತ್ತು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರ ಸೋಲಿನ ಹೊಣೆಯನ್ನು ಸುಖವಿಂದರ್ ಸಿಂಗ್ ಸುಖು ಅವರು ವಹಿಸಿಕೊಂಡಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಮೂವರು ಸ್ವತಂತ್ರ ಶಾಸಕರು ಹರಿಯಾಣದ ಪಂಚಕುಲದಲ್ಲಿರುವ ಅತಿಥಿ ಗೃಹದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಬಹುಮತ ಹೊಂದಿದ್ದರೂ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಆಘಾತಕಾರಿ ಸೋಲು ಕಂಡಿದೆ. ಬಿಜೆಪಿಯ ಹರ್ಷ್ ಮಹಾಜನ್ ಅವರು ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವರನ್ನು ಸೋಲಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ