ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ ಚೆನ್ನೈ ಆಸ್ಪತ್ರೆ, ಏಮ್ಸ್‌ಗೆ ಕರೆದೊಯ್ಯುವಂತೆ ಬಿಜೆಪಿ ಒತ್ತಾಯ

ಆಸ್ಪತ್ರೆಯಲ್ಲಿ ತಪಾಸಣೆಗೊಳಗಾದ ಸೆಂಥಿಲ್ ಅವರಿಗೆ ಕೊರೊನರಿ ಆಂಜಿಯೊಗ್ರಾಮ್ ನಡೆಸಿದ್ದು,  ಆದಷ್ಟು ಬೇಗ ಬೈಪಾಸ್ ಸರ್ಜರಿ  ನಡೆಸಲು ಆಸ್ಪತ್ರೆ ಸೂಚಿಸಿದೆ

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ ಚೆನ್ನೈ ಆಸ್ಪತ್ರೆ, ಏಮ್ಸ್‌ಗೆ ಕರೆದೊಯ್ಯುವಂತೆ ಬಿಜೆಪಿ ಒತ್ತಾಯ
ವಿ ಸೆಂಥಿಲ್ ಬಾಲಾಜಿ
ರಶ್ಮಿ ಕಲ್ಲಕಟ್ಟ

Updated on: Jun 14, 2023 | 1:21 PM

ಚೆನ್ನೈ: ತಮಿಳುನಾಡು (Tamil Nadu) ಸಚಿವ ಹಾಗೂ ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ (Senthil Balaji )ಅವರನ್ನು ಬುಧವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ED)ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆತಂದಾಗ ಸಚಿವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.  ಇಡಿ ಮಂಗಳವಾರ ಬಾಲಾಜಿ ಅವರ ಮನೆಯ ಮೇಲೆ ದಾಳಿ ನಡೆಸಿತ್ತು. ಗಂಟೆಗಳ ವಿಚಾರಣೆ ಬಳಿಕ ಇಂದು ಬೆಳಗ್ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವರನ್ನು ಬಂಧಿಸಲಾಯಿತು. ಬಂಧನದ ನಂತರ ತನಿಖಾ ಸಂಸ್ಥೆ ಬಾಲಾಜಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಂತೆ, ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ನಾಟಕೀಯ ದೃಶ್ಯ ನಡೆಯಿತು. ಹೊರಗೆ ಅವರ ಬೆಂಬಲಿಗರು ಜಾರಿ ನಿರ್ದೇಶನಾಲಯದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾಗ ಡಿಎಂಕೆ ನಾಯಕ ಆಂಬ್ಯುಲೆನ್ಸ್‌ನಲ್ಲಿ ಹೊರಳಾಡಿ ಅಳುತ್ತಿದ್ದರು. ಎದೆ ನೋವು ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾದ ಸೆಂಥಿಲ್ ಅವರಿಗೆ ಕೊರೊನರಿ ಆಂಜಿಯೊಗ್ರಾಮ್ ನಡೆಸಿದ್ದು,  ಆದಷ್ಟು ಬೇಗ ಬೈಪಾಸ್ ಸರ್ಜರಿ  ನಡೆಸಲು ಆಸ್ಪತ್ರೆ ಸೂಚಿಸಿದೆ ಎಂದು ಚೆನ್ನೈನಲ್ಲಿರುವ ತಮಿಳುನಾಡು ಸರ್ಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ  ಪ್ರಕಟಣೆ ತಿಳಿಸಿದೆ.

ಇಂದು ಬೆಳಗ್ಗೆ 10:40ಕ್ಕೆ ಸಚಿವ ಸೆಂಥಿಲ್ ಬಾಲಾಜಿ ಅವರಿಗೆ ಕೊರೊನರಿ ಆಂಜಿಯೋಗ್ರಾಮ್ ಮಾಡಲಾಗಿದೆ ಎಂದು ಒಮಂದೂರಾರ್ ಆಸ್ಪತ್ರೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಕೊರೊನರಿ ಆಂಜಿಯೋಗ್ರಾಮ್ ಮಾಡಿದಾಗ ಟ್ರಿಪಲ್ ವೆಸೆಲ್ ಡಿಸೀಸ್ ಇರುವುದು ಪತ್ತೆಯಾಯಿತು ಇದಕ್ಕಾಗಿ ಸಿಎಬಿಜಿ-ಬೈಪಾಸ್ ಸರ್ಜರಿಯನ್ನು ಆದಷ್ಟು ಬೇಗ ನಡೆಸಲು ಸೂಚಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.

ಇದನ್ನೂ ಓದಿ: V Senthil Balaji Profile: ಕರ್ನಾಟಕ ಕಾಂಗ್ರೆಸ್​ಗೆ ಡಿಕೆ ಶಿವಕುಮಾರ್ ಹೇಗೋ ತಮಿಳುನಾಡಿನ ಡಿಎಂಕೆಗೆ ಸೆಂಥಿಲ್ ಬಾಲಾಜಿ ಹಾಗೆ!

ಏತನ್ಮಧ್ಯೆ, ಸೆಂಥಿಲ್ ಬಾಲಾಜಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ನವದೆಹಲಿಗೆ ಸ್ಥಳಾಂತರಿಸಲು ಹಲವಾರು ಬಿಜೆಪಿ ನಾಯಕರು ಒತ್ತಾಯಿಸಿದ್ದು, ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯು ಮುಂದಿನ ಇಡಿ ಕ್ರಮದಿಂದ ಅವರನ್ನು ರಕ್ಷಿಸಲು ಪ್ರಯತ್ನಿಸಬಹುದು ಎಂದು ಹೇಳಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸೆಂಥಿಲ್ ಬಾಲಾಜಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ.. ನಮ್ಮ ನಾಯಕ ಹಾಗೂ ಮಾಜಿ ಸಚಿವ ಜಯಕುಮಾರ್ ಅವರನ್ನು ಬಂಧಿಸಿದಾಗ 20 ದಿನಗಳ ಕಾಲ ಜೈಲಿನಲ್ಲಿಟ್ಟಿದ್ದರು. ಔಷಧಗಳನ್ನು ಸೇವಿಸಲು ಸಹ ಅವರಿಗೆ ಅನುಮತಿ ಇರಲಿಲ್ಲ. ಸೆಂಥಿಲ್ ಬಾಲಾಜಿ ಈಗ ನಾಟಕ ಮಾಡುತ್ತಿದ್ದಾರೆ. ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಳನಿಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Wed, 14 June 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us