ಟರ್ಕಿಯಿಂದ ಜಾಗತಿಕ ಮಾದಕವಸ್ತು ದಂಧೆಯ ಕಿಂಗ್ಪಿನ್ ನವಪ್ರೀತ್ ಸಿಂಗ್ ಹಸ್ತಾಂತರ; ಅಮಿತ್ ಶಾ ಘೋಷಣೆ
ಮಾದಕವಸ್ತು ಕಳ್ಳಸಾಗಣೆಯ ಕಿಂಗ್ಪಿನ್ ನವಪ್ರೀತ್ ಸಿಂಗ್ ಅವರನ್ನು ಟರ್ಕಿಯಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಅಕ್ಟೋಬರ್ 3) ಇದನ್ನು ಘೋಷಿಸಿದ್ದಾರೆ. ಈ ವೇಳೆ ಅವರು ಮೋದಿ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಇದನ್ನು ಐತಿಹಾಸಿಕ ಸಾಧನೆ ಎಂದು ಕರೆದಿದ್ದಾರೆ. ಡಿಸೆಂಬರ್ 2029ರೊಳಗೆ ಪ್ರತಿಯೊಂದು ನಾರ್ಕೊ-ಕಾರ್ಟೆಲ್ ಅನ್ನು ನಿರ್ಮೂಲನೆ ಮಾಡಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ನಕಲಿ ಗುರುತು ಮತ್ತು ಟರ್ಕಿಶ್ ಪೌರತ್ವವನ್ನು ಬಳಸಿದ್ದರೂ ಸಹ ಭಾರತೀಯ ಸಂಸ್ಥೆಗಳು ನವಪ್ರೀತ್ ಸಿಂಗ್ ಅವರನ್ನು ಪತ್ತೆಹಚ್ಚಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನವದೆಹಲಿ, ಅಕ್ಟೋಬರ್ 3: ಹಲವಾರು ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜಾಗತಿಕ ಮಾದಕವಸ್ತು ದಂಧೆಯ ಸೂತ್ರಧಾರ ನವಪ್ರೀತ್ ಸಿಂಗ್ ಎಂಬ 34 ವರ್ಷದ ವ್ಯಕ್ತಿಯನ್ನು ಟರ್ಕಿಯಿಂದ ಗಡಿಪಾರು ಮಾಡಿ ಇಂದು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಘೋಷಿಸಿದ್ದಾರೆ.
“ನವಾಬ್ ವಿರ್ಕ್ ಎಂಬ ನಕಲಿ ಗುರುತಿನ ಚೀಟಿ ಬಳಸಿ ಟರ್ಕಿಯ ಪೌರತ್ವ ಪಡೆದಿದ್ದ ನವಪ್ರೀತ್, ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೆರಾಯಿನ್ ಹಾಗೂ ಮೆಥಾಂಫೆಟಮೈನ್‌ನಂತಹ ಅಪಾಯಕಾರಿ ಮಾದಕದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ನಮ್ಮ ರಕ್ಷಣಾ ಮತ್ತು ತನಿಖಾ ಸಂಸ್ಥೆಗಳು ಆತನ ನೈಜ ಗುರುತನ್ನು ಪತ್ತೆಹಚ್ಚಿ, ಆತನ ಗಡಿಪಾರು ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಇಂದು ಆತನನ್ನು ಭಾರತಕ್ಕೆ ಕರೆತಂದು ಜೈಲಿಗೆ ಹಾಕಲಾಗಿದೆ” ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: ‘ಉತ್ತರ ಪ್ರದೇಶದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದ ನಿದ್ದೆಗೆಡಿಸಿದೆ’; ನೊಯ್ಡಾದಲ್ಲಿ ಅಮಿತ್ ಶಾ ಬಣ್ಣನೆ
ಈ ಬೆಳವಣಿಗೆಯನ್ನು ‘ಐತಿಹಾಸಿಕ ಮೈಲಿಗಲ್ಲು’ ಎಂದು ಬಣ್ಣಿಸಿರುವ ಗೃಹ ಸಚಿವ ಅಮಿತ್ ಶಾ, “ಡಿಸೆಂಬರ್ 2029ರ ವೇಳೆಗೆ ದೇಶದಲ್ಲಿರುವ ಪ್ರತಿಯೊಂದು ನಾರ್ಕೋ-ಕಾರ್ಟೆಲ್ (ಮಾದಕದ್ರವ್ಯ ಜಾಲ) ಅನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಮೋದಿ ಸರ್ಕಾರ ಬದ್ಧವಾಗಿದೆ” ಎಂದು ಪುನರುಚ್ಚರಿಸಿದ್ದಾರೆ.
ಪಂಜಾಬ್ ಮೂಲದ ಮಾಫಿಯಾ:
ಪಂಜಾಬ್ ಮೂಲದ 34 ವರ್ಷದ ನವಪ್ರೀತ್ ಸಿಂಗ್ ಜಾಗತಿಕ ಮಟ್ಟದ ಮಾದಕದ್ರವ್ಯ ಜಾಲದ ಮುಖ್ಯಸ್ಥನಾಗಿದ್ದ. ಭಾರತದಲ್ಲಿ ಈತನ ಕಳ್ಳಸಾಗಣೆ ಕಾರ್ಯಾಚರಣೆಗಳನ್ನು ಆತನ ಸೋದರಸಂಬಂಧಿ ಪ್ರಭ್‌ದೀಪ್ ಸಿಂಗ್ ಅಲಿಯಾಸ್ ‘ಹ್ಯಾರಿ’ ನೋಡಿಕೊಳ್ಳುತ್ತಿದ್ದ. 2021ರ 358 ಕೆಜಿ ಹೆರಾಯಿನ್ ವಶ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಮಾಜಿ ಅರೆಸೇನಾ ಪಡೆ ಸಿಬ್ಬಂದಿ ಪ್ರಭ್‌ದೀಪ್ ಸಿಂಗ್‌ನನ್ನು ಸಿಬಿಐ ಹಾಗೂ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಮೇ 13ರಂದು ಅಜರ್‌ಬೈಜಾನ್‌ನಿಂದ ಹಸ್ತಾಂತರಿಸಿಕೊಂಡು ಬಂದಿದ್ದವು.
Modi govt has achieved a historic milestone by securing the deportation of hardened narco-trafficking kingpin Navpreet Singh from Türkiye.
Obtaining Turkish citizenship under the fake identity of Navab Virk, he had continued to smuggle heroin and methamphetamine to India from…
— Amit Shah (@AmitShah) October 3, 2026
ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಜನವರಿ 2025ರಲ್ಲಿ ಕೇಂದ್ರ ಗೃಹ ಸಚಿವಾಲಯವು ‘ಭಾರತ್‌ಪೋಲ್’ ಎಂಬ ಏಕೀಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿತ್ತು. ಸಿಬಿಐ, ರಾಜ್ಯ ಪೊಲೀಸ್ ಮತ್ತು ಇಂಟರ್‌ಪೋಲ್ ನಡುವಿನ ಸಂಪರ್ಕವನ್ನು ಇದು ಸುಲಭಗೊಳಿಸಿದೆ. ಹಿಂದೆ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದ ಮಾಹಿತಿ ವಿನಿಮಯವು ಪ್ರಸ್ತುತ 10ರಿಂದ 20 ದಿನಗಳಲ್ಲಿ, ಹಲವು ಪ್ರಕರಣಗಳಲ್ಲಿ ಕೇವಲ 3ರಿಂದ 10 ದಿನಗಳಲ್ಲಿ ಪೂರ್ಣಗೊಳ್ಳುತ್ತಿದೆ.
ಇದನ್ನೂ ಓದಿ: ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ; ಗಾಂಜಾ ಪೆಡ್ಲರ್‌ಗಳ ಮೇಲೆ ಹದ್ದಿನ ಕಣ್ಣು
2019ರಿಂದ ಆಗಸ್ಟ್ 2026ರ ನಡುವೆ ಜಗತ್ತಿನ 36 ದೇಶಗಳಿಂದ ಒಟ್ಟು 288 ಪರಾರಿಯಾದ ಅಪರಾಧಿಗಳನ್ನು ಭಾರತಕ್ಕೆ ಕರೆತರಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ 2019ರಿಂದ 2026ರ ಅವಧಿಯಲ್ಲಿ ಪರಾರಿಯಾದ ಅಪರಾಧಿಗಳಿಗೆ ಸೇರಿದ 17,874 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಅಜರ್‌ಬೈಜಾನ್‌ನಿಂದ ಟರ್ಕಿಯವರೆಗೆ ತನಿಖೆ ಸಾಗಿದ್ದು ಹೇಗೆ?
2021ರಲ್ಲಿ ದಕ್ಷಿಣ ದೆಹಲಿಯಲ್ಲಿ ‘ರಿಜ್ವಾನ್ ಕಾಶ್ಮೀರಿ’ ಎಂಬಾತನ ಬಂಧನದೊಂದಿಗೆ ಈ ಪ್ರಕರಣದ ವಿಸ್ತೃತ ತನಿಖೆ ಆರಂಭವಾಯಿತು. ಈತನ ವಿಚಾರಣೆಯ ಸಮಯದಲ್ಲಿ ಅಫ್ಘಾನ್ ಪ್ರಜೆಗಳು ಹಾಗೂ ಭಾರತದ ಹಲವು ರಾಜ್ಯಗಳಿಗೆ ಹರಡಿಕೊಂಡಿದ್ದ ಜಾಲದ ಸುಳಿವು ಸಿಕ್ಕಿತ್ತು. ಹರಿಯಾಣದ ಫರೀದಾಬಾದ್‌ನಲ್ಲಿ ದಾಳಿ ನಡೆಸಿದ ತನಿಖಾ ಸಂಸ್ಥೆಗಳು, ಒಂದು ವಾಹನದಿಂದ 166 ಕೆಜಿ ಹಾಗೂ ಮತ್ತೊಂದು ವಾಹನದಿಂದ 115 ಕೆಜಿ ಸೇರಿದಂತೆ ಒಟ್ಟು ಬೃಹತ್ ಪ್ರಮಾಣದ ಹೆರಾಯಿನ್ ವಶಪಡಿಸಿಕೊಂಡಿದ್ದವು.
ಇಂಟರ್‌ಪೋಲ್ ರೆಡ್ ನೋಟಿಸ್ ಹೊಂದಿದ್ದ ನವಪ್ರೀತ್ ಸಿಂಗ್‌ನ ಸೋದರಸಂಬಂಧಿ ಪ್ರಭ್‌ದೀಪ್ ಸಿಂಗ್‌ನನ್ನು ಬಾಕು ನಗರದಲ್ಲಿ ಪತ್ತೆಹಚ್ಚಿದ ತನಿಖಾ ಸಂಸ್ಥೆಗಳು, ಮೇ ತಿಂಗಳಲ್ಲಿ ಸಿಬಿಐ, ದೆಹಲಿ ಪೊಲೀಸ್ ಮತ್ತು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯಾಚರಣೆಯ ಮೂಲಕ ಅಜರ್‌ಬೈಜಾನ್‌ನಿಂದ ಭಾರತಕ್ಕೆ ಹಸ್ತಾಂತರಿಸಿಕೊಂಡು ಬಂದಿದ್ದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




