ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು ಸೋಂಕಿತರ ಸಂಖ್ಯೆ ಉಲ್ಬಣಿಸುತ್ತಿದೆ. ಪರಿಣಾಮವಾಗಿ ವೈದ್ಯಕೀಯ ಸೌಲಭ್ಯಗಳ ಅಭಾವ ಸೃಷ್ಟಿಯಾಗಿದ್ದು ಗಂಭೀರಾವಸ್ಥೆಗೆ ತಲುಪಿದ ಹಲವು ಸೋಂಕಿತರು ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರಕದೆ ಜೀವ ಬಿಡುತ್ತಿದ್ದಾರೆ. ಭಾರತದ ಈ ಪರಿಸ್ಥಿತಿಯನ್ನು ಗಮನಿಸಿ ಹಲವು ದೇಶಗಳು ನೆರವಿಗೆ ಮುಂದಾಗಿದ್ದು ಹಾಂಕಾಂಗ್, ಐರ್ಲೆಂಡ್ ದೇಶಗಳು ಕೂಡಾ ಸಹಾಯ ಹಸ್ತ ಚಾಚಿವೆ. ಹಾಂಕಾಂಗ್‌ನಿಂದ ಭಾರತಕ್ಕೆ 300 ಆಕ್ಸಿಜನ್ ಸಾಂದ್ರಕ ಹಾಗೂ ಇತರ ವೈದ್ಯಕೀಯ ಉಪಕರಣ ಹೊತ್ತ ವಿಮಾನ ಆಗಮಿಸಿದ್ದು, ದೆಹಲಿಯ ವಿಮಾನ ನಿಲ್ದಾಣದಲ್ಲಿ ಈ ಪರಿಕರಗಳನ್ನು ಹೊತ್ತ ಇಂಡಿಗೋ ವಿಮಾನ ಬಂದಿಳಿದಿದೆ. ಈ ಉಪಕರಣಗಳು ಸದ್ಯದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಲಿವೆ. ಈಗಾಗಲೇ ನಾವು ಮಾಡುತ್ತಿರುವ ಕೆಲಸಕ್ಕೆ ಇನ್ನಷ್ಟು ಶಕ್ತಿ ಒದಗಿಸಿದಂತಾಗಿದೆ ಎಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದ ಎದುರಾದ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಭಾರತಕ್ಕೆ ಐರ್ಲೆಂಡ್ ದೇಶ ಕೂಡ ನೆರವು ನೀಡಲು ಮುಂದಾಗಿದೆ. ಐರ್ಲೆಂಡ್‌ನಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ 700 ಆಕ್ಸಿಜನ್ ಸಾಂದ್ರಕ, 365 ವೆಂಟಿಲೇಟರ್ ಆಗಮಿಸಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಛಿ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ, ಕಳೆದ ಸೋಮವಾರ (ಏಪ್ರಿಲ್ 26) ನ್ಯೂಯಾರ್ಕ್‌ನಿಂದ ಒಟ್ಟು 328 ಆಕ್ಸಿಜನ್ ಪೂರೈಕೆ ಪರಿಕರವನ್ನು ಹೊತ್ತು ತಂದ ಏರ್ ಇಂಡಿಯಾ ವಿಮಾನ ಭಾರತವನ್ನು ತಲುಪಿತ್ತು. ಜತೆಗೆ, ವಿಶ್ವದ ಇನ್ನಿತರ ದೇಶಗಳು ಸಹ ಈ ಸಂದರ್ಭದಲ್ಲಿ ಭಾರತಕ್ಕೆ ಹೆಗಲಾಗಲು ನಿರ್ಧರಿಸಿ ಮುಂದೆ ಬರುತ್ತಿವೆ.
ಇದನ್ನೂ ಓದಿ: ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಸಭೆ ಸಫಲ, ಭಾರತಕ್ಕೆ ನೆರವು ನೀಡಲು 135 ಸಿಇಓಗಳ ಒಪ್ಪಿಗೆ