ಬಾಣಸವಾಡಿಯಲ್ಲಿ ಕೊರೊನಾ ಸೋಂಕಿತ ವೃದ್ಧ ಮಹಿಳೆಯ ಚಿನ್ನದ ಸರ, ಮೊಬೈಲ್ ಕಳವು; ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು
Theft in Private Hospital: ಕಳೆದ ವಾರ ಈ ಸಂಬಂಧ ಮೃತ ಮಹಿಳೆ ಭವಾನಿ ಅವರ ಪುತ್ರ ಜಗನ್ನಾಥ ಅವರು ಬಾಣಸವಾಡಿ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದಾರೆ. ಸೆಕ್ಷನ್ 379 (ಕಳ್ಳತನ) ಅಡಿ ದೂರು ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಮಡಿಕೇರಿ ಸೇರಿದಂತೆ ರಾಜ್ಯ ಕೆಲ ಭಾಗಗಳಲ್ಲಿ ಕೊರೊನಾ ಸೋಂಕಿತರ ನಗನಾಣ್ಯಗಳನ್ನು ಆಸ್ಪತ್ರೆಗಳಲ್ಲಿಯೇ ಎಗರಿಸಿರುವ ಪ್ರಕರಣಗಳು ವರದಿಯಾಗಿವೆ. ಆದರೆ ಈಗ ರಾಜಧಾನಿ ಬೆಂಗಳೂರಿನಲ್ಲಿಯೂ ಇಂತಹ ಪ್ರಕರಣ ವರದಿಯಾಗಿದೆ. ಕೊರೊನಾ ಸೋಂಕಿನಿಂದ 85 ವರ್ಷದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರೆ ಅವರ ಚಿನ್ನದ ಸರ ಮತ್ತು ಮೊಬೈಲ್ ಅನ್ನು ಆಸ್ಪತ್ರೆಯ ಸಿಬ್ಬಂದಿಯೆ ಎಗರಿಸಿದ್ದಾರೆ. ಈ ಬಗ್ಗೆ ಸೆಕ್ಷನ್ 379 (ಕಳ್ಳತನ) ಅಡಿ ದೂರು ಸಹ ದಾಖಲಾಗಿದೆ. ಆತಂಕಕಾರಿ ಸಂಗತಿಯೆಂದರೆ ಆ ಮಹಿಳೆ ಬದುಕಿದ್ದಾಗಲೇ ಅವರ ವಸ್ತುಗಳನ್ನು ಆಸ್ಪತ್ರೆ ಸಿಬ್ಬಂದಿ ದೋಚಿದ್ದಾರೆ. ಸದರಿ ಮಹಿಳೆ ಮೃತಪಟ್ಟ ಮೇಲೆ ಪ್ರಕರಣ ಬೆಳಕಿಗೆ ಬಂದಿದ್ದು, ಕಳುವಾದ ವಸ್ತುಗಳು ಇನ್ನೂ ಅವರ ಮನೆಯವರಿಗೆ ತಲುಪಿಲ್ಲ.
ಇದೆಲ್ಲಾ ಆರಂಭ ಪಡೆದಿದ್ದು ಮೇ 11 ರಂದು. ಬಾಣಸವಾಡಿಯಲ್ಲಿ ವಾಸವಾಗಿರುವ ಎಂ. ಜಗನ್ನಾಥ (63) ಎಂಬುವವರ ತಾಯಿ ಭವಾನಿ (83) ಅವರು ವಯೋಸಹಜವಾಗಿ ಕೆಲ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರನ್ನು ಜಗನ್ನಾಥ ತಕ್ಷಣ ಕಮ್ಮನಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ವೇಳೆ ಭವಾನಿ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಮೇ 19ರಂದು ಅವರು ಕೊರೊನಾದಿಂದ ಮೃತರಾದರು. ಆ ವೇಳೆ ಅವರ ಚಿನ್ನದ ಸರವನ್ನಾಗಲಿ, ಮೊಬೈಲ್ ಅನ್ನಾಗಲಿ ಆಸ್ಪತ್ರೆ ಸಿಬ್ಬಂದಿ ಅವರ ಕುಟುಂಬಸ್ಥರಿಗೆ ವಾಪಸ್ ನೀಡಲಿಲ್ಲ.
ನಾನು ನಮ್ಮಮ್ಮನ ಜೊತೆ ವಿಡಿಯೋ ಕಾಲ್ಗಳ ಮೂಲಕ ಸಂಪರ್ಕದಲ್ಲಿದ್ದೆ. ಮೇ 16 ರಂದೇ ಚಿನ್ನದ ಸರ ಕಾಣೆಯಾಗಿರುವುದು ನನ್ನ ಗಮನಕ್ಕೆ ಬಂದಿತ್ತು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಸ್ಪತ್ರೆಯವರೇ ಸರವನ್ನು ತೆಗೆದಿಟ್ಟಿರಬಹುದು ಎಂದು ಭಾವಿಸಿದ್ದೆವು. ಆದರೆ ಆಕೆ ಮೃತಪಟ್ಟ ಮೇಲೂ ಆಸ್ಪತ್ರೆಯವರು ಅವರ ಬಳಿಯಿದ್ದ 50 ಸಾವಿರ ರೂ ಬೆಲೆಬಾಳುವ ಸರ ಮತ್ತು ಮೊಬೈಲ್ ಅನ್ನು ನಮಗೆ ವಾಪಸು ನೀಡಲಿಲ್ಲ. ಆಸ್ಪತ್ರೆಯ ಸಿಬ್ಬಂದಿಯೇ ಅವೆರಡನ್ನೂ ಎಗರಿಸಿದ್ದಾರೆ ಎಂದು ಜಗನ್ನಾಥ ಅವರು ಹೇಳಿಕೊಂಡಿದ್ದಾರೆ.
ಕಳೆದ ವಾರ ಈ ಸಂಬಂಧ ಜಗನ್ನಾಥ ಅವರು ಬಾಣಸವಾಡಿ ಪೊಲೀಸ್ ಸ್ಟೇಶನ್ನಲ್ಲಿ ದೂರು ದಾಖಲಿಸಿದ್ದಾರೆ. ಸೆಕ್ಷನ್ 379 (ಕಳ್ಳತನ) ಅಡಿ ದೂರು ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊರೊನಾದಿಂದ ಅಮ್ಮನನ್ನು ಬಾಲಕಿಯ ವಿಷಯದಲ್ಲಿ ಏನಾಯಿತು? ಮೊಬೈಲ್ ಸಿಕ್ತಾ?
ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಪುಟ್ಟ ಬಾಲಕಿ ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾಳೆ. ಮೊಬೈಲ್ನಲ್ಲಿ ನನ್ನ ಅಮ್ಮನ ನೆನಪುಗಳಿವೆ. ದಯವಿಟ್ಟು ಅಮ್ಮನ ಮೊಬೈಲ್ನ ಹಿಂದಿರುಗಿಸಿ ಎಂದು ತಾಯಿಯನ್ನು ಕಳೆದುಕೊಂಡ ಮಗಳು ಕೊಡಗು ಜಿಲ್ಲಾಧಿಕಾರಿಗೆ, ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ, ಶಾಸಕರಿಗೆ ಪತ್ರ ಬರೆದಿದ್ದಳು. ಅಮ್ಮನ ನೆನಪಿರುವ ಆ ಮೊಬೈಲ್ನ ನನಗೆ ಬೇಕು ಹುಡುಕಿಕೊಡಿ ಎಂದು ಪುಟ್ಟ ಹುಡುಗಿ ಅಂಗಲಾಚಿ ಕೇಳಿದ್ದಳು. ಆದರೆ ಮೊಬೈಲ್ ಇನ್ನು ಸಿಗಲೇ ಇಲ್ಲ.
ಅಮ್ಮನ ಮೊಬೈಲ್ಗಾಗಿ ಪರದಾಟ ಪಡುತ್ತಿರುವ ಮಗಳು ಹೃತಿಕ್ಷಾ ಮೊಬೈಲ್ ಖಂಡಿತಾ ಸಿಗುತ್ತದೆ ಎನ್ನುವ ಭರವಸೆಯಲ್ಲಿದ್ದಾಳೆ. ಪೊಲೀಸರು, ಜಿಲ್ಲಾಧಿಕಾರಿಗಳು ಮೊಬೈಲ್ ಹುಡುಕಿಕೊಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ ನನ್ನ ತಾಯಿಯ ನೆನಪುಗಳು ತಣ್ಣಗೆ ಉಳಿದಿವೆ. ಹೀಗಾಗಿ ನನಗೆ ಆ ಮೊಬೈಲ್ ಬೇಕೆ ಬೇಕು ಎಂದು ಟಿವಿ9 ಡಿಜಿಟಲ್ನೊಂದಿಗೆ ಮಾತನಾಡುತ್ತಾ ಹೃತಿಕ್ಷಾ ಬೇಸರ ವ್ಯಕ್ತಪಡಿಸಿದ್ದಾಳೆ.
(Kammanahalli private Hospital staff allegedly steal gold chain, mobile phone elder woman bhavani died of coronavirus in Banaswadi Bengaluru)
ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್!