ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ; ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆ ಬೆನ್ನಲ್ಲೇ ಮೋದಿ ಕಾಲೆಳೆದ ಕಾಂಗ್ರೆಸ್
75 ವರ್ಷವಾಗುತ್ತಿದ್ದಂತೆ ನಿವೃತ್ತಿ ತೆಗೆದುಕೊಳ್ಳಬೇಕು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧದ ಟೀಕಾಸ್ತ್ರವಾಗಿ ಬಳಸಿಕೊಂಡಿರುವ ವಿರೋಧ ಪಕ್ಷಗಳು ಮೋದಿಯ ಕಾಲೆಳೆಯುತ್ತಿವೆ. 'ಇದೆಂಥಾ ಘರ್ ವಾಪಸಿ!', 'ಬೇಗ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ', ಒಂದೇ ಕಲ್ಲಲ್ಲಿ ಎರಡು ಹಕ್ಕಿ' ಎಂದೆಲ್ಲ ಕಾಂಗ್ರೆಸ್ ಲೇವಡಿ ಮಾಡಿದೆ. ಆದರೆ, ಮೋಹನ್ ಭಾಗವತ್ ಹೇಳಿಕೆಗೆ ಬಿಜೆಪಿ ಇದುವರೆಗೂ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ನವದೆಹಲಿ, ಜುಲೈ 11: ’75 ವರ್ಷವಾಗುತ್ತಿದ್ದಂತೆ ಹಿಂದೆ ಸರಿಯಬೇಕು, ಕಿರಿಯ ನಾಯಕರಿಗೆ ದಾರಿ ಮಾಡಿಕೊಡಬೇಕು’ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿಕೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕಾಲಬಿಡಕ್ಕೆ ಬಂದಿದೆ. ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಮೊರೊಪಂತ್ ಪಿಂಗಲೆ 75 ವರ್ಷವಾದ ಕೂಡಲೆ ನಿವೃತ್ತಿ ಪಡೆಯಬೇಕೆಂದು ಹೇಳಿದ್ದರು ಎಂಬುದನ್ನು ಉಲ್ಲೇಖಿಸಿ ಮೋಹನ್ ಭಾಗವತ್ ಭಾಷಣ ಮಾಡಿದ್ದರು. ಅದು ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ನಲ್ಲಿ ಮೋಹನ್ ಭಾಗವತ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರಿಗೂ 75 ವರ್ಷ ತುಂಬಲಿದೆ. ಆದರೆ, ಬಿಜೆಪಿ ಮುಂದಿನ ಚುನಾವಣೆಯಲ್ಲೂ ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.
ಮೋಹನ್ ಭಾಗವತ್ ಅವರ ನಿವೃತ್ತಿ ವಯಸ್ಸಿನ ಬಗೆಗಿನ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳು ನರೇಂದ್ರ ಮೋದಿಯವರನ್ನು ಈ ಬಗ್ಗೆ ಪ್ರಶ್ನಿಸುತ್ತಿವೆ. ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಿವಸೇನೆಯ ಸಂಜಯ್ ರಾವತ್ ಕೂಡ ಪ್ರಧಾನಿ ಮೋದಿ ಅವರ ಸಂಭಾವ್ಯ ನಿವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Satta Sammelan: ಪ್ರಧಾನಿ ಮೋದಿಗೆ ಫಂಡಿಂಗ್ ಮಾಡುವವರೇ ನಮಗೂ ಹಣ ಕೊಡ್ತಾರೆ: ಪ್ರಶಾಂತ್ ಕಿಶೋರ್
ಮೋದಿ 2029ರವರೆಗೆ ಸರ್ಕಾರದ ನೇತೃತ್ವ ವಹಿಸಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದರು. ಆದರೆ, ಮೋಹನ್ ಭಾಗವತ್ ಹೇಳಿಕೆಯ ಹಿನ್ನೆಲೆಯಲ್ಲಿ ಮೋದಿಯ ಕಾಲೆಳೆದಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, “ಪ್ರಧಾನಿ ಮೋದಿ ಮತ್ತು ಮೋಹನ್ ಭಾಗವತ್ ಇಬ್ಬರೂ ತಮ್ಮ ಬ್ಯಾಗ್‌ಗಳನ್ನು ಎತ್ತಿಕೊಂಡು ಕಚೇರಿಯಿಂದ ಹೊರಹೋಗುವ ಸಮಯ ಬಂದಿದೆ. ಇನ್ನು ನೀವಿಬ್ಬರೂ ಬ್ಯಾಗ್ ಎತ್ತಿಕೊಂಡು ಪರಸ್ಪರ ಮಾರ್ಗದರ್ಶನ ಮಾಡಿಕೊಳ್ಳಿ” ಎಂದು ಲೇವಡಿ ಮಾಡಿದ್ದಾರೆ.
बेचारे अवार्ड-जीवी प्रधानमंत्री! कैसी घर वापसी है ये- लौटते ही सरसंघचालक के द्वारा याद दिला दिया गया कि 17 सितंबर 2025 को वे 75 साल के हो जाएंगे।
लेकिन प्रधानमंत्री सरसंघचालक से भी कह सकते हैं कि -वे भी तो 11 सितंबर 2025 को 75 के हो जाएंगे!
एक तीर, दो निशाने!
— Jairam Ramesh (@Jairam_Ramesh) July 11, 2025
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರಧಾನಿ ಮೋದಿ ಅವರನ್ನು “ಪ್ರಶಸ್ತಿ ವಿಜೇತ ಕಳಪೆ ಪ್ರಧಾನಿ!” ಎಂದು ಟೀಕಿಸಿದ್ದಾರೆ. “ಇದೆಂತಹ ಘರ್ ವಾಪಸಿ! ಆರ್‌ಎಸ್‌ಎಸ್ ಮುಖ್ಯಸ್ಥರು ಸೆಪ್ಟೆಂಬರ್ 17ಕ್ಕೆ ತಮಗೆ 75 ವರ್ಷ ತುಂಬುತ್ತದೆ ಎಂದು ನೆನಪಿಸಿದ್ದಾರೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯೂ ತಮಗೆ ಸೆಪ್ಟೆಂಬರ್ 11ಕ್ಕೆ 75 ವರ್ಷ ತುಂಬುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಹೇಳಬಹುದು!” ಎಂದಿದ್ದಾರೆ.
ಇದನ್ನೂ ಓದಿ: ’75ನೇ ವರ್ಷಕ್ಕೆ ನಿವೃತ್ತಿ’; ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆಗೂ ಮೋದಿಗೂ ಇದೆಯಾ ಸಂಬಂಧ?
“ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಕೂಡ, ಬಿಜೆಪಿಯ ಹಿರಿಯ ನಾಯಕರನ್ನು 75 ವರ್ಷ ತುಂಬಿದ ನಂತರ ಬದಿಗಿಡುವ ಅದೇ ನಿವೃತ್ತಿ ನಿಯಮವನ್ನು ಪ್ರಧಾನಿ ಮೋದಿ ತಮ್ಮ ಮೇಲೂ ಅನ್ವಯಿಸಿಕೊಳ್ಳುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ. “ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಜಸ್ವಂತ್ ಸಿಂಗ್ ಅವರಂತಹ ನಾಯಕರನ್ನು 75 ವರ್ಷ ತುಂಬಿದ ನಂತರ ಪ್ರಧಾನಿ ಮೋದಿ ನಿವೃತ್ತಿ ಹೊಂದುವಂತೆ ಒತ್ತಾಯಿಸಿದರು. ಅವರು ಈಗ ಅದೇ ನಿಯಮವನ್ನು ತಮಗೆ ಅನ್ವಯಿಸಿಕೊಳ್ಳುತ್ತಾರೆಯೇ ಎಂದು ನೋಡೋಣ” ಎಂದು ಅವರು ಹೇಳಿದ್ದಾರೆ.
#WATCH | Delhi: On RSS Chief Mohan Bhagwat’s statement that ‘leaders should retire at 75’, Shiv Sena (UBT) MP Priyanka Chaturvedi says, “It is a clear message and it is clearly directed at the person who is going to celebrate his 75th birthday in September… Whatever is going on… pic.twitter.com/WflAyHDhlB
— ANI (@ANI) July 11, 2025
ಆದರೆ, ಪ್ರತಿಪಕ್ಷಗಳು ಈ ಹೇಳಿಕೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಸ್ಪಷ್ಟ ಘರ್ಷಣೆಯ ಪ್ರತಿಬಿಂಬವಾಗಿ ಬಿಂಬಿಸುತ್ತಿವೆ. ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಇದು “ಸ್ಪಷ್ಟ ಸಂದೇಶ”. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಏನು ನಡೆಯುತ್ತಿದೆ ಎಂಬುದು ಮೋಹನ್ ಭಾಗವತ್ ಅವರ ಹೇಳಿಕೆಗಳಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. 2014ರಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗ ಅವರು 75 ವರ್ಷಕ್ಕಿಂತ ಮೇಲ್ಪಟ್ಟ ತಮ್ಮ ನಾಯಕರನ್ನು ‘ಮಾರ್ಗದರ್ಶಕ ಮಂಡಳಿ’ಯಲ್ಲಿ ಇರಿಸಿದ್ದರು. ಈಗ, ಆರ್‌ಎಸ್‌ಎಸ್ 11 ವರ್ಷಗಳ ನಂತರ ಬಿಜೆಪಿಗೆ ತಾನು ನೀಡಿದ ಭರವಸೆಗಳ ಬಗ್ಗೆ ನೆನಪಿಸುತ್ತಿದೆ. ಆಂತರಿಕ ಸಂಘರ್ಷಗಳು ಈಗ ಸಾರ್ವಜನಿಕವಾಗಿವೆ. ಈ ಸಂಘರ್ಷದ ಪರಿಣಾಮ ಏನಾಗಬಹುದು ಎಂಬುದು ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




