National Voter’s Day 2022: ಇಂದು ರಾಷ್ಟ್ರೀಯ ಮತದಾರರ ದಿನ; ಆಚರಣೆಗೆ ಕಾರಣವೇನು? ಯಾವಾಗಿಂದ ಶುರುವಾಯಿತು? -ಇಲ್ಲಿದೆ ಮಾಹಿತಿ

National Voter's Day 2022: ಇಂದು ರಾಷ್ಟ್ರೀಯ ಮತದಾರರ ದಿನ; ಆಚರಣೆಗೆ ಕಾರಣವೇನು? ಯಾವಾಗಿಂದ ಶುರುವಾಯಿತು? -ಇಲ್ಲಿದೆ ಮಾಹಿತಿ
ರಾಷ್ಟ್ರೀಯ ಮತದಾರರ ದಿನದ ಸಾಂಕೇತಿಕ ಚಿತ್ರ

ಮತದಾನಕ್ಕೆ ಅರ್ಹರಾದ ಎಲ್ಲರನ್ನೂ ಒಳಗೊಂಡು, ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟು ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡುವುದು ಪ್ರಸಕ್ತ ವರ್ಷದ ಮತದಾರರ ದಿನದ ಥೀಮ್ ಆಗಿದೆ.

TV9kannada Web Team

| Edited By: Lakshmi Hegde

Jan 25, 2022 | 1:13 PM

ಇಂದು ರಾಷ್ಟ್ರೀಯ ಮತದಾರರ ದಿನ (National Voter’s Day). ದೇಶದಲ್ಲಿ ನಡೆಯುವ ಎಲ್ಲ ವಿಧದ ಚುನಾವಣೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ 18 ವರ್ಷ ಮೇಲ್ಪಟ್ಟ ನಾಗರಿಕರನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ಮೊಟ್ಟಮೊದಲು ಮತದಾನ ಮಾಡುವವರಿಗೆ ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ.  ಈ ವರ್ಷ ಆಚರಿಸುತ್ತಿರುವುದು 12ನೇ ವರ್ಷದ ಮತದಾರರ ದಿನವಾಗಿದೆ.  ಈ ಬಾರಿಯ ಮತದಾರರ ದಿನವನ್ನು ‘ಮತದಾರರನ್ನು ಸಶಕ್ತರನ್ನಾಗಿ, ಜಾಗರೂಕರನ್ನಾಗಿ, ಸುರಕ್ಷಿತರನ್ನಾಗಿ ಮಾಡುವ ಜತೆ, ಅವರಿಗೆ ಮತದಾನದ ಬಗ್ಗೆ ತಿಳಿವಳಿಕೆ ಮೂಡಿಸುವ’ ವಿಷಯದ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. 

ಇತಿಹಾಸ: ರಾಷ್ಟ್ರೀಯ ಮತದಾರರ ದಿನವನ್ನು 2011ರ ಜನವರಿ 25ರಿಂದ ಆಚರಿಸಲಾಗುತ್ತಿದೆ. ಕಾನೂನು ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅಂದಿನ ಪ್ರಧಾನಮಂತ್ರಿ ಮನಮೋಹನ್​ ಸಿಂಗ್​ ಅವರು 2011ರಲ್ಲಿ ಅನುಮೋದನೆ ಕೊಟ್ಟ ಬಳಿಕ, ಅಂದಿನಿಂದಲೂ ರಾಷ್ಟ್ರೀಯ ಮತದಾರರ ದಿನದ ಆಚರಣೆ ನಡೆಯುತ್ತಿದೆ.  18 ವರ್ಷ ಆಗಿ, ಮೊದಲ ಬಾರಿಗೆ ಮತದಾನ ಮಾಡುವವರು ತಮ್ಮ ಮತ ಚಲಾಯಿಸಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಅವರಲ್ಲಿ ಮತದಾನದ ಅರಿವು ಮೂಡಿಸುವ ಅಗತ್ಯವಿದೆ ಎಂದು ಅಂದಿನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾದ ಅಂಬಿಕಾ ಸೋನಿ ಹೇಳಿದ್ದರು.  ಹೀಗಾಗಿ ಚುನಾವಣಾ ಆಯೋಗದಿಂದ ಅಂದಿನಿಂದಲೂ ಪ್ರತಿವರ್ಷವೂ, ಮೊದಲ ಬಾರಿ ಮತ ಚಲಾಯಿಸುವವರಿಗೆ ಜನವರಿ 25ರ ರಾಷ್ಟ್ರೀಯ ಮತದಾರರ ದಿನದಂದು ಅವರ ಫೋಟೋವುಳ್ಳ ಮತದಾನ ಕಾರ್ಡ್​ನ್ನು ನೀಡಲಾಗುತ್ತದೆ.

ಈ ವರ್ಷದ ಥೀಮ್​ ಏನು? ರಾಷ್ಟ್ರೀಯ ಮತದಾರರ ದಿನವನ್ನು ಪ್ರತಿವರ್ಷವೂ ಒಂದೊಂದು ಥೀಮ್​​ನೊಂದಿಗೆ ಆಚರಿಸಲಾಗುತ್ತದೆ. ಮತದಾನಕ್ಕೆ ಅರ್ಹರಾದ ಎಲ್ಲರನ್ನೂ ಒಳಗೊಂಡು, ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟು ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡುವುದು ಪ್ರಸಕ್ತ ವರ್ಷದ ಮತದಾರರ ದಿನದ ಥೀಮ್ ಆಗಿದೆ.  ಇಂದಿನ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮುಖ್ಯ ಅತಿಥಿಯಾಗಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಲಿದ್ದಾರೆ ಎಂದು ಹೇಳಲಾಗಿದ್ದು,  ಕೇಂದ್ರ ಕಾನೂನು ಇಲಾಖೆ ಸಚಿವ ಕಿರಣ್​ ರಿಜಿಜು ಅವರು, ಗೌರವ ಅತಿಥಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ 2021-22ನೇ ಸಾಲಿನ ಅತ್ಯುತ್ತಮ ಚುನಾವಣಾ ಕಾರ್ಯಕ್ಷಮತೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂದರೆ, ಚುನಾವಣೆಯ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಜಿಲ್ಲಾ, ರಾಜ್ಯಮಟ್ಟದ ಅಧಿಕಾರಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಕೂ ದಿಂದ ಮಾರ್ಗಸೂಚಿ ಬಿಡುಗಡೆ ರಾಷ್ಟ್ರೀಯ ಮತದಾರರ ದಿನವಾದ ಇಂದು ಕೂ ಮೈಕ್ರೋಬ್ಲಾಗಿಂಗ್​ ಸೈಟ್​ ಬಹುಭಾಷಾ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಮೊಟ್ಟ ಮೊದಲಿಗೆ ಮತದಾನ ಮಾಡುವವರು ತಿಳಿದುಕೊಳ್ಳಬೇಕಾದ ಮತದಾರರ ಹಕ್ಕು ಮತ್ತು ಜವಾಬ್ದಾರಿಗಳನ್ನು ಈ ಬಹು ಭಾಷೆಯ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಕೆಲವೇ ದಿನಗಳಲ್ಲಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಹಿನ್ನೆಲೆಯಲ್ಲಿ ಕೂ ಮಾರ್ಗದರ್ಶಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ರೈಲು ಹತ್ತಲು ಹೋಗಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ; ವಿಡಿಯೊ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada