ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾಗೆ ಬೆದರಿಕೆ ಹಾಕಿದ್ದ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಹೈದರಾಬಾದ್ ಮೂಲದ ಅಬ್ದುಲ್ ಮಜೀದ್ ಅತ್ತಾರ್ನನ್ನು ಹೈದರಾಬಾದ್ನ ಮೊಘಲ್ಪುರ ಪೊಲೀಸರು ಬಂಧಿಸಿದ್ದಾರೆ.
ಆತ ಮಜ್ಲಿಸ್ -ಎ-ಇಂಕ್ವಿಲಾಬ್-ಎ-ಮಿಲ್ಲಾದ ರಾಷ್ಟ್ರೀಯ ಸಂಚಾಲಕನಾಗಿದ್ದಾನೆ. ನೂಪುರ್ ಶರ್ಮಾ ಹೇಳಿಕೆಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಅಬ್ದುಲ್, ಆರೆಸ್ಸೆಸ್ ಮತ್ತು ಬಿಜೆಪಿಯ ಉನ್ನತ ನಾಯಕರು ಕ್ಷಮೆಯಾಚಿಸಲಿ ಎಂದು ಹೇಳಿದ್ದ.
ಕಮೆಂಟ್‌ಗಳಿಗೆ ಕ್ಷಮೆಯಾಚಿಸಲಿ ಅಥವಾ ಶಿರಚ್ಛೇದಕ್ಕೆ ಸಿದ್ಧರಾಗಿರಿ ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ ಆತ ಹಾಕಿದ್ದ ಎಂದು ಹೇಳಲಾಗಿದೆ.
ಅಬ್ದುಲ್ ಮಜಿದ್ ಅತ್ತಾರ್ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಉದ್ದೇಶ ಹಾಗೂ ಕೋಮು ದ್ವೇಷ ಮೂಡಿಸುವ ಉದ್ದೇಶದಿಂದ ಈ ಪೋಸ್ಟ್ ಮಾಡಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 153A,295-A,504,505(2),506-II ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
ಎರಡು ದಿನಗಳ ಹಿಂದಷ್ಟೇ ರಾಜಸ್ಥಾನದ ಉದಯ್ಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಟೈಲರ್ ಬೆಂಬಲ ಸೂಚಿಸಿ ಪೋಸ್ಟ್ ಒಂದನ್ನು ಹಾಕಿದ್ದರು.
ಹೀಗಾಗಿ ಯಾವುದೇ ಬೆದರಿಕೆ ಕರೆ, ಬೆದರಿಕೆ ಪೋಸ್ಟ್ಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Published On - 11:34 am, Thu, 30 June 22