ಮತ್ತೆ ವಿವಾದದಲ್ಲಿ ಅಯೋಧ್ಯೆ ಶ್ರೀರಾಮಜನ್ಮಭೂಮಿ; ಸಿಬಿಐ, ಇಡಿ ತನಿಖೆಗೆ ಆಗ್ರಹಿಸಿದ ಎಸ್​ಪಿ, ಆಪ್​ ಪಕ್ಷಗಳು

ಶ್ರೀರಾಮಜನ್ಮಭೂಮಿ ಇದುವರೆಗೆ ಖರೀದಿ ಮಾಡಿದ ಎಲ್ಲ ಭೂಮಿಯನ್ನೂ ಮುಕ್ತ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲೇ ಖರೀದಿಸಿದೆ. ಇದೀಗ ಮಾಡುತ್ತಿರುವ ಆರೋಪಗಳೆಲ್ಲ ರಾಜಕೀಯ ಪ್ರೇರಿತ, ದ್ವೇಷಪೂರಿತವಾಗಿವೆ ಎಂದು ಚಂಪತ್ ರಾಯ್ ಹೇಳಿದ್ದಾರೆ.

ಮತ್ತೆ ವಿವಾದದಲ್ಲಿ ಅಯೋಧ್ಯೆ ಶ್ರೀರಾಮಜನ್ಮಭೂಮಿ; ಸಿಬಿಐ, ಇಡಿ ತನಿಖೆಗೆ ಆಗ್ರಹಿಸಿದ ಎಸ್​ಪಿ, ಆಪ್​ ಪಕ್ಷಗಳು
ಚಂಪತ್​ ರಾಯ್​
Updated By: Lakshmi Hegde

Updated on: Jun 14, 2021 | 9:12 AM

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಇನ್ನೂ ಸ್ವಲ್ಪ ಭೂಮಿಯನ್ನು ಮಾರ್ಚ್​​ನಲ್ಲಿಯೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಖರೀದಿ ಮಾಡಿದೆ. ಆದರೆ ಅದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ ಕೇಂದ್ರ ಸರ್ಕಾರ ಈ ಟ್ರಸ್ಟ್​ ರಚನೆ ಮಾಡಿತ್ತು. ಶ್ರೀರಾಮಂದಿರದ ಬಳಿ, ಗ್ರಂಥಾಲಯ, ಮ್ಯೂಸಿಯಂ, ರಾಮನ ಜೀವನ ಚರಿತ್ರೆ ತಿಳಿಸುವ ಫೋಟೋ ಗ್ಯಾಲರಿಯನ್ನು ನಿರ್ಮಾಣ ಮಾಡುವ ಯೋಜನೆಯನ್ನು ಇಟ್ಟುಕೊಂಡ ಟ್ರಸ್ಟ್​, ಸದ್ಯ ಇರುವ ಭೂಮಿಗೆ ಹೊಂದಿಕೊಂಡಂತೆ ಇರುವ ಇನ್ನೂ ಸ್ವಲ್ಪ ಭೂಮಿಯನ್ನು ಖರೀದಿ ಮಾಡಿತ್ತು. ಆದರೆ ಭೂ ಖರೀದಿ ಬಗ್ಗೆ ಸಮಾಜವಾದಿ ಪಾರ್ಟಿ, ಆಮ್​ ಆದ್ಮಿ ಪಕ್ಷಗಳು ಕ್ಯಾತೆ ತೆಗೆದಿವೆ. ಸಮಾಜವಾದಿ ಪಾರ್ಟಿ ಮುಖಂಡ ಮತ್ತು ಉತ್ತರ ಪ್ರದೇಶ ಮಾಜಿ ಸಚಿವ ಪವನ್​ ಪಾಂಡೆ ಭಾನುವಾರ ಸುದ್ದಿಗೋಷ್ಠಿ ನಡೆಸಿ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಭೂಮಿ ಖರೀದಿ ಮಾಡಿರುವ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಹಾಗೇ, ಆಪ್​ನ ಸಂಸದ ಸಂಜಯ್​ ಸಿಂಗ್ ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಮಾರ್ಚ್​ 18ರಂದು ಇಬ್ಬರು ರಿಯಲ್​ ಎಸ್ಟೇಟ್​​ ಡೀಲರ್​ಗಳು ಅಯೋಧ್ಯೆಯಲ್ಲಿ 1.208 ಹೆಕ್ಟೇರ್​ ಭೂಮಿಯನ್ನು 2 ಕೋಟಿ ರೂಪಾಯಿಗೆ ಖರೀದಿಸಿದರು. ಅದಾದ 10 ನಿಮಿಷಗಳಲ್ಲಿ, ಅದೇ ಭೂಮಿಯನ್ನು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ಗೆ 18.5 ಕೋಟಿ ರೂ.ಗೆ ಮಾರಾಟ ಮಾಡಲಾಯಿತು. ಅದು ಹೇಗೆ ಆ ಭೂಮಿಯ ಬೆಲೆ 5 ನಿಮಿಷಗಳಲ್ಲಿ 2 ಕೋಟಿ ರೂ.ದಿಂದ 18.5 ಕೋಟಿ ರೂ.ಗೆ ಏರಿಕೆಯಾಯಿತು ಎಂದು ಪಾಂಡೆ ಪ್ರಶ್ನಿಸಿದ್ದಾರೆ.

ಮೊದಲ ಬಾಬಾ ಹರಿದಾಸ್​ ಅವರು ಭೂಮಿಯನ್ನು ಸುಲ್ತಾನ್​ ಅನ್ಸಾರಿ ಮತ್ತು ರವಿ ಮೋಹನ್​​ ತಿವಾರಿಗೆ ಮಾರಾಟ ಮಾಡಿದರು. ಅವರಿಬ್ಬರು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗೆ ಮಾರಾಟ ಮಾಡಿದರು. ಈ ಖರೀದಿ, ಮಾರಾಟದ ಅಗ್ರಿಮೆಂಟ್ ಆಗುವಾಗ ಅಯೋಧ್ಯ ಮೇಯರ್​ ರಿಷಿಕೇಶ ಉಪಾಧ್ಯಾಯ ಮತ್ತು ಟ್ರಸ್ಟ್​​ನ ಟ್ರಸ್ಟೀ ಅನಿಲ್​ ಮಿಶ್ರಾ ಸಾಕ್ಷಿಗಿದ್ದಾರೆ ಎಂದೂ ಪವನ್​ ಪಾಂಡೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, 17 ಕೋಟಿ ರೂಪಾಯಿಯನ್ನು ಆ ಕ್ಷಣಕ್ಕೆ ಬ್ಯಾಂಕ್​ ಮೂಲಕ ಟ್ರಾನ್ಸ್​ಫರ್​ ಮಾಡಲಾಗಿದೆ. ಹೀಗೆ ಹಣ ವರ್ಗಾವಣೆ ಮಾಡಿದ್ಯಾರು? ಸ್ವೀಕರಿಸಿದ್ಯಾರು ಎಂಬ ಬಗ್ಗೆ ಸಿಬಿಐ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ. ರಾಮಮಂದಿರ ನಿರ್ಮಾಣದ ಹೆಸರಲ್ಲಿ ಶ್ರೀರಾಮನ ಭಕ್ತರನ್ನು ಲೂಟಿ ಮಾಡಲಾಗುತ್ತಿದೆ. ಅಯೋಧ್ಯೆ ಮೇಯರ್​, ಟ್ರಸ್ಟೀ ಅನಿಲ್​ ಮಿಶ್ರಾರಿಗೆ ಈ ಆಟಗಳೆಲ್ಲ ಗೊತ್ತು ಎಂದು ಪವನ್​ ಪಾಂಡೆ ಹೇಳಿದ್ದಾರೆ.

ಇಡಿ ತನಿಖೆಯೂ ಆಗಲಿ ಎಂದ ಆಪ್​

ಆಮ್​ ಆದ್ಮಿ ಪಕ್ಷದ ಸಂಸದ ಸಂಜಯ್​ ಸಿಂಗ್​ ಕೂಡ ಭಾನುವಾರ ಸುದ್ದಿಗೋಷ್ಠಿ ನಡೆಸಿ, ಅಯೋಧ್ಯೆಯಲ್ಲಿ ಭೂಖರೀದಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಪಕ್ಕಾ ಹಣ ಅಕ್ರಮ ವರ್ಗಾವಣೆಯ ಪ್ರಕರಣವಾಗಿದ್ದು, 2 ಕೋಟಿ ರೂ.18 ಕೋಟಿ ರೂ.ಆಗಿದ್ದು ಹೇಗೆ ಎಂಬುದು ತಿಳಿಯಬೇಕು. ಸಿಬಿಐ, ಜಾರಿ ನಿರ್ದೇಶನಾಲಯಗಳು ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರದ ಪ್ರತಿಕ್ರಿಯೆ ಏನು?
ಭೂಮಿ ಖರೀದಿ ಬಗ್ಗೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್​ ಪ್ರತಿಕ್ರಿಯೆ ನೀಡಿ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ವಿಶ್ವ ಹಿಂದ ಪರಿಷತ್​​ನ ಹಿರಿಯ ನಾಯಕರೂ ಆಗಿರುವ ಅವರು, ಕಳೆದ 100 ವರ್ಷಗಳಿಂದಲೂ ನಮ್ಮ ವಿರುದ್ಧ ಆರೋಪಗಳು ಸರ್ವೇ ಸಾಮಾನ್ಯ ಆಗಿಬಿಟ್ಟಿವೆ. ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ಆರೋಪವೂ ನಮ್ಮ ಮೇಲೆಯೇ ಇದೆ..ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದೇವೆ ಎಂದಿದ್ದಾರೆ.

ಶ್ರೀರಾಮಜನ್ಮಭೂಮಿ ಇದುವರೆಗೆ ಖರೀದಿ ಮಾಡಿದ ಎಲ್ಲ ಭೂಮಿಯನ್ನೂ ಮುಕ್ತ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲೇ ಖರೀದಿಸಿದೆ. ಇದೀಗ ಮಾಡುತ್ತಿರುವ ಆರೋಪಗಳೆಲ್ಲ ರಾಜಕೀಯ ಪ್ರೇರಿತ, ದ್ವೇಷಪೂರಿತವಾಗಿವೆ. 2019ರ ನವೆಂಬರ್​​ನಲ್ಲಿ ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ, ದೇಶದ ಅನೇಕ ಕಡೆಗಳಿಂದ ಜನರು ಅಯೋಧ್ಯೆಯಲ್ಲಿ ಭೂಮಿ ಖರೀದಿ ಮಾಡಲು ಬರತೊಡಗಿದರು. ಹಾಗಾಗಿ ಇಲ್ಲಿನ ಭೂಮಿಯ ಬೆಲೆಯೂ ಜಾಸ್ತಿಯಾಗಿದೆ. ನಾವೂ ಸಹ ಪರಸ್ಪರ ಒಪ್ಪಿಗೆ, ಮಾತುಕತೆಯ ಬಳಿಕವಷ್ಟೇ ಭೂಮಿ ಖರೀದಿ ಮಾಡಿದ್ದೇವೆ ಎಂದು ಚಂಪತ್​ ರಾಯ್​ ಒಂದು ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಬಾಣಸವಾಡಿಯಲ್ಲಿ ಕೊರೊನಾ ಸೋಂಕಿತ ವೃದ್ಧ ಮಹಿಳೆಯ ಚಿನ್ನದ ಸರ, ಮೊಬೈಲ್​ ಕಳವು; ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು

(How 2 crore rs up to 18 crore Rs in 5 minutes AAP SP question Ram temple land purchase)