ದುರ್ಗಾಪುರ ಅತ್ಯಾಚಾರ ಪ್ರಕರಣ; ಅಕ್ಕನ ಜಾಣತನದಿಂದ ಸಿಕ್ಕಿಬಿದ್ದ ಮುಖ್ಯ ಆರೋಪಿ
ಪಶ್ಚಿಮ ಬಂಗಾಳದ ದುರ್ಗಾಪುರದ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಹಿಡಿಯಲು ಅತ್ಯಾಚಾರವೆಸಗಿದ ಆರೋಪಿಯ ಅಕ್ಕನೇ ಸಹಾಯ ಮಾಡಿದ್ದಾರೆ. ದುರ್ಗಾಪುರ ಅತ್ಯಾಚಾರ ಪ್ರಕರಣದ ಶಂಕಿತನ ಅಕ್ಕ ಪೊಲೀಸರಿಗೆ ಆತನನ್ನು ಬಂಧಿಸುವಲ್ಲಿ ಸಹಾಯ ಮಾಡಿದ್ದಾರೆ. ಐವರು ಆರೋಪಿಗಳು ಈಗ ಬಂಧನದಲ್ಲಿದ್ದಾರೆ. ಒಡಿಶಾದ ಜಲೇಶ್ವರದ 23 ವರ್ಷದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಶುಕ್ರವಾರ ರಾತ್ರಿ ಖಾಸಗಿ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ನ ಹೊರಗೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು.

ಕೊಲ್ಕತ್ತಾ, ಅಕ್ಟೋಬರ್ 14: ಪಶ್ಚಿಮ ಬಂಗಾಳದ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ಬಳಿ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದು ಪಶ್ಚಿಮ ಬಂಗಾಳದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಎಷ್ಟರಮಟ್ಟಿಗೆ ಇದೆ ಎಂಬುದರ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಇದೀಗ ಈ ಪ್ರಕರಣದ ಮುಖ್ಯ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರಿಗೆ ಆತನ ಅಕ್ಕನೇ ಸಹಾಯ ಮಾಡಿದ್ದಾರೆ.
ಇದು ಅಚ್ಚರಿಯಾದರೂ ಸತ್ಯ. ತನ್ನ ತಮ್ಮ ಅತ್ಯಾಚಾರ ಮಾಡಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆಕೆ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಮುಖ ಆರೋಪಿ ಸಫಿಕ್ ಅವರ ಅಕ್ಕ ರೋಜಿನಾ ಅವರೇ ದುರ್ಗಾಪುರದ ಆಂಡಾಲ್ ಸೇತುವೆಯ ಕೆಳಗೆ ಆತನನ್ನು ಪೊಲೀಸರಿಗೆ ಪತ್ತೆಹಚ್ಚಲು ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
“ಅವನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕೆಂದು ನಾನು ಬಯಸಿದ್ದೆ. ಅವನ ಕಾರಣದಿಂದಾಗಿ ನಮ್ಮ ಕುಟುಂಬವು ನಾಚಿಕೆಪಡಬಾರದು” ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಸಫಿಕ್ ನಡುಗುತ್ತಾ, ಆ ಸ್ಥಳದಿಂದ ಪರಾರಿಯಾಗಲು ಬೈಕ್ ಹತ್ತಿ ಪ್ರಯತ್ನಿಸಿದ್ದಾನೆ. ಆದರೆ, ಪೊಲೀಸರು ಆತನನ್ನು ಹಿಡಿದಿದ್ದಾರೆ.
ಇದನ್ನೂ ಓದಿ: ಕಿರುಚಿದರೆ ಇನ್ನಷ್ಟು ಹುಡುಗರನ್ನು ಕರೆಯುತ್ತೇನೆಂದರು; ಬಂಗಾಳದ ಅತ್ಯಾಚಾರದ ಭಯಾನಕತೆ ನೆನಪಿಸಿಕೊಂಡ ಸಂತ್ರಸ್ತೆ
ಈ ಮೂಲಕ ದುರ್ಗಾಪುರದ ಸಾಮೂಹಿಕ ಅತ್ಯಾಚಾರದ ಎಲ್ಲ ಐದು ಆರೋಪಿಗಳು ಈಗ ಬಂಧನದಲ್ಲಿದ್ದಾರೆ. ದುರ್ಗಾಪುರ ಬಾರ್ ಅಸೋಸಿಯೇಷನ್ ಆರೋಪಿಗಳ ಪರವಾಗಿ ಪ್ರತಿನಿಧಿಸಲು ನಿರಾಕರಿಸಿದೆ. ಕಾನೂನು ನೆರವು ವಕೀಲ ಪೂಜಾ ಕುರ್ಮಿ ಸಫಿಕ್ ಮತ್ತು ನಾಸಿರುದ್ದೀನ್ ಪರವಾಗಿ ವಕಾಲತ್ ಸಲ್ಲಿಸಿದರು. ಆದರೆ ಅವರು ಜಾಮೀನು ಕೋರಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:13 pm, Tue, 14 October 25




