ಚೆನ್ನೈ: ತಮಿಳುನಾಡಿನಲ್ಲಿ ಹಿಂದಿ ಹೇರಿಕೆ (Hindi imposition) ಪ್ರಯತ್ನಗಳ ವಿರುದ್ಧ ನಡೆದ ಸಾರ್ವಜನಿಕ ಸಭೆಯಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (DMK) ಸಂಸದ ಟಿಕೆಎಸ್ ಇಳಂಗೋವನ್ (TKS Elangovan) ಅವರು ಜಾತಿ ನಿಂದನೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದಿ ನಮ್ಮನ್ನು ಶೂದ್ರರನ್ನಾಗಿ ಮಾಡುತ್ತದೆ. ಇದರಿಂದ ನಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಅದು ನಮ್ಮ ನೆಲವನ್ನು ಪ್ರವೇಶಿಸಿದರೆ, ಅದು ಹಾನಿಯನ್ನುಂಟುಮಾಡುತ್ತದೆ. ಅದು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹಾಳು ಮಾಡುತ್ತದೆ ಮತ್ತು ನಮ್ಮ ಅಸ್ತಿತ್ವದಲ್ಲಿರುವ ಸಹೋದರತ್ವವನ್ನು ನಾಶಪಡಿಸುತ್ತದೆ, ಎಂದು ಇಳಂಗೋವನ್ ಶನಿವಾರ ಹೇಳಿದ್ದಾರೆ. ಸ್ವಾತಂತ್ರ್ಯಕ್ಕೆ ಮೊದಲು ಉತ್ತರ ಭಾರತದಲ್ಲಿ ವ್ಯಕ್ತಿಯೊಬ್ಬ ರಾಜನಾಗಬೇಕಿದ್ದರೆ ವರ್ಣಾಶ್ರಮದ ಪ್ರಕಾರ ಆತ ಕ್ಷತ್ರಿಯನಾಗಿರಬೇಕು.ಆದರೆ ದಕ್ಷಿಣ ಭಾರತದಲ್ಲಿನ ಪರಿಸ್ಥಿತಿ ಅದಾಗಿರಲಿಲ್ಲ. ಜಗತ್ತಿನಲ್ಲಿ ಎಲ್ಲರನ್ನೂ ಸಮಾನವಲಾಗಿ ಕಾಣುವ ನಾಗರಿಕತೆ ಎಂದರೆ ಅದು ತಮಿಳು ಸಂಸ್ಕೃತಿ. ಈಗ ಅವರು ಅದನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಮನುಧರ್ಮ ತರುವುದಕ್ಕಾಗಿ ಅವರು ಹಿಂದಿ ಹೇರಿಕೆ ಮಾಡುತ್ತಿದ್ದಾರೆ. ನಾವು ಅದಕ್ಕೆ ಅನುಮತಿಸಬಾರದು, ಹಾಗೆ ನಾವು ಅನುಮತಿಸಿದರೆ ನಾವು ಗುಲಾಮ ಶೂದ್ರರಾಗುತ್ತೇವೆ ಎಂದಿದ್ದಾರೆ.
ಹಿಂದಿ ಕಲಿಯುವ ಅಗತ್ಯವೇ ಇಲ್ಲ ಎಂದು ವಾದಿಸಿದ ಡಿಎಂಕೆ ನಾಯಕ, ಅಭಿವೃದ್ಧಿಹೊಂದಿದ ಕೆಲವು ರಾಜ್ಯಗಳಲ್ಲಿ ಹಿಂದಿ ಪ್ರಥಮ ಭಾಷೆಯೇ ಅಲ್ಲ. ಅಭಿವೃದ್ಧಿ ಹೊಂದದ ರಾಜ್ಯಗಳಾದ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ ಹಿಂದಿ ಪ್ರಥಮ ಭಾಷೆಯಾಗಿದೆ. ಹೀಗಿರುವಾಗ ನಾವೇಕೆ ಹಿಂದಿಕಲಿಯಬೇಕು ಎಂದು ಸಚಿವರು ಕೇಳಿದ್ದಾರೆ. ಸಂಸದರ ಪ್ರಕಾರ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ , ಕರ್ನಾಟಕ,ಗುಜರಾತ್ ಮತ್ತು ಪಂಜಾಬ್ ಅಭಿವೃದ್ಧಿಹೊಂದಿದ ರಾಜ್ಯಗಳಾಗಿವೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 8:04 pm, Mon, 6 June 22