Narendra Modi: ಕೊಟ್ಟ ಮಾತು ಉಳಿಸಿಕೊಂಡ ಮೋದಿ; ಸಿಂದ್ರಿ ರಸಗೊಬ್ಬರ ಘಟಕಕ್ಕೆ ಮರುಜೀವ; ಇಂದು ದೇಶಕ್ಕೆ ಸಮರ್ಪಣೆ
Revival of Sindri Fertilizer Factory: ಜಾರ್ಖಂಡ್ನ ಧನಬಾದ್ನ ಸಿಂದ್ರಿಯಲ್ಲಿ 2002ರಿಂದ ಸ್ಥಗಿತಗೊಂಡಿದ್ದ ರಸಗೊಬ್ಬರ ಫ್ಯಾಕ್ಟರಿ ಮರುಜೀವ ಪಡೆದಿದ್ದು, ಪಿಎಂ ಮೋದಿ ಇಂದು ಅದನ್ನು ದೇಶಕ್ಕೆ ಸಮರ್ಪಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪುನಶ್ಚೇತನಗೊಂಡ ಮೂರನೇ ರಸಗೊಬ್ಬರ ಘಟಕ ಇದು. ಗೋರಖಪುರ್ ಮತ್ತು ರಾಮಗುಂಡಂನಲ್ಲಿ ಸ್ಥಗಿತಗೊಂಡಿದ್ದ ಫರ್ಟಿಲೈಸರ್ ಫ್ಯಾಕ್ಟರಿಗಳನ್ನು ಪುನಃಸ್ಥಾಪಿಸಲಾಗಿತ್ತು.
ನವದೆಹಲಿ, ಮಾರ್ಚ್ 01: ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್ನ ಧನಬಾದ್ನ ಸಿಂದ್ರಿಯಲ್ಲಿ ಸ್ಥಗಿತಗೊಂಡಿದ್ದ ರಸಗೊಬ್ಬರ ಕಾರ್ಖಾನೆಗೆ (Sindri fertilizer unit) ಮರುಜೀವ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈ ಘಟಕ ಮತ್ತೆ ಚಾಲನೆ ಪಡೆದಿದೆ. ಜಾರ್ಖಂಡ್ ಭೇಟಿಯಲ್ಲಿರುವ ಪ್ರಧಾನಿಗಳು ಇಂದು ಸಿಂದ್ರಿ ರಸಗೊಬ್ಬರ ಕಾರ್ಖಾನೆಯನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ. ಇಂದು ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಜೊತೆ ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್, ಜಾರ್ಖಂಡ್ ಮುಖ್ಯಮಂತ್ರಿ ಚಂಪಾಯ್ ಸೊರೇನ್ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನಸುಖ್ ಮಾಂಡವೀಯ ಅವರು ಇರಲಿದ್ದಾರೆ.
20 ವರ್ಷಗಳಿಂದ ಕಾರ್ಯಸ್ಥಗಿಗೊಂಡಿದ್ದ ಸಿಂದ್ರಿ ಘಟಕದಲ್ಲಿ 2022ರ ನವೆಂಬರ್ 5ರಿಂದ ಯೂರಿಯಾ ಉತ್ಪಾದನೆ ನಡೆಯುತ್ತಿದೆ. 2002ರ ಡಿಸೆಂಬರ್ 31ರಂದು ಈ ಫ್ಯಾಕ್ಟರಿ ಬಂದ್ ಆಗಿತ್ತು. 2018ರಲ್ಲಿ ನರೇಂದ್ರ ಮೋದಿ ಅವರು ದೇಶಾದ್ಯಂತ ವಿವಿಧ ರಸಗೊಬ್ಬರ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವುದಾಗಿ ಹೇಳಿದ್ದರು. ಅದರಂತೆ ಸಿಂದ್ರಿ ಫ್ಯಾಕ್ಟರಿ ಸಿದ್ಧವಾಗಿದೆ. ಇದಕ್ಕೂ ಮುನ್ನ ಗೋರಖಪುರ್ ಮತ್ತು ರಾಮಗುಂಡಂನಲ್ಲಿದ್ದ ಯೂರಿಯಾ ಫ್ಯಾಕ್ಟರಿಗಳನ್ನೂ ಸರ್ಕಾರ ಪುನಶ್ಚೇತನಗೊಳಿಸಿದೆ.
2018ರಲ್ಲಿ ನರೇಂದ್ರ ಮೋದಿ ಸಿಂದ್ರಿ ಫ್ಯಾಕ್ಟರಿ ಪುನಶ್ಚೇತನಗೊಳಿಸುವುದಾಗಿ ನೀಡಿದ್ದ ಭರವಸೆ (ವಿಡಿಯೋ ನೋಡಿ)
The foundation stones for key development projects were laid during the public meeting in Jharkhand. This includes the revival of the Sindri Fertiliser Project, which is a part of our efforts to revive fertiliser plants in Eastern India. pic.twitter.com/MjLwHZgP1e
— Narendra Modi (@narendramodi) May 25, 2018
ಭಾರತಕ್ಕೆ ಯಾಕೆ ಮುಖ್ಯ ಈ ರಸಗೊಬ್ಬರ ಫ್ಯಾಕ್ಟರಿ?
ಭಾರತಕ್ಕೆ ಅಗತ್ಯ ಇರುವ ಹೆಚ್ಚಿನ ರಸಗೊಬ್ಬರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. 2021ರಲ್ಲಿ ಬಹಿರಂಗವಾದ ಮಾಹಿತಿ ಪ್ರಕಾರ 8 ಬಿಲಿಯನ್ ಡಾಲರ್ನಷ್ಟು ಮೊತ್ತದ ರಸಗೊಬ್ಬರವನ್ನು ಭಾರತ ಆಮದು ಮಾಡಿಕೊಂಡಿತ್ತು. ಚೀನಾ ದೇಶವೊಂದರಿಂದಲೇ 2.4 ಬಿಲಿಯನ್ ಡಾಲರ್ನಷ್ಟು ರಸಗೊಬ್ಬರ ಆಮದು ಮಾಡಿಕೊಳ್ಳಲಾಗಿದೆ. ಸೌದಿ ಅರೇಬಿಯಾ, ಓಮನ್, ಮೊರಾಕೋ ಮತ್ತು ರಷ್ಯಾ ಭಾರತಕ್ಕೆ ರಸಗೊಬ್ಬರ ರಫ್ತು ಮಾಡುವ ಇನ್ನಿತರ ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ರಸಗೊಬ್ಬರ ಕಾರ್ಖಾನೆಗಳ ಅಗತ್ಯತೆ ಬಹಳ ಇದೆ. ಇದರಿಂದ ಆಮದು ತಪ್ಪಿಸಬಹುದು, ರಸಗೊಬ್ಬರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಸೆಮಿಕಂಡಕ್ಟರ್ಗಳಿಂದ ಭಾರತಕ್ಕೆ ಏನು ಪ್ರಯೋಜನ, ಸಚಿವ ಅಶ್ವಿನಿ ವೈಷ್ಣವ್ ಪಾಠ ಕೇಳಿ
ಜಾರ್ಖಂಡ್ನಲ್ಲಿ 20 ವರ್ಷಗಳಿಂದ ಸ್ಥಗಿತಗೊಂಡಿದ್ದ ಸಿಂದ್ರಿ ರಸಗೊಬ್ಬರ ಫ್ಯಾಕ್ಟರಿಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸಿದಾಗ, ಅದರ ಹೊಣೆಯನ್ನು ಎಚ್ಯುಆರ್ಎಲ್ ಸಂಸ್ಥೆಗೆ ವಹಿಸಲಾಯಿತು. ಇದು ಸರ್ಕಾರಿ ಸ್ವಾಮ್ಯದ ವಿವಿಧ ಸಂಸ್ಥೆಗಳಿಂದ 2016ರಿಂದ ಜಂಟಿಯಾಗಿ ನಡೆಸಲಾಗುತ್ತಿರುವ ಸಂಸ್ಥೆಯಾಗಿದೆ. ಸಿಂದ್ರಿ ಫ್ಯಾಕ್ಟರಿ ಜಾಗದಲ್ಲಿ ಹೊಸ ಅಮೋನಿಯಾ ಯೂರಿಯಾ ಘಟಕವನ್ನು ಸ್ಥಾಪಿಸಲಾಗಿದೆ. ಒಂದು ವರ್ಷದಲ್ಲಿ 12.7 ಲಕ್ಷ ಟನ್ ಯೂರಿಯಾ ಉತ್ಪಾದನೆ ಈ ಘಟಕದಲ್ಲಿ ಆಗುವ ಸಾಮರ್ಥ್ಯ ಇದೆ. ಇಲ್ಲಿಂದ ಉತ್ಪಾದನೆಯಾಗುವ ಯೂರಿಯಾ ಕೇವಲ ಜಾರ್ಖಂಡ್ಗೆ ಮಾತ್ರವಲ್ಲ ನೆರೆಯ ರಾಜ್ಯಗಳಾದ ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್ಗಡ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ರೈತರಿಗೂ ಸಿಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ