ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆ; ಬೇರೆ ಜಾತಿಯವನೆಂದು ಅಳಿಯನನ್ನೇ ಕೊಚ್ಚಿ ಕೊಂದ ಮಾವ

ಮದುವೆಯಾದ ಮೂರೇ ತಿಂಗಳಿಗೆ ತಮಿಳುನಾಡಿನ 24 ವರ್ಷದ ವ್ಯಕ್ತಿಯನ್ನು ಮಾವ ಕೊಚ್ಚಿ ಕೊಂದಿದ್ದಾರೆ. ದಿಂಡಿಗಲ್ ಜಿಲ್ಲೆಯ ವಟ್ಟಲಕುಂಡಿಯಲ್ಲಿ ಅಂತರ್ಜಾತಿ ವಿವಾಹವಾಗಿದ್ದ ರಾಮಚಂದ್ರನ್ ಎಂಬ 24 ವರ್ಷದ ಯುವಕನನ್ನು ಆತನ ಹೆಂಡತಿಯ ತಂದೆಯೇ ಕೊಚ್ಚಿ ಕೊಂದಿದ್ದಾರೆ. ಅವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೂ ಅವರು ರಿಜಿಸ್ಟರ್ ಮದುವೆಯಾಗಿದ್ದರು.

ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆ; ಬೇರೆ ಜಾತಿಯವನೆಂದು ಅಳಿಯನನ್ನೇ ಕೊಚ್ಚಿ ಕೊಂದ ಮಾವ
Ramachandran

Updated on: Oct 14, 2025 | 9:41 PM

ದಿಂಡಿಗಲ್, ಅಕ್ಟೋಬರ್ 14; ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಆಘಾತಕಾರಿ ಮರ್ಯಾದಾ ಹತ್ಯೆ (Honour Killing) ಬೆಳಕಿಗೆ ಬಂದಿದೆ. ಬೇರೆ ಜಾತಿಯವನು ಎಂಬ ಕಾರಣಕ್ಕೆ ತನ್ನ ಮಗಳ ಗಂಡನನ್ನೇ ವ್ಯಕ್ತಿಯೊಬ್ಬರು ಕೊಚ್ಚಿ ಕೊಂದಿದ್ದಾರೆ. ಈ ಘಟನೆ ತೀವ್ರ ಆಘಾತವನ್ನುಂಟು ಮಾಡಿದೆ. ರಾಮಚಂದ್ರನ್ ದಿಂಡಿಗಲ್ ಜಿಲ್ಲೆಯ ವಟ್ಟಲಕುಂಡು ಬಳಿಯ ರಾಮನಾಯಕನ್ ಪಟ್ಟಿ ಎಂಬ ಗ್ರಾಮದವರು. 24 ವರ್ಷದ ಈ ಯುವಕ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಅವರಿಗೆ ಡೈರಿ ಫಾರ್ಮ್‌ನಲ್ಲಿ ಚಂದ್ರನ್ ಅವರ ಮಗಳು ಆರತಿ ಪರಿಚಯವಾಯಿತು. 21 ವರ್ಷದ ಆಕೆ 2ನೇ ವರ್ಷದ ಡಿಗ್ರಿ ಓದುತ್ತಿದ್ದರು. ಆರಂಭದಲ್ಲಿ, ಇಬ್ಬರೂ ಸ್ನೇಹಿತರಾಗಿದ್ದರು. ಆದರೆ ಕಾಲಾನಂತರದಲ್ಲಿ ಅವರಿಬ್ಬರ ನಡುವೆ ಪ್ರೀತಿ ಬೆಳೆಯಿತು. ಅವರು ಇನ್‌ಸ್ಟಾಗ್ರಾಮ್ ಮೂಲಕ ತಮ್ಮ ಪ್ರೀತಿಯನ್ನು ಬೆಳೆಸಿಕೊಂಡರು. ಕೊನೆಗೆ ಅವರಿಬ್ಬರ ಮನೆಯಲ್ಲಿ ಪ್ರೇಮ ಪ್ರಕರಣ ಬೆಳಕಿಗೆ ಬಂದಿತು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ ಎರಡೂ ಕುಟುಂಬಗಳು ಅವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದವು. ಕೊನೆಗೆ ಅವರಿಬ್ಬರೂ ರಿಜಿಸ್ಟರ್ ಮದುವೆಯಾದರು.

ಇದನ್ನೂ ಓದಿ: ಮರ್ಯಾದಾ ಹತ್ಯೆ; ಅಂತರ್ಜಾತಿ ವಿವಾಹವಾದ ಮಗಳಿಗೆ ಬೆಂಕಿ ಹಚ್ಚಿ ಕೊಂದ ತಂದೆ

ರಾಮಚಂದ್ರನ್ ಮನೆಯವರು ಅವರಿಬ್ಬರ ಪ್ರೀತಿಯನ್ನು ಒಪ್ಪಿ ಸ್ವೀಕರಿಸಿದರು. ಆದರೆ ಆರತಿಯ ಮನೆಯವರು ಅವರ ಮದುವೆಯನ್ನು ಒಪ್ಪಿಕೊಳ್ಳಲಿಲ್ಲ. ತಮ್ಮ ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ಚಂದ್ರನ್ ಮನೆಯವರು ಕೋಪಗೊಂಡಿದ್ದರು. ಆ ದಂಪತಿಗೆ ಎರಡು ಬಾರಿ ಕೊಲೆ ಬೆದರಿಕೆ ಕೂಡ ಹಾಕಿದ್ದರು.

ನಿನ್ನೆ (ಅಕ್ಟೋಬರ್ 13) ಬೆಳಿಗ್ಗೆ ರಾಮಚಂದ್ರನ್ ಎಂದಿನಂತೆ ತನ್ನ ಬೈಕ್​ನಲ್ಲಿ ಹಾಲು ಮಾರಲು ಕುಲಿಪ್ಪಟ್ಟಿ ಗ್ರಾಮಕ್ಕೆ ಹೋಗುತ್ತಿದ್ದರು. ಆ ಸಮಯದಲ್ಲಿ ಆರತಿಯ ತಂದೆ ಚಂದ್ರನ್ ತನ್ನ ಅಳಿಯ ರಾಮಚಂದ್ರನ್ ದಾರಿಗೆ ಅಡ್ಡ ಹಾಕಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ಇದರಿಂದ ತಾಳ್ಮೆ ಕಳೆದುಕೊಂಡ ಚಂದ್ರನ್ ತಾನು ಅಡಗಿಸಿಟ್ಟಿದ್ದ ಕತ್ತಿಯಿಂದ ರಾಮಚಂದ್ರನ್​ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ಯುವತಿ ಅನುಮಾನಸ್ಪದ ಸಾವು: ಇದೊಂದು ಮರ್ಯಾದಾ ಹತ್ಯೆ ಎಂದ ಪ್ರಿಯಕರ!

ರಕ್ತದ ಮಡುವಿನಲ್ಲಿ ಬಿದ್ದು ಜೀವಕ್ಕಾಗಿ ಹೋರಾಡಿದ ರಾಮಚಂದ್ರನ್ ಸ್ವಲ್ಪ ಸಮಯದ ನಂತರ ಸ್ಥಳದಲ್ಲೇ ಸಾವನ್ನಪ್ಪಿದರು. ಮದುವೆಯಾದ ಮೂರೇ ತಿಂಗಳಲ್ಲಿ ರಾಮಚಂದ್ರನ್ ಸಾವನ್ನಪ್ಪಿದರು. ಈ ಘಟನೆಯ ಬಗ್ಗೆ ನೀಲಕೊಟ್ಟೈ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತ ರಾಮಚಂದ್ರನ್ ಅವರ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ದಿಂಡಿಗಲ್ ಜಿಲ್ಲಾ ಸರ್ಕಾರಿ ಪ್ರಧಾನ ಕಚೇರಿ ಆಸ್ಪತ್ರೆಗೆ ಕಳುಹಿಸಿದರು. ಜಾತಿ ಕಾರಣಕ್ಕೆ ಕೊಲೆ ನಡೆದಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದಾದ ನಂತರ ತಾನೇ ಕೊಲೆ ಮಾಡಿದ್ದಾಗಿ ಚಂದ್ರನ್ ದಿಂಡಿಗಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶರಣಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ